ಕೃಷಿಗೆ ಹನಿ ನೀರಾವರಿ ಪದ್ಧತಿ ಮುಖ್ಯ

7manju5
Published on

ಬೆಳಗಾವಿ: ಅತಿವೃಷ್ಟಿ, ಅನಾವೃಷ್ಟಿ ಸಂದರ್ಭದಲ್ಲಿ ಸರ್ಕಾರ ರೈತರ ನೆರವಿಗೆ ಬರಬೇಕು. ಕೃಷಿ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಸಿಗಬೇಕು. ಕೃಷಿ ಪರಿಕರ ವಿತರಕರು ರೈತಸ್ನೇಹಿಯಾಗಿ ನಡೆದುಕೊಳ್ಳಬೇಕು ಎಂದು ಕೆಎಲ್​ಇ ಸಂಸ್ಥೆಯ ನಿರ್ದೇಶಕ ಮಹಾಂತೇಶ ಕವಟಗಿಮಠ ಹೇಳಿದರು.

ಬೈಲಹೊಂಗಲ ತಾಲೂಕಿನ ಮತ್ತಿಕೊಪ್ಪದ ಕೆಎಲ್​ಇ ಕೃಷಿ ವಿಜ್ಞಾನ ಕೇಂದ್ರದ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಡಿಪ್ಲೊಮಾ ಪದವಿ ಕೋರ್ಸ್​ ಉದ್ಘಾಟನೆ, ಪ್ರಮಾಣಪತ್ರಗಳ ವಿತರಣೆ, ರಾಷ್ಟ್ರೀಯ ಖಾದ್ಯ ತೈಲ ಅಭಿಯಾನ ತರಬೇತಿ ಮತ್ತು ಗ್ರಾಮೀಣ ಕೃಷಿ ಕಾರ್ಯಾನುಭ ಶಿಬಿರದ ವಸ್ತು ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.

ಇಸ್ರೇಲ್​ ದೇಶದಲ್ಲಿ ಮೂರು ವರ್ಷಕ್ಕೊಮ್ಮೆ ಮಳೆಯಾಗುತ್ತದೆಯಾದರೂ ಅಲ್ಲಿನ ಕೃಷಿಕರು ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡು ಅಭಿವೃದ್ಧಿ ಹೊಂದಿದ್ದಾರೆ. ಆದರೆ, ಭಾರತದಲ್ಲಿ ಪ್ರತಿವರ್ಷ ಮಳೆಯಾದರೂ ನಿರೀತ ಪ್ರಗತಿಯಾಗುತ್ತಿಲ್ಲ. ಹೀಗಾಗಿ ಎಲ್ಲ ರೈತರು ಹನಿ ನೀರಾವರಿ ಪದ್ಧತಿಯತ್ತ ಗಮನ ಹರಿಸಬೇಕು ಮತ್ತು ಸಾವಯವ ಕೃಷಿಗೆ ಆದ್ಯತೆ ನೀಡಬೇಕು ಎಂದರು.

ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಪಿ.ಎಲ್​ ಪಾಟೀಲ ಮಾತನಾಡಿ, ಕೃಷಿ ವಿದ್ಯಾರ್ಥಿಗಳು ಪಡೆದ ಜ್ಞಾನ ಒರೆಗಲ್ಲಿಗೆ ಹಚ್ಚಿ ರೈತ ಸಮುದಾಯಕ್ಕೆ ತಂತ್ರಜ್ಞಾನ ಪರಿಚಯಿಸಬೇಕು. ದೇಶವು ಎಣ್ಣೆಕಾಳು ಆಮದು ಮಾಡಿಕೊಳ್ಳುತ್ತಿದ್ದು, ಹೆಚ್ಚು ಹೆಚ್ಚು ಎಣ್ಣೆ ಕಾಳು ಬೆಳೆದು ಸ್ವಾವಲಂಬಿಗಳಾಬೇಕು ಎಂದರು.

ಕೃಷಿ ವಿವಿ ವಿಸ್ತರಣೆ ನಿರ್ದೇಶಕ ಡಾ.ಎಂ.ವಿ.ಮಂಜುನಾಥ, ಕೃಷಿ ವಿಜ್ಞಾನ ಕೇಂದ್ರ ಮುಖ್ಯಸ್ಥ ಡಾ. ಮಂಜುನಾಥ ಚೌರಡ್ಡಿ, ಡಾ. ಎಸ್​.ಎನ್​.ಜಾಧವ, ಡಾ. ಎಸ್​.ಎಸ್​. ಹಿರೇಮಠ, ಎಸ್​.ಎಂ. ವಾರದ, ಜಿ.ಬಿ. ವಿಶ್ವನಾಥ, ಪ್ರವಿಣ ಯಡಹಳ್ಳಿ, ಶಂಕರಗೌಡ ಪಾಟೀಲ, ವಿನೋದ ಕೋಚಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net