

ಗೋಣಿಕೊಪ್ಪ: ದಕ್ಷಿಣ ಕೊಡಗಿನಲ್ಲಿ ಮಳೆ ಬಿರುಸುಗೊಂಡಿದ್ದು, ನದಿ ತೊರೆಗಳು ತುಂಬಿ ಹರಿಯುತ್ತಿದೆ. ಗಾಳಿಯೂ ವಿಪರೀತ ಬೀಸುತ್ತಿದ್ದು ಮರಗಳು ಉರುಳಿ ಅನಾಹುತಗಳು ಸಂಭವಿಸಿದೆ.
ಕರ್ನಾಟಕ, ಕೇರಳ ರಾಜ್ಯ ಹೆದ್ದಾರಿ ಶ್ರೀಮಂಗಲದಿಂದ ಕುಟ್ಟ ಕಡೆ ಹೋಗುವ ರಸ್ತೆ ಬದಿ ಕುಸಿತಗೊಂಡಿದ್ದು, ಅರ್ಧಭಾಗಕ್ಕೆ ಬ್ಯಾರಿಕೇಡ್ ಅಳವಡಿಸಿ ಇನ್ನೊಂದು ಬದಿ ವಾಹನ ಸಂಚಾರ ಮಾಡಲು ಅವಕಾಶ ಮಾಡಿ ಕೊಡಲಾಗಿತ್ತು. ಶುಕ್ರವಾರ ಖಾಸಗಿ ಬಸ್ ಕೆಸರಿನಲ್ಲಿ ಸಿಲುಕಿ ಸಂಚಾರಕ್ಕೆ ಅಡಚಣೆ ಉಂಟಾಯಿತು.
ನಿಟ್ಟೂರು ಗ್ರಾಮದ ನಾಗರಹೊಳೆ ರಕ್ಷಿತಾರಣ್ಯದ ಅಂಚಿನಲ್ಲಿರುವ ಕಾರ್ಮಾಡು ಚಿಣ್ಣನ ಹಾಡಿಯ ಮುಂದೆ ಇರುವ ತೋಡಿನಲ್ಲಿ ನೀರು ತುಂಬಿ ಹರಿಯುತ್ತಿದ್ದು, ಅಪ್ಪು ಎಂಬುವವರ ಮನೆಯ ಸಮೀಪಕ್ಕೆ ಬಂದಿದ್ದು, ಆತಂಕ ಸೃಷ್ಟಿಸಿದೆ.
ಶ್ರೀಮಂಗಲ-ಕುಟ್ಟ ವ್ಯಾಪ್ತಿಯಲ್ಲಿ ಮಳೆ ಗಾಳಿಗೆ ಇದುವರೆಗೆ 177 ವಿದ್ಯುತ್ ಕಂಬ ಧರೆಗೆ ಉರುಳಿದೆ. ಕುಟ್ಟ ಬೃಹ್ಮಗಿರಿ ಕ್ಲಬ್ ಸಮೀಪ ಗುರುವಾರ ಸುರಿದ ಮಳೆಗೆ 6 ಕಂಬಗಳು ಧರೆಗುರುಳಿದೆ. ಹೆರ್ಮಾಡು ವ್ಯಾಪ್ತಿಯಲ್ಲಿ ನಾಲ್ಕು ವಿದ್ಯುತ್ ಕಂಬ ಹಾನಿಗೀಡಾಗಿದೆ.