

ಚಿತ್ರದುರ್ಗ: ಡಿಆರ್ಡಿಓ ಅಭಿವೃದ್ಧಿ ಪಡಿಸಿದ ಮಾನವ ರಹಿತ ಡ್ರೋನ್ ವಿಮಾನವೊಂದು ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ವದ್ದಿಕೆರೆ ಗ್ರಾಮದಲ್ಲಿ ಪತನವಾಗಿದೆ.
ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ದಿ ಸಂಸ್ಥೆ(DRDO) ಸಿದ್ದಪಡಿಸಿದ ತಪಸ್ ಎಂಬ ಯುದ್ದ ವಿಮಾನವು ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿ ಸಮೀಪದ ಕುದಾಪುರ ವಾಯುನೆಲೆಯಿಂದ ಭಾನುವಾರ ಬೆಳಗ್ಗೆ ಹಾರಾಟ ಆರಂಭಿಸಿತ್ತು. ಹಾರಾಡುವ ವೇಳೆ ನಿಯಂತ್ರಣ ತಪ್ಪಿ ವಿಮಾನ ಪತನವಾಗಿದ್ದು, ಯಾವುದೇ ಅನಾಹುತ ಸಂಭವಿಸಿಲ್ಲ.
ವಿಮಾನ ಪತನವಾಗಿರುವ ಕುರಿತು DRDO ರಕ್ಷಣಾ ಇಲಾಖೆಗೆ ಮಾಹಿತಿ ನೀಡಿದ್ದು, ಅಪಘಾತದ ಹಿಂದಿನ ನಿರ್ದಿಷ್ಟ ಕಾರಣಗಳನ್ನು ತಿಳಿಯಲು ತನಿಖೆಗೆ ಆದೇಶಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಡ್ರೋನ್ ವಿಮಾನವು ಪತನವಾದ ಸುದ್ದಿ ಕೇಳುತ್ತಿದ್ದಂತೆ ಸುತ್ತಮುತ್ತಲಿನ ಗ್ರಾಮದ ಜನರು ಸ್ಥಳಕ್ಕೆ ದೌಡಾಯಿಸಿದ್ದು, ಕುತೂಹಲದಿಂದ ಅವಶೇಷಗಳನ್ನು ವೀಕ್ಷಿಸುತ್ತಿದ್ದಾರೆ. ಪೊಲೀಸರು ಹಾಗೂ DRDO ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದು, ಪರಿಶೀಲಿನೆ ನಡೆಸುತ್ತಿದ್ದಾರೆ.