ಮಾಗಡಿ
ತಾಲೂಕಿನ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮರೂರು ಹ್ಯಾಂಡ್ ಪೋಸ್ಟ್‌ನಿಂದ ಅರಣ್ಯ ಇಲಾಖೆಯ ನರ್ಸರಿವರೆಗಿನ ಸರ್ವಿಸ್ ರಸ್ತೆ ಬದಿ ನಿರ್ಮಾಣಗೊಳ್ಳುತ್ತಿರುವ ಬೃಹತ್ ಚರಂಡಿ ಕಾಮಗಾರಿ ಪೂರ್ಣಗೊಳ್ಳುವ ಮುನ್ನವೇ ಕಿತ್ತುಹೋಗುತ್ತಿದೆ.
ಸುಮಾರು 130 ಮೀ. ಉದ್ದದಲ್ಲಿ ಎರಡು ಕಡೆಯ ಚರಂಡಿ ಕಾಮಗಾರಿಗೆ ಸಮರ್ಪಕ ಸೀಮೆಂಟ್, ಎಂ ಸ್ಯಾಡ್, ಕಬ್ಬಿಣ, ಜಲ್ಲಿ ಬಳಸದೆ ಇರುವ ಕಾರಣ ಕಳೆದ ಒಂದು ತಿಂಗಳ ಹಿಂದೆಯೇ ನಿರ್ಮಿಸಲಾದ ಕಾಮಗಾರಿ ಇತ್ತೀಚೆಗೆ ಸುರಿದ ಮಳೆಗೆ ಕಿತ್ತು ಕೊಚ್ಚಿಹೋಗುತ್ತಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.
ಕಾಮಗಾರಿ ಕಳಪೆ ಸಂಬಂಧಿಸಿದಂತೆ ಕಾಮಗಾರಿ ಆರಂಭದಲ್ಲೇ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಆದರೂ ಪ್ರಯೋಜನವಾಗಿಲ್ಲ.
ಬಳಿಕ ಇಂಜಿನಿಯರ್ ಹರಿಬಾಬು ಅವರ ಗಮನಕ್ಕೆ ತಂದರೆ ಮರುಕಾಮಗಾರಿ ಭರವಸೆ ನೀಡುತ್ತಾರೆ. ಇದರಿಂದ ನಾಗರಿಕರ ತೆರಿಗೆ ಹಣ ಸುಖಾಸುಮ್ಮನೇ ಪೋಲಾಗುತ್ತದೆ. ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಂಡು ವೈಜ್ಞಾನಿಕವಾಗಿ ಕಾಮಗಾರಿಗೆ ಮುಂದಾಗಬೇಕು.
ಅಸಡ್ಡೆ ತೋರಿಸಿದರೆ ರಾಷ್ಟ್ರೀಯ ಹೆದ್ದಾರಿಗೆ ಮಣ್ಣು ಸುರಿದು ಬೃಹತ್ ಪ್ರತಿಭಟನೆ ನಡೆಸುವುದಾಗಿ ಸ್ಥಳೀಯರು ಎಚ್ಚರಿಸಿದರು. ಮಳೆಯಾದಾಗ ಸುಮಾರು 4 ಕಿ.ಮೀ ದೂರದಿಂದ ನೀರು ಬರುತ್ತದೆ. ಈ ಚರಂಡಿ ಕಿತ್ತುಹೋಗಿರುವುದರಿಂದ ಮಳೆಯ ನೀರಿನ ಜತೆಗೆ ಪ್ಲಾಸ್ಟಿಕ್ ತ್ಯಾಜ್ಯವೂ ಜಮೀನಿಗೆ ನುಗ್ಗುತ್ತದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.