

ನವದೆಹಲಿ: ಭಾರತದ ಆತಿಥ್ಯದಲ್ಲಿ ನಡೆಯುತ್ತಿರುವ ಜಿ-20 ಶೃಂಗಸಭೆಯೂ ಆಡಳಿತ ಪಕ್ಷ ಚುನಾವಣೆ ಪ್ರಚಾರಕ್ಕೆ ಬಳಸಿಕೊಳ್ಳುವ ಮೂಲಕ ದೇಶದಲ್ಲಿ ಜನತೆ ಎದುರಿಸುತ್ತಿರುವ ನೈಜ ಸಮಸ್ಯೆಗಳನ್ನು ಮರೆಮಾಚಲು ಯತ್ನಿಸುತ್ತಿದೆ ಎಂದು ಕಾಂಗ್ರೆಸ್ ನಾಯಕ, ರಾಜ್ಯಸಭೆ ಸದಸ್ಯ ಜೈರಾಮ್ ರಮೇಶ್ ಆರೋಪಿಸಿದ್ದಾರೆ.
ಜಿ-20 ಶೃಂಗಸಭೆಯೂ ಭಾರತದ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ನವದೆಹಲಿಯ ಪ್ರಗತಿ ಮೈದಾನದಲ್ಲಿರುವ ಭಾರತ ಮಂಟಪಂನಲ್ಲಿ ಸೆಪ್ಟೆಂಬರ್ 9 ಹಾಗೂ 10ರಂದು ನಡೆಯಲಿದೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಬರೆದುಕೊಂಡಿರುವ ಜೈರಾಮ್ ರಮೇಶ್ 1999ರಲ್ಲಿ ಜಿ-20ಯನ್ನು ರಚಿಸಲಾಯಿತು. ಗುಂಪು ರಚನೆಯಾದ ದಿನದಿಂದಲ್ಲೂ ಇಲ್ಲಿಯವರೆಗೆ 17 ದೇಶಗಳಲ್ಲಿ ಸಭೆ ಶೃಂಗಸಭೆ ನಡೆದಿದೆ. ಈ ವರ್ಷ ಭಾರತದ ಆತಿಥ್ಯದಲ್ಲಿ ನಡೆಯುತ್ತಿದ್ದು, ಆಡಳಿತ ಪಕ್ಷ ಶೃಂಗಸಭೆಯನ್ನು ಚುನವಣಾ ಪ್ರಚಾರಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ.
ಶೃಂಗಸಭೆಯ ಸುತ್ತಲೂ ಚುನಾವಣೆಯ ವಾತಾವರಣವನ್ನು ನಿರ್ಮಿಸಲಾಗುತ್ತಿದ್ದು, ಈ ರೀತಿ ಬೇರೆ ಯಾವ ದೇಶದಲ್ಲೂ ನಡೆದಿಲ್ಲ. ಈ ರೀತಿ ಮಾಡುವ ಮೂಲಕ ಕೇಂದ್ರ ಸರ್ಕಾರವು ಜನರ ಗಮನವನ್ನು ನೈಜ ಸಮಸ್ಯೆಗಳಿಂದ ಬೇರೆಡೆಗೆ ಸೆಳೆಯಲು ಯತ್ನಿಸುತ್ತಿದೆ. 1983ರಲ್ಲಿ ಭಾರತ 100 ರಾಷ್ಟ್ರಗಳನ್ನೊಳಗೊಂಡ ಆಲಿಪ್ತ ಸಮಾವೇಶವನ್ನು ಯಶಸ್ವಿಯಾಗಿ ಆಯೋಜಿಸಿತ್ತು. ಕಾಮನ್ವೆಲ್ತ್ ರಾಷ್ಟ್ರಗಳ ಸಮಾವೇಶವನ್ನು ಸಹ ಯಶಸ್ವಿಯಾಗಿ ನಡೆಸಿತ್ತು. ಆದರೆ, ಅಂದಿನ ಸರ್ಕಾರ ಚುನಾವಣಾ ಲಾಭಕ್ಕಾಗಿ ಸಮಾವೇಶಗಳನ್ನು ಬಳಸಿಕೊಂಡಿರಲಿಲ್ಲ ಎಂದು ಕಿಡಿಕಾರಿದ್ದಾರೆ.
ಹಿಂದೆ ಬಿಜೆಪಿಯ ಹಿರಿಯ ನಾಯಕರಾದ ಎಲ್.ಕೆ. ಅಡ್ವಾನಿ ಅವರು ನರೇಂದ್ರ ಮೋದಿ ಅತ್ಯುತ್ತಮ ಕಾರ್ಯಕ್ರಮ ಆರಯೋಜಕ ಎಂದು ಹೇಳಿದ್ದರು. ನನಗೆ ಈಗ ಅವರು ಅಂದು ಆಡಿದ ಮಾತುಗಳು ನೆನಪಾಗುತ್ತಿದ್ದು, ಈಗಲೂ ಕಾರ್ಯಕ್ರಮವನ್ನೇ ಆಯೋಜನೆ ಮಾಡುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಅವರನ್ನು ಕುಟುಕಿದ್ದಾರೆ.