ತೊಂಬೆಗೆ ಕುಡಿಯುವ ನೀರು ಪೂರೈಕೆ

10 HANUR 5
ಬಂಡಳ್ಳಿ ಗ್ರಾಮದ ಜೆಎಸ್‌ಎಸ್ ಶಾಲೆ ಮಾರ್ಗದಲ್ಲಿನ ತೊಂಬೆಗೆ ನೀರು ಪೂರೈಕೆ ಮಾಡಲಾಗಿದ್ದು, ಜನರು ನೀರು ಹಿಡಿಯುತ್ತಿರುವುದು.
Published on

ಹನೂರು: ತಾಲೂಕಿನ ಬಂಡಳ್ಳಿ ಗ್ರಾಮದ ಜೆಎಸ್‌ಎಸ್ ಶಾಲೆ ಮಾರ್ಗದಲ್ಲಿನ ತೊಂಬೆಗೆ ಗುರುವಾರ ಗ್ರಾಮ ಪಂಚಾಯಿತಿ ಆಡಳಿತ ಕುಡಿಯುವ ನೀರನ್ನು ಪೂರೈಕೆ ಮಾಡಿದ್ದು, ನಿವಾಸಿಗಳು ನಿಟ್ಟುಸಿರು ಬಿಟ್ಟಂತಾಗಿದೆ.

ಗ್ರಾಮದಲ್ಲಿ ಸುಮಾರು ಸಾವಿರಕ್ಕೂ ಹೆಚ್ಚು ಕುಟುಂಬಗಳಿದ್ದು, ಎಲ್ಲ ಬಡಾವಣೆಗಳ ತೊಂಬೆ ಹಾಗೂ ಕೊಳವೆ ನಲ್ಲಿಗಳಿಗೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ಆದರೆ ಕಳೆದ ನಾಲ್ಕೈದು ತಿಂಗಳಿನಿಂದ ಜೆಎಸ್‌ಎಸ್ ಶಾಲೆಗೆ ತೆರಳುವ ಮುಖ್ಯ ರಸ್ತೆ ಬದಿಯಲ್ಲಿನ ತೊಂಬೆ ಹಾಗೂ ನಲ್ಲಿಗಳಿಗೆ ನೀರು ಪೂರೈಕೆಯಾಗುತ್ತಿರಲಿಲ್ಲ. ಇದರಿಂದ ಕುಡಿಯುವ ನೀರಿನ ಸಮಸ್ಯೆ ಎದುರಾಗಿತ್ತು. ಇಲ್ಲಿನ ನಿವಾಸಿಗಳು ಇತರ ಬಡಾವಣೆಗೆ ತೆರಳಿ ನೀರನ್ನು ಹೊತ್ತು ತರಬೇಕಾದ ಪರಿಸ್ಥಿತಿ ಇತ್ತು. ಕೂಲಿ ಕೆಲಸಕ್ಕೆ ತೆರಳುವ ಜನರು ರಾತ್ರಿ ವೇಳೆ ನಿದ್ರೆಗೆಟ್ಟು ನೀರಿಗಾಗಿ ಸಮೀಪದ ಬಡಾವಣೆಗೆ ಬಿಂದಿಗೆಯನ್ನಿಡಿದು ಅಲೆಯುವಂತಾಗಿತ್ತು. ಇದರಿಂದ ಬಡಾವಣೆಯಲ್ಲಿ ಕುಡಿಯುವ ನೀರಿನದ್ದೇ ಒಂದು ದೊಡ್ಡ ಸಮಸ್ಯೆಯಾಗಿತ್ತು. ನೀರಿನ ಸಮಸ್ಯೆಯನ್ನು ಬಗೆಹರಿಸುವಂತೆ ಗ್ರಾಪಂ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಕಿಂಚಿತ್ತೂ ಗಮನಹರಿಸಿರಲಿಲ್ಲ.

ಈ ಬಗ್ಗೆ ಗುರುವಾರದ ವಿಜಯವಾಣಿ ಸಂಚಿಕೆಯಲ್ಲಿ ನೀರಿಗಾಗಿ ಬಂಡಳ್ಳಿ ನಿವಾಸಿಗಳ ಪರದಾಟ ಶೀರ್ಷಿಕೆಯಡಿ ವರದಿ ಪ್ರಕಟಗೊಂಡಿತ್ತು. ಇದರಿಂದ ಎಚ್ಚೆತ್ತ ಗ್ರಾಪಂ ಅಧಿಕಾರಿಗಳು ಪೈಪ್‌ಲೈನ್ ಕಾಮಗಾರಿ ನಡೆಸಿ ತೊಂಬೆಗೆ ನೀರು ಪೂರೈಕೆ ಮಾಡಲಾಗಿದ್ದು, ಈ ಬಗ್ಗೆ ನಿವಾಸಿಗಳಲ್ಲಿ ಖುಷಿ ವ್ಯಕ್ತವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net