ಘಟಕ ಸ್ಥಗಿತದಿಂದ ಕುಡಿವ ನೀರಿಗೆ ಬರ!

21ss1filterwater unit
ಸ್ಥಗಿತಗೊಂಡಿರುವ ಶುದ್ಧ ಕುಡಿಯುವ ನೀರಿನ ಘಟಕ.
Published on

*ಚನ್ನಪಟ್ಟಣದ ಹಲವೆಡೆ ಶುದ್ಧಜಲಕ್ಕಾಗಿ ಹಾಹಾಕಾರ

*ವ್ಯವಸ್ಥೆ ಸರಿಪಡಿಸಲು ಪಟ್ಟು

ಅಭಿಲಾಷ್​ ತಿಟ್ಟಮಾರನಹಳ್ಳಿ

ಫ್ಲೊರೈಡ್​ಯುಕ್ತ ನೀರು ಸೇವನೆ ಮಾರಕ ರೋಗಗಳಿಗೆ ಕಾರಣವಾಗಲಿದೆ ಎಂಬ ಹಿನ್ನೆಲೆಯಲ್ಲಿ ಸರ್ಕಾರ ಜನತೆಯ ಹಿತದೃಷ್ಟಿಯಿಂದ ಪ್ರತಿಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಾಣ ಮಾಡಿದೆ. ಆದರೆ, ತಾಲೂಕಿನಲ್ಲಿ ಅಧಿಕಾರಿಗಳ ಘೋರ ನಿರ್ಲಕ್ಷ್ಯದಿಂದ ಹಲವು ಕಡೆ ಈ ಘಟಕಗಳು ನಿಷ್ಕ್ರಿಯಗೊಂಡಿವೆ.

ಜನರ ಆರೋಗ್ಯ ಕಾಪಿಡುವ ಉದ್ದೇಶದಿಂದ ಸರ್ಕಾರದ ವಿವಿಧ ಅನುದಾನಗಳನ್ನು ಬಳಸಿಕೊಂಡು ನಗರ ಸೇರಿ ತಾಲೂಕಿನ ಎಲ್ಲ ಗ್ರಾಮಗಳಲ್ಲೂ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ತೆರೆಯಲಾಗಿದೆ. ಆದರೆ, ಕೆಲವು ಶುದ್ಧೀಕರಣ ಘಟಕಗಳು ನಿರ್ವಹಣೆ ಕೊರತೆ ಹಾಗೂ ಸಂಬಂಧಿಸಿದವರ ದಿವ್ಯ ನಿರ್ಲಕ್ಷ್ಯಕ್ಕೆ ಬಲಿಯಾಗಿ, ಸಾರ್ವಜನಿಕ ಬಳಕೆಗೆ ಬಾರದೆ ಬಾಗಿಲು ಮುಚ್ಚಿವೆ.

ತಾಲೂಕಿನ ಕೆಲಗ್ರಾಮಗಳಲ್ಲಿ ನಿರ್ಮಾಣವಾಗಿರುವ ಶುದ್ಧ ಕುಡಿಯುವ ನೀರಿನ ಘಟಕಗಳು ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿಲ್ಲ. ಕೆಲವರ್ಷದಿಂದ ಅಲ್ಲಿನ ಜನತೆ ಟಕದ ನೀರಿಗೆ ಹೊಂದಿಕೊಂಡಿದ್ದಾರೆ. ಆದರೆ, ಘಟಕಗಳು ಹಠಾತ್ತನೆ ಕಾರ್ಯ ಸ್ಥಗಿತಗೊಳಿಸಿರುವುದರಿಂದ ಆ ಗ್ರಾಮಗಳ ಜನತೆ ಶುದ್ಧ ಕುಡಿಯುವ ನೀರಿಗಾಗಿ ನೆರೆಯ ಗ್ರಾಮಗಳ ಘಟಕಗಳನ್ನು ಅವಲಂಬಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಲಕ್ಷಾಂತರ ರೂ.ವ್ಯಯಿಸಿ ನಿರ್ಮಿಸಿದ ಘಟಕಗಳ ನಿರ್ವಹಣೆ ಯಾರದು ಎಂಬುದು ಜನತೆಗೆ ಯಕ್ಷ ಪ್ರಶ್ನೆಯಾಗಿದೆ.\

ಇನ್ನು ಕೆಟ್ಟು ನಿಂತಿರುವ ಘಟಕಗಳಿಗೆ ಸಂಬಂಧಿಸಿದಂತೆ ಆ ಘಟಕಗಳ ನಿರ್ವಹಣೆ ಹೊಣೆ ಯಾರದು ಎಂಬುದೂ ಪ್ರಶ್ನೆ. ಈ ವಿಚಾರದಲ್ಲಿ ಗ್ರಾಪಂ ಹಾಗೂ ಆರ್​ಡಿಪಿಆರ್​(ನೀರು ಮತ್ತು ನೈರ್ಮಲ್ಯ) ವಿಭಾಗದ ಅಧಿಕಾರಿಗಳು ನುಣುಚಿಕೊಳ್ಳುವ ಆರೋಪವೂ ಕೇಳಿಬರುತ್ತಿದೆ. ಕೆಲ ಘಟಕಗಳ ಹೊಣೆಯನ್ನು ಖಾಸಗಿ ಏಜೆನ್ಸಿಗಳು ವಹಿಸಿಕೊಂಡಿದ್ದು, ಯಾವ ಘಟಕದ ಹೊಣೆ ಯಾರದು ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲವಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಹಾಗೂ ಜಿಪಂ ಸಿಇಒ ತಾಲೂಕಿನ ಸಂಪೂರ್ಣ ಘಟಕಗಳ ಬಗ್ಗೆ ಮಾಹಿತಿ ಪಡೆದು, ಅವುಗಳ ನಿರ್ವಹಣೆಯ ಬಗ್ಗೆ ಸ್ಪಷ್ಟವಾದ ಆದೇಶ ಹೊರಡಿಸಬೇಕಿದೆ.

ಕೂಡಲೇ ಸಂಬಂಧಿಸಿದವರು ಈ ಟಕಗಳನ್ನು ದುರಸ್ಥಿಗೊಳಿಸಿ, ಜನತೆಗೆ ಶುದ್ಧ ಕುಡಿಯುವ ನೀರನ್ನು ಪೂರೈಸಲು ಕ್ರಮವಹಿಸಬೇಕು ಎಂಬುದು ಸಾರ್ವಜನಿಕರ ಆಗ್ರಹ.

ಇಗ್ಗಲೂರು ಭಾಗದಲ್ಲಿಲ್ಲ ಶುದ್ಧ ನೀರು!

ಶುದ್ಧ ಕುಡಿಯುವ ನೀರಿನ ಘಟಕಗಳು ಸಂಬಂಧಿಸಿದವರ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತನಕ್ಕೆ ಹೇಗೆ ಬಲಿಯಾಗುತ್ತವೆ ಎಂಬುದಕ್ಕೆ ತಾಲೂಕಿನ ಇಗ್ಗಲೂರು ಗ್ರಾಪಂ ಉತ್ತಮ ಉದಾಹರಣೆ. ಗ್ರಾಪಂ ವ್ಯಾಪ್ತಿಯ ಇಗ್ಗಲೂರು, ಸರಗೂರು, ನೇರಳೂರು, ಚಿಕ್ಕಬೋರೇಗೌಡನದೊಡ್ಡಿ ಗ್ರಾಮದಲ್ಲಿನ ಘಟಕಗಳು ಸ್ಥಗಿತಗೊಂಡು ಹಲವು ದಿನಗಳು ಕಳೆದಿವೆ. ಈ ಭಾಗದ ಜನತೆಗೆ ಮಾರೇಗೌಡನದೊಡ್ಡಿಲ್ಲಿರುವ ಏಕೈಕ ಘಟಕ ಈಗ ಆಸರೆಯಾಗಿದೆ. ಅತಿಹೆಚ್ಚು ಜನಸಂಖ್ಯೆಯುಳ್ಳ ತಾಲೂಕಿನ ಗಡಿಭಾಗ ಇಗ್ಗಲೂರು ಗ್ರಾಪಂ ಶುದ್ಧಕುಡಿಯುವ ನೀರಿನ ಘಟಕಗಳ ಅವ್ಯವಸ್ಥೆಗೆ ಉತ್ತಮ ಉದಾಹರಣೆ ಎನ್ನಬಹುದು.

ಹಲವು ಕಡೆ ಇದೇ ಸಮಸ್ಯೆ!

ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ವಿವಿಧ ಅನುದಾನಗಳನ್ನು ಬಳಸಿಕೊಂಡು ಒಟ್ಟು 182 ಘಟಕಗಳನ್ನು ನಿರ್ಮಿಸಲಾಗಿದೆ. ಇವುಗಳ ಪೈಕಿ ಜಿಪಂ 136 ಘಟಕಗಳು ನಿರ್ವಹಣೆ ಹೊಂದಿದೆ. ಇವುಗಳಲ್ಲಿ ಲಂಬಾಣಿತಾಂಡ್ಯ, ಕುಂಬಾರಕಟ್ಟೆ ಸರ್ಕಲ್​, ತೊರೆಹೊಸೂರು, ಕಳ್ಳಿಹೊಸೂರು ಗ್ರಾಮದಲ್ಲಿನ ಟಕಗಳು ಸ್ಥಗಿತಗೊಂಡಿವೆ. ಚನ್ನಪಟ್ಟಣ ನಗರದಲ್ಲಿ ಒಟ್ಟು 32 ಘಟಕಗಳಿದ್ದು, ಅವುಗಳ ಪೈಕಿ ಮರಳುಹೊಲ, ಕಲಾನಗರ ಹಾಗೂ ಸಿಎಂಸಿ ಬಡಾವಣೆ ಸಮೀಪವಿರುವ ಟಕಗಳು ಕೆಟ್ಟು ಹಲವಾರು ತಿಂಗಳಾಗಿವೆ. ಇನ್ನುಳಿದಂತೆ ವಿವಿಧ ಏಜೆನ್ಸಿಗಳು ನಿರ್ವಹಿಸುತ್ತಿರುವ ಘಟಕಗಳು ಸಹ ನಿರ್ವಹಣೆ ಕೊರತೆಯಿಂದ ಬಳಲುತ್ತಿದೆ.

ನಮ್ಮ ಇಗ್ಗಲೂರು ಗ್ರಾಪಂನಲ್ಲಿರುವ ಬಹುತೇಕ ಶುದ್ಧ ಕುಡಿಯುವ ನೀರಿನ ಘಟಕಗಳು ಕೆಟ್ಟು ಹಲವು ದಿನಗಳು ಕಳೆದಿವೆ. ಇದರಿಂದಾಗಿ ನಮ್ಮ ಜನತೆಗೆ ಶುದ್ಧ ಕುಡಿಯುವ ನೀರಿನ ಕೊರತೆ ಎದುರಾಗಿದೆ. ಈ ನೀರಿಗೆ ಹೊಂದಿಕೊಂಡಿರುವುದರಿಂದ, ಜನತೆ ಬೋರ್​ವೆಲ್​ ನೀರು ಕುಡಿಯಲು ಹಿಂಜರಿಯುತ್ತಾರೆ. ಘಟಕಗಳ ನಿರ್ವಹಣೆ ಬಗ್ಗೆಯೂ ಗೊಂದಲವಿದೆ. ಹಿರಿಯ ಅಧಿಕಾರಿಗಳು ಈ ಸಮಸ್ಯೆ ಬಗೆಹರಿಸಿಕೊಡಬೇಕು.> ಇ.ತಿ.ಶ್ರೀನಿವಾಸ್​, ಇಗ್ಗಲೂರು ಗ್ರಾಪಂ ಅಧ್ಯನಮ್ಮ ಮರಳು ಹೊಲ ಬಡಾವಣೆಯಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ಬಹಳ ದಿನಗಳಾಗಿವೆ. ಈ ಹಿನ್ನೆಲೆಯಲ್ಲಿ ನೀರಿಗಾಗಿ ಅಕ್ಕಪಕ್ಕದ ಬಡಾವಣೆಗೆ ತೆರಳಬೇಕಾದ ಅನಿವಾರ್ಯವಿದೆ. ದ್ವಿಚಕ್ರವಾಹನ ಸೌಲಭ್ಯ ಇರುವವರು ಹೇಗೋ ಅಷ್ಟು ದೂರ ಹೋಗಿ ಮನೆಗೆ ನೀರು ತರುತ್ತಾರೆ. ಆದರೆ, ಬಹಳಷ್ಟು ಮಂದಿ ವಿಧಿ ಇಲ್ಲದೆ ಬೋರ್​ ನೀರು ಕುಡಿಯುತ್ತಿದ್ದಾರೆ.> ನಿತಿನ್​, ಮರಳುಹೊಲ ನಿವಾಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net