

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಶುದ್ಧೀಕರಣ ಘಟಕಗಳಿಂದ ಜನರಿಗೆ ಪೂರೈಕೆಯಾಗುವ ನೀರಿನ ಗುಣಮಟ್ಟದ ಬಗ್ಗೆ ವರದಿ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಸಿ.ಸುಧಾಕರ್ ಜಿಲ್ಲಾಡಳಿತ ಮತ್ತು ಜಿಪಂಗೆ ಸೂಚಿಸಿದರು.
ಜಿಲ್ಲಾಡಳಿತ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಕುಡಿಯುವ ನೀರಿನ ಶುದ್ಧೀಕರಣ ಘಟಕಗಳ ಅವೈಜ್ಞಾನಿಕ ಕಾರ್ಯ ನಿರ್ವಹಣೆ, ಅಶುದ್ಧ ನೀರು ಪೂರೈಕೆಯ ಆತಂಕದ ದೂರುಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಗುಣಮಟ್ಟ ಖಾತ್ರಿ ಮತ್ತು ಪರಿಶೀಲನೆಯ ವರದಿ ಸಲ್ಲಿಸಲು ಸೂಚಿಸಿದರು.
ಶಿಡ್ಲಘಟ್ಟ ತಾಲೂಕಿನಲ್ಲಿ ಒಂದು ಘಟಕ ಸಹ ಸರಿಯಾಗಿ ನೀರು ಪೂರೈಸುತ್ತಿಲ್ಲ ಎಂದು ಶಾಸಕ ಬಿ.ಎನ್.ರವಿಕುಮಾರ್ ಗಮನ ಸೆಳೆಯುತ್ತಿದ್ದಂತೆ ಸಚಿವರು ಸಹ ಧ್ವನಿಗೂಡಿಸಿದರು. ನಿರ್ವಹಣೆಯಲ್ಲಿ ಸಂಪೂರ್ಣ ವೈಲ್ಯ ಕಂಡು ಬರುತ್ತಿದೆ ಎಂದು ಬೇಸರಿಸಿದರು. ಗ್ರಾಮೀಣ ಭಾಗದಲ್ಲಿ 935 ಘಟಕಗಳನ್ನು ಸ್ಥಾಪಿಸಿದ್ದು 888 ಕಾರ್ಯ ನಿರ್ವಹಿಸುತ್ತಿವೆ ಎಂಬುದಾಗಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಅಭಿಯಂತ ರವಿ ಸಮರ್ಥಿಸಿಕೊಳ್ಳಲು ಮುಂದಾದರು. ಇದೇ ವೇಳೆ ಎಷ್ಟು ದಿನಕ್ಕೊಮ್ಮೆ ನೀರಿನ ಶುದ್ಧೀಕರಣ ಖಾತ್ರಿ ಪರೀಕ್ಷೆ ಕೈಗೊಳ್ಳಲಾಗುತ್ತಿದೆ?, ಘಟಕಗಳ ಯಂತ್ರೋಪಕರಣಗಳ ಸಮರ್ಪಕ ನಿರ್ವಹಣೆ ಹೇಗಿದೆ?, ತೃಪ್ತಿದಾಯಕವಾಗಿದೆಯೇ?, ಗುತ್ತಿಗೆ ಸಂಸ್ಥೆಗಳು ಮತ್ತು ಅಧಿಕಾರಿಗಳಿಂದ ಕಾಲಕಾಲಕ್ಕೆ ಪರಿಶೀಲನೆಯಾಗುತ್ತಿದೆಯೇ? ಎಂದು ಪ್ರಶ್ನಿಸಿದ ಸಚಿವರು, ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.
ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ, ಜಿಪಂ ಸಿಇಒ ಪ್ರಕಾಶ್ ಜಿ.ಟಿ. ನಿಟ್ಟಾಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ಮತ್ತಿತರ ಅಧಿಕಾರಿಗಳು ಭಾಗವಹಿಸಿದ್ದರು.
ಶಾಸಕರು ಟೀಕೆಗೆ ಗುರಿ
ಜಲ್‌ಜೀವನ್ ಮಿಷನ್ ಕಾಮಗಾರಿ ನಿರ್ವಹಣೆ ವಿಳಂಬ, ಅರ್ಧಂಬರ್ಧ ಕೆಲಸದ ಬಗ್ಗೆ ಸಚಿವರು ಅಸಮಾಧಾನ ವ್ಯಕ್ತಪಡಿಸಿದರು. ಸುಸ್ಥಿತಿಯಲ್ಲಿದ್ದ ರಸ್ತೆಗಳನ್ನು ಅಗೆದು ನಾಲ್ಕೈದು ತಿಂಗಳು ಕಳೆದಿದ್ದರೂ ಕಾಮಗಾರಿ ಮುಗಿಸಿಲ್ಲ. ಜನರು ಓಡಾಡಲು ಸಾಧ್ಯವಾಗದೇ ಜಿಲ್ಲೆಯ ಶಾಸಕರು ಟೀಕೆಗೆ ಗುರಿಯಾಗುವಂತಾಗಿದೆ. ಮಳೆಗಾಲದಲ್ಲಂತೂ ಪರಿಸ್ಥಿತಿ ಅಸಹ್ಯಕರವಾಗಿರುತ್ತದೆ. ಇದರ ನಡುವೆ ಕೇಂದ್ರ ಸರ್ಕಾರದ ಹೊಗಳಿಕೆ ಮತ್ತು ಪ್ರಚಾರ ಮಾತ್ರ ಜೋರಾಗಿದೆ. ರಾಜ್ಯ ಸರ್ಕಾರ ಹೆಚ್ಚಿನ ಅನುದಾನವನ್ನು ನೀಡುತ್ತಿದೆ ಎಂಬುದನ್ನೇ ಮರೆಮಾಚಲಾಗುತ್ತಿದೆ ಎಂದು ಪರೋಕ್ಷವಾಗಿ ಸಂಸದ ಡಾ ಕೆ.ಸುಧಾಕರ್ ವಿರುದ್ಧ ಸಚಿವ ಎಂ.ಸಿ. ಸುಧಾಕರ್ ವ್ಯಂಗ್ಯವಾಡಿದರು.
ಚಿತ್ರಾವತಿಯಲ್ಲಿ ನೀರಿದ್ದರೂ ಸಮಸ್ಯೆ
ಚಿತ್ರಾವತಿ ಜಲಾಶಯದಲ್ಲಿ ಸಮೃದ್ಧ ನೀರಿದ್ದರೂ ಬಾಗೇಪಲ್ಲಿ ವ್ಯಾಪ್ತಿಯಲ್ಲಿ ಕುಡಿಯುವ ನೀರು ಪೂರೈಕೆಗೆ ಒದ್ದಾಡುತ್ತಿರುವುದರ ಬಗ್ಗೆ ಡಾ.ಎಂ.ಸಿ. ಸುಧಾಕರ್ ವ್ಯಂಗ್ಯವಾಡಿದರು. ಈಗಾಗಲೇ ಜಲಾಶಯ ಭರ್ತಿಯಾಗಿದೆ. ಆದರೂ, ಖಾಸಗಿ ಕೊಳವೆಬಾವಿ ಮತ್ತು ಟ್ಯಾಂಕರ್ ನೀರಿಗೆ ಆವಲಂಬಿಸುವಂತಾಗಿದೆ. ಹಾಹಾಕಾರ ನೀಗುತ್ತಿಲ್ಲ ಎಂದು ಬೇಸರಿಸಿದರು. ಇದಕ್ಕೆ ಪೈಪ್‌ಲೈನ್ ಅಳವಡಿಕೆ ಕಾಮಗಾರಿ ಬಾಕಿ ಇರುವುದನ್ನು ಪ್ರಸ್ತಾಪಿಸುವ ಮೂಲಕ ಅಸಹಾಯಕತೆ ಪ್ರದರ್ಶಿಸಿದರು.
ಜಿಲ್ಲೆಯ ಕೈಪಿಡಿ ಸಿದ್ಧಪಡಿಸಿ
ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಬೆಳೆಗಳು, ಆಕರ್ಷಕ ಪ್ರವಾಸಿ ತಾಣಗಳು, ಭೌಗೋಳಿಕ ವ್ಯಾಪ್ತಿ, ವಿವಿಧ ಉತ್ಪನ್ನಗಳು, ಪ್ರಗತಿದಾಯಕ ಚಟುವಟಿಕೆ ಸೇರಿ ಜಿಲ್ಲೆಯ ವಿಶೇಷತೆಯ ಬಗ್ಗೆ ಸಮಗ್ರ ಮಾಹಿತಿಯನ್ನೊಳಗೊಂಡ ಕೈಪಿಡಿಯನ್ನು ವಿವಿಧ ಇಲಾಖೆಗಳ ಸಮನ್ವಯತೆಯೊಂದಿಗೆ ತಯಾರಿಸಲು ಜಿಲ್ಲಾಡಳಿತಕ್ಕೆ ಸಚಿವ ಡಾ.ಎಂ.ಸಿ. ಸುಧಾಕರ್ ತಿಳಿಸಿದರು.
ಅಧಿಕಾರಿಗಳಿಗೆ ತರಾಟೆ
ನೀರಿನ ಸಮಸ್ಯೆಗೆ ಸಂಬಂಧಿಸಿದಂತೆ ಶಿಡ್ಲಘಟ್ಟ ತಾಲೂಕಿನ ಗೊಳ್ಳುಚಿನ್ನಪ್ಪನಹಳ್ಳಿ ಗ್ರಾಮಸ್ಥರು ಸಿಎಂ ಸಿದ್ದರಾಮಯ್ಯ ಅವರಿಗೆ ದೂರು ಸಲ್ಲಿಸಿರುವುದಕ್ಕೆ ಸಂಬಂಧಿಸಿದಂತೆ ಚರ್ಚೆಯಾಯಿತು. ಅಧಿಕಾರಿಗಳ ಅಸಡ್ಡೆ ಧೋರಣೆಯಿಂದ ರಾಜ್ಯ ಸರ್ಕಾರದ ಹಂತಕ್ಕೆ ಸಮಸ್ಯೆಯ ದೂರುಗಳು ಹೋಗುತ್ತಿವೆ. ಸ್ಥಳೀಯವಾಗಿ ಏಕೆ ಪರಿಹಾರ ಕಂಡಿಲ್ಲ ಎಂದು ಸಚಿವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಒಂದು ಹಂತದಲ್ಲಿ ತಾಪಂ ಇಒ ಸಮಸ್ಯೆ ಗಮನಕ್ಕೆ ಬಂದಿಲ್ಲ, ಗೊತ್ತಾಗಲಿಲ್ಲ ಎಂಬ ಮಾತನ್ನು ಹೇಳಿದಾಗ, ಇದನ್ನು ಒಂದು ವೇಳೆ ಸಿಎಂ ದೂರವಾಣಿಯಲ್ಲಿ ಸಂಪರ್ಕಿಸಿ ಮಾಹಿತಿ ಕೇಳಿದ ಸಂದರ್ಭದಲ್ಲಿ ತಿಳಿಸಿದ್ದರೆ ಆ ಕ್ಷಣವೇ ಅಮಾನತು ಮಾಡಲಾಗುತ್ತಿತ್ತು. ಇಂತಹ ಧೋರಣೆಯನ್ನು ಪ್ರದರ್ಶಿಸಬೇಡಿ ಎಂದು ಸಚಿವ ಸುಧಾಕರ್ ಸೂಚಿಸಿದರು. ಸ್ವಲ್ಪ ಸಮಯದ ಬಳಿಕ ಸ್ಥಳಕ್ಕೆ ಖುದ್ದು ಭೇಟಿ ನೀಡಿ, ಸಮಸ್ಯೆ ಆಲಿಸಿರುವುದನ್ನು ಸ್ಮರಿಸಿಕೊಂಡ ಅಧಿಕಾರಿ, ಕ್ಷಮೆಯಾಚನೆಯ ಜತೆಗೆ ಮಾಹಿತಿ ತಿಳಿಸಿದ ಪ್ರಸಂಗ ನಡೆಯಿತು.
ಬೇರೂರಿರುವ ಸಿಬ್ಬಂದಿ ಎತ್ತಂಗಡಿ
ನಗರ, ಪಟ್ಟಣ ಪ್ರದೇಶ ವ್ಯಾಪ್ತಿಯಲ್ಲಿನ ಸ್ಥಳೀಯ ಆಡಳಿತ ಸಂಸ್ಥೆಗಳಲ್ಲಿ ಹಲವು ವರ್ಷಗಳಿಂದ ಬೇರೂರಿರುವ ಅಧಿಕಾರಿಗಳನ್ನು ಬೇರೆಡೆಗೆ ವರ್ಗಾಯಿಸುವುದರ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಎಚ್ಚರಿಕೆ ನೀಡಿದರು. ಕಂದಾಯ ವಸೂಲಿ, ಕಾಮಗಾರಿಗಳ ನಿರ್ವಹಣೆ ಮತ್ತು ಉಸ್ತುವಾರಿಯಲ್ಲಿ ಹಲವು ವರ್ಷಗಳಿಂದ ಒಂದೆಡೆ ಕೆಲಸ ನಿರ್ವಹಿಸುತ್ತಿರುವ ನೌಕರರು ಸ್ಪಂದಿಸುತ್ತಿಲ್ಲ ಎಂಬ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಮಾಧವಿ ಸಭೆಯ ಗಮನಕ್ಕೆ ತಂದರು. ತಕ್ಷಣ ಸಚಿವರು ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿದರು. ಇದಕ್ಕೆ ಒಂದು ತಿಂಗಳ ಅವಧಿಯಲ್ಲಿ ಕಾರ್ಯ ನಿರ್ವಹಣೆಯ ಕ್ಷಮತೆ ಕಳಪೆಯಿಂದ ಕೂಡಿರುವವರನ್ನು ಬೇರೆಡೆಗೆ ವರ್ಗಾಯಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಕೆರೆಗಳ ತಿರುವು ಯೋಜನೆ
ಎತ್ತಿನಹೊಳೆ ಯೋಜನೆಯಡಿ ಪೂರೈಕೆಯಾಗುವ ನೀರನ್ನು ಶೇಖರಿಸಿಟ್ಟುಕೊಳ್ಳುವ ನಿಟ್ಟಿನಲ್ಲಿ ಜಕ್ಕಲಮಡಗು ಜಲಾಶಯ, ಶ್ರೀನಿವಾಸ ಸಾಗರ, ರಂಗಧಾಮ ಕೆರೆಯನ್ನು ಮೀಸಲಿಟ್ಟುಕೊಳ್ಳುವುದರ ಬಗ್ಗೆ ಸಚಿವರು ಅಧಿಕಾರಿಗಳಿಗೆ ಸಲಹೆ ನೀಡಿದರು. ನಗರ ಪ್ರದೇಶಗಳಲ್ಲಿ ಓವರ್‌ಹೆಡ್ ಟ್ಯಾಂಕ್ ನಿರ್ಮಾಣ, ಜಲಾಶಯಗಳ ಮೂಲಕ ನೀರು ಪೂರೈಕೆ, ಕುಡಿಯುವ ನೀರಿನ ಸಮಸ್ಯೆ ಪರಿಹಾರದ ಬಗ್ಗೆ ಚರ್ಚಿಸಲಾಯಿತು. ಮುಂಬರುವ ಬೇಸಿಗೆಯಲ್ಲಿ ಉದ್ಭವಿಸಲಿರುವ ಹಾಹಾಕಾರದ ನಿರೀಕ್ಷೆಯಲ್ಲಿ ಈಗಿನಿಂದಲೇ ಸಿದ್ಧವಾಗುವಂತೆ ಸಚಿವ ಸುಧಾಕರ್ ಅಧಿಕಾರಿಗಳಿಗೆ ಸೂಚಿಸಿದರು.