ಹನಿ ನೀರಾವರಿ ಕೃಷಿಕರಿಗೆ ವರದಾನ

25 KAMPLI 02
ಕಂಪ್ಲಿ ತಾಲೂಕಿನ ಅರಳಿಹಳ್ಳಿ ಗ್ರಾಮದ ತೋಟದಲ್ಲಿ ಅಳವಡಿಸಿದ ಹನಿ ನೀರಾವರಿ.
Published on

ಕಂಪ್ಲಿ: ನೀರಿನ ಮಿತವ್ಯಯ ಸಾಧಿಸಲು ಹನಿ ನೀರಾವರಿ ವರದಾನವಾಗಿದ್ದು, ಜನಪ್ರಿಯಗೊಳಿಸಲು ತೋಟಗಾರಿಕೆ ಇಲಾಖೆ ಮುಂದಾಗಿದೆ. ತೋಟಗಾರಿಕೆಯಲ್ಲಿ ನೀರಿನ ಬಳಕೆ ಮಿತಗೊಳಿಸಿ, ಪರಿಣಾಮಕಾರಿಯಾಗಿ ನಿಧಾನ ಮತ್ತು ನೇರವಾಗಿ ಸಸ್ಯದ ಬೇರುಗಳಿಗೆ ತಲುಪಿಸುವ ಸೂಕ್ಷ್ಮ ನೀರಾವರಿ ವ್ಯವಸ್ಥೆಯಾಗಿದೆ. ಇದನ್ನು ರೈತರು ಅಳವಡಿಸಿಕೊಳ್ಳುವ ಅಗತ್ಯತೆಯಿದೆ.

ಹನಿ ನೀರಾವರಿ ಬೆಳೆಗೆ ನೀರುಣಿಸುವ ಪರಿಣಾಮಕಾರಿ ವಿಧಾನವಾಗಿದ್ದು, ನೀರು ವ್ಯರ್ಥವಾಗುವುದಿಲ್ಲ. ನೇರವಾಗಿ ಬೇರಿಗೆ ಕೊಡುವುದರಿಂದ ನೀರು ಹಾವಿಯಾಗದೆ, ನೆಲ ತೀವ್ರ ಆರ್ದ್ರತೆಗೊಳ್ಳುವುದಿಲ್ಲ. ಬೆಳೆಗಳಲ್ಲಿ ಶೇ.30ರಿಂದ ಶೇ.40ರಷ್ಟು ಇಳುವರಿ ಹೆಚ್ಚಳಗೊಳ್ಳುತ್ತದೆ. ಹನಿ ನೀರಾವರಿ ರಸಾವರಿ ಪದ್ಧತಿಯಿಂದ ಶೇ.40ರಷ್ಟು ರಾಸಾಯನಿಕ ಗೊಬ್ಬರ ಮಿತವ್ಯಯಗೊಳಿಸುತ್ತದೆ. ಶೇ.50ರಿಂದ ಶೇ.70ರಷ್ಟು ನೀರಿನ ಮಿತವ್ಯಯದೊಂದಿಗೆ, ಕಳೆ ನಿಯಂತ್ರಿಸಿ ಕೂಲಿ ವೆಚ್ಚ ಕಡಿಮೆಗೊಳಿಸುತ್ತದೆ. ಗಿಡದಿಂದ ಗಿಡಕ್ಕೆ ರೋಗ ಹರಡುವಿಕೆ ತಡೆಗಟ್ಟುವುದರಿಂದ ಹನಿ ನೀರಾವರಿ ಅಳವಡಿಕೆಗೆ ತೋಟಗಾರಿಕೆ ಇಲಾಖೆ ಹೆಚ್ಚು ಒತ್ತು ನೀಡಿದೆ.

ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನಡಿ ಪ್ರತಿ ಹನಿಗೆ ಅಧಿಕ ಬೆಳೆ(ಪರ್ ಡ್ರಾಪ್ ಪರ್ ಕ್ರಾಪ್)ಗಾಗಿ ಹನಿ ನೀರಾವರಿ ಅಳವಡಿಸಿಕೊಳ್ಳಲು ತೋಟಗಾರಿಕೆ ಇಲಾಖೆ ಎಲ್ಲ ವರ್ಗದ ರೈತರಿಗೆ ಶೇ.90ರಷ್ಟು ಸಹಾಯಧನ ದೊರಕುತ್ತಿದ್ದು, ಸದ್ಭಳಕೆ ಮಾಡಿಕೊಳ್ಳಬೇಕಿದೆ. ಏಳು ವರ್ಷಗಳ ಹಿಂದೆ ಹನಿ ನೀರಾವರಿ ಅಳವಡಿಸಿಕೊಂಡ ರೈತರು ಪುನಃ ಹೊಸದಾಗಿ ಹನಿ ನೀರಾವರಿ ಅಳವಡಿಸಿಕೊಳ್ಳುವ ಅವಕಾಶ ನೀಡಿದೆ.

ತೋಟಗಾರಿಕೆ ಇಲಾಖೆ ಸಮೀಕ್ಷೆಯಂತೆ ತಾಲೂಕಿನಲ್ಲಿ ಭೌಗೋಳಿಕ ವಿಸ್ತೀರ್ಣ 27,485ಹೆಕ್ಟರ್‌ನಷ್ಟಿದ್ದು, 19,669ಹೆಕ್ಟರ್‌ನಷ್ಟು ಸಾಗುವಳಿಯನ್ನೊಂದಿದೆ. ಇದರಲ್ಲಿ 2622ಹೆಕ್ಟರ್‌ನಷ್ಟು ತೋಟಗಾರಿಕೆ ವಿಸ್ತೀರ್ಣವನ್ನೊಂದಿದ್ದು, 2025ರ ಮಾರ್ಚ್ ವೇಳೆಗೆ 1500ಹೆಕ್ಟರ್‌ನಷ್ಟು ಹನಿ ನೀರಾವರಿಗೊಳಪಡಿಸಿದೆ. ಇನ್ನು 1050ಹೆಕ್ಟರ್‌ನಷ್ಟು ಪ್ರದೇಶಕ್ಕೆ ಹನಿ ನೀರಾವರಿ ಸೌಲಭ್ಯ ಕಲ್ಪಿಸುವ ಗುರಿ ಹೊಂದಿದೆ. ಹೆಚ್ಚಿನ ಮಾಹಿತಿಗೆ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಿ ಎಂದು ತೋಟಗಾರಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಬಳ್ಳಾರಿ

ಜೆ.ಶಂಕರ

ಹನಿ ನೀರಾವರಿ ಅಳವಡಿಸಿಕೊಳ್ಳಲು ಎಲ್ಲ ವರ್ಗದ ರೈತರಿಗೆ ಶೇ.90ರಷ್ಟು ಸಹಾಯಧನ ವಿದೆ. ಹೂ ತರಕಾರಿ 5ಎಕರೆಗೆ ಹಣ್ಣ ತೆಂಗು, ಅಡಿಕೆ ಸೇರಿ ಪ್ಲಾಂಟೇಷನ್ ಬೆಳೆಗೆ ಶೇ.90ರಷ್ಟು ಮೊದಲ 5ಎಕರೆಗೆ, ನಂತರ ಐದುಕಾಲಿನಿಂದ ಹನ್ನೆರಡುವರೆ ಎಕರೆವರೆಗೆ ಶೇ.45ಸಹಾಯಧನ ನೀಡಲಾಗುತ್ತದೆ. ಏಳು ವರ್ಷಗಳ ನಂತರ ಅದೇ ರೈತ, ಅದೇ ಸರ್ವೇನಂಬರಿಗೆ ಸಹಾಯಧನ ನೀಡಲಾಗುವುದು. ರೈತರು ಬಳಸಿಕೊಳ್ಳಲು ಮುಂದಾಗಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net