

ಮುದಗಲ್: ಕುಡಿವ ನೀರಿನ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ಉಳಿಮೇಶ್ವರ, ವ್ಯಾಕರನಾಳ ಗ್ರಾಮಸ್ಥರು ಮಂಗಳವಾರ ನಾಗಲಾಪುರ ಗ್ರಾಪಂ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಗ್ರಾಪಂಗೆ ಕಳೆದ ಮೂರು ತಿಂಗಳಲ್ಲಿ ಐದು ಜನ ಪಿಡಿಒಗಳನ್ನು ಬದಲಿಸಿದ್ದರಿಂದ ಕುಡಿವ ನೀರಿನ ಸಮಸ್ಯೆ ಉಲ್ಬಣಗೊಳ್ಳಲು ಕಾರಣವಾಗಿದೆ. ಯಾವುದೇ ಪಿಡಿಒಗೆ ಚಾರ್ಜ್ ನೀಡದೆ ಕಾರ್ಯದರ್ಶಿಗೆ ಅಧಿಕಾರ ನೀಡಿರುವುದು ಸರಿಯಲ್ಲ ಎಂದು ಆರೋಪಿಸಿದರು.
ಸ್ಥಳಕ್ಕೆ ಬಂದ ಲಿಂಗಸುಗೂರು ತಾಪಂ ಸಹಾಯಕ ನಿರ್ದೇಶಕ ಕೆ.ಪಂಪನಗೌಡ ಗ್ರಾಮಸ್ಥರ ಸಮಸ್ಯೆ ಆಲಿಸಿದರು. ನಂತರ ಮಾತನಾಡಿ, ಸರ್ಕಾರದ ಸ್ಪಷ್ಟ ನಿರ್ದೇಶದನ್ವಯ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕು. ಸ್ಥಳೀಯ ಇತರ ಸಮಸ್ಯೆಗಳನ್ನು ಹಂತ ಹಂತವಾಗಿ ಪರಿಹರಿಸಿ ತಾಪಂಗೆ ವರದಿ ಸಲ್ಲಿಸಬೇಕು ಎಂದು ಪಿಡಿಒ ಬಸವರಾಜ ವಸ್ತ್ರದ್, ಕಾರ್ಯದರ್ಶಿ ನಾಗಪ್ಪಗೆ ಸೂಚಿಸಿದರು.
ಪ್ರಮುಖರಾದ ಶರಣಪ್ಪ ಮಸ್ಕಿ, ತಿಮ್ಮನಗೌಡ ವ್ಯಾಕರನಾಳ, ಹನುಮಂತ ಉಳಿಮೇಶ್ವರ, ರಾಮನಗೌಡ ಪಾಟೀಲ್, ಹನುಮೇಶ ಛತ್ತರ, ದೇವರಾಜ್ ಗೊಲ್ಲರಹಟ್ಟಿ, ಬಸ್ಸಣ್ಣ ಪಿಕಳಿಹಾಳ ಇತರರಿದ್ದರು. ಮುದಗಲ್ ಠಾಣೆ ಪಿಎಸ್‌ಐ ವೆಂಕಟೇಶ ಮಾಡಗೇರಿ ನೇತೃತ್ವದಲ್ಲಿ ಸೂಕ್ತ ಬಂದೋಬಸ್ತ್ ನೀಡಲಾಗಿತ್ತು.