ಧಾರ್ವಿುಕ ನಿಷ್ಠೆ, ಸಾಮಾಜಿಕ ಕಳಕಳಿಯ ಅಪೂರ್ವ ಸಂಗಮ ಡಾ.ಯತೀಶ್ವರ ಶಿವಾಚಾರ್ಯ ಸ್ವಾಮೀಜಿ

swamiji
Published on

ಸಾಮಾಜಿಕ ಕಾಳಜಿಯೊಂದಿಗೆ ಹಲವು ಕಾರ್ಯಕ್ರಮಗಳನ್ನು ರೂಪಿಸಿ, ಅನುಷ್ಠಾನಕ್ಕೆ ತರುತ್ತಿದ್ದ ಡಾ.ಯತೀಶ್ವರ ಶಿವಾಚಾರ್ಯ ಸ್ವಾಮೀಜಿ ಸದಾ ಜನಸಾಮಾನ್ಯರ ನಡುವೆ ಇರುತ್ತಿದ್ದ ಅಪೂರ್ವ ಸಂತ. ಹಾಗಾಗಿಯೇ ಅವರ ಭಕ್ತರ ಸಂಖ್ಯೆಯೂ ಬಹಳ. ಧಾರ್ವಿುಕ ಕಾರ್ಯಕ್ರಮಗಳಿಗೂ ಹೊಸ ಹಾಗೂ ಪರಿಣಾಮಕಾರಿ ಆಯಾಮ ನೀಡಿದ ಅವರು, ಅಧ್ಯಾತ್ಮದ ಸತ್ವವನ್ನು ಜನಮಾನಸಕ್ಕೆ ತಲುಪಿಸುತ್ತಿದ್ದರು.

ಮರುಳಸಿದ್ಧರ ವಂಶ ಪರಂಪರೆಯ ವ್ಯೋಮಕೇಶಯ್ಯ ಮತ್ತು ದೇವಿರಮ್ಮ ದಂಪತಿ ಕಿರಿಯ ಪುತ್ರರಾಗಿ ಡಾ.ಯತೀಶ್ವರ ಶಿವಾಚಾರ್ಯ ಸ್ವಾಮೀಜಿ 1974ರ ಜುಲೈ 29ರಂದು ಕುಪ್ಪೂರು ಶ್ರೀಮಠದಲ್ಲಿ ಜನ್ಮತಳೆದರು. ಶ್ರೀಮಠದ ಉತ್ತರಾಧಿಕಾರಿಯಾಗಬೇಕಿದ್ದ ಇವರ ಅಣ್ಣ ಚಂದ್ರಶೇಖರ ಅಕಾಲ ಮೃತ್ಯುವಿಗೆ ತುತ್ತಾದ್ದರಿಂದ ಮರುಳಸಿದ್ಧೇಶ್ವರರ ಅಪ್ಪಣೆ ಮೇರೆಗೆ ಪ್ರೌಢಶಿಕ್ಷಣ ಮುಗಿಸಿ, ಪದವಿ ಪೂರ್ವ ಕಾಲೇಜಿಗೆ ಕಾಲಿರಿಸುವ ಮುನ್ನವೇ ಪಟ್ಟಾಧಿಕಾರ ಸ್ವೀಕರಿಸಿದರು. 16ನೇ ವಯಸ್ಸಿನಲ್ಲೇ ಮಠದ ಉತ್ತರಾಧಿಕಾರಿಯಾದ ಇವರು, ಬೆಂಗಳೂರಿನ ಮಹಾಂತರ ಮಠ ನಂತರ ಮುಡುಕುತೊರೆಯಲ್ಲಿ ವೇದ, ಸಂಸ್ಕೃತ, ಆಗಮ, ಜ್ಯೋತಿಷ, ಶಿವಯೋಗ ಮುಂತಾದ ವಿದ್ಯೆಗಳನ್ನು ಹಾಗೂ ಪುರಾಣಗಳ ಜ್ಞಾನವನ್ನು ಪಡೆದರು. ‘ವೀರಶೈವ ಧಾರ್ವಿುಕ ಸಂಸ್ಕಾರಗಳು ಮತ್ತು ಸಾಮಾಜಿಕ ಸ್ವಾಸ್ಥ್ಯ’ ಎಂಬ ಮಹಾಪ್ರಬಂಧಕ್ಕೆ ಶ್ರೀಲಂಕಾದ ಕೊಲಂಬೊ ವಿಶ್ವವಿದ್ಯಾಲಯ ಡಾಕ್ಟರೇಟ್ ನೀಡಿ ಗೌರವಿಸಿತು. ಶ್ರೀಮಠದಲ್ಲಿ ತ್ರಿಕಾಲಪೂಜೆ, ದಾಸೋಹ, ಶಿವಾನುಭವಗೋಷ್ಠಿ, ಕಾರ್ತಿಕ ಪೂಜೆ, ದೀಪೋತ್ಸವ, ಭಾವೈಕ್ಯ ಸಮ್ಮೇಳನ, ತೀರ್ಥಕ್ಷೇತ್ರಗಳ ದರ್ಶನ ಭಾಗ್ಯ, ಹುಣ್ಣಿಮೆ, ಅಮಾವಾಸ್ಯೆ ಪೂಜೆಗಳು ಹೀಗೆ ನಿರಂತರವಾಗಿ ಧಾರ್ವಿುಕ ಚಟುವಟಿಕೆಗಳನ್ನು ಕೈಗೊಂಡರು.

ವಿವಿಧ ಧಾರ್ವಿುಕ ಕ್ಷೇತ್ರಗಳಿಗೆ ಪಾದಯಾತ್ರೆ ಮೂಲಕ ಭೇಟಿ ನೀಡಿರುವುದು ಶ್ರೀಗಳ ಹೆಗ್ಗಳಿಕೆ. 1995ರಲ್ಲಿ ಕುಪ್ಪೂರುಮಠದಿಂದ ಬಾಳೆಹೊನ್ನೂರಿನ ಶ್ರೀಮದ್ ರಂಭಾಪುರಿ ಮಠಕ್ಕೆ ಹಾಗೂ 2007ರಲ್ಲಿ ಕುಪ್ಪೂರಿನಿಂದ ಬುಕ್ಕಂಬುದಿ ಬೆಟ್ಟಕ್ಕೆ ಎರಡು ಬಾರಿ ಪಾದಯಾತ್ರೆ ಕೈಗೊಂಡರು. ಇವರ ಬಿತ್ತಿದ ಧಾರ್ವಿುಕ ಚಿಂತನೆಗಳ ಪರಿಣಾಮ ಅದೆಷ್ಟೋ ಜನರು, ವಿಶೇಷವಾಗಿ ಯುವಕರು ದುಶ್ಚಟಗಳನ್ನು ತೊರೆದು, ಸನ್ಮಾರ್ಗಕ್ಕೆ ಬಂದರು.

ಗುರುಪರಂಪರೆಯ ಹಾದಿ: ಶ್ರೀಮಠದ ಖ್ಯಾತಿ ಹಬ್ಬುತ್ತಿದ್ದಂತೆ ಮಠಕ್ಕೆ ಗುರುಗಳು ಬೇಕೆಂಬ ಭಕ್ತರ ಪ್ರೀತಿಯ ಒತ್ತಾಸೆಗೆ ಮೊದಲ ಗುರುಗಳಾಗಿ ನಂಜುಂಡ ದೇವರು ಬಂದರು. ನಂತರ ಚೆನ್ನವೀರದೇವರು, ಬಸವಲಿಂಗ ದೇವರು, ಗುರುಬಸವದೇಶಿಕ ದೇವರು, ಬಸವ ಮರಿದೇವರು, ಸಿದ್ಧವೀರ ಸ್ವಾಮಿಗಳು, ರುದ್ರಮುನಿ ದೇವರು, ಸಿದ್ಧಲಿಂಗ ಯತೀಂದ್ರರು, ಬಸವಲಿಂಗ ಸ್ವಾಮೀಜಿ, ಗುರುಲಿಂಗ ಸ್ವಾಮೀಜಿ, ಮರುಳಸಿದ್ಧದೇವರು, ಸಿದ್ಧೇಂದ್ರ ಸ್ವಾಮೀಜಿ, ವೀರಪ್ಪದೇವರು, ಇವರ ನಂತರ ಮಠದ ಮಠಾಧಿಪತಿಗಳಾಗಿ ಬಂದವರು ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ. ಇವರ ಬಳಿಕ ಡಾ.ಯತೀಶ್ವರ ಶಿವಾಚಾರ್ಯ ಸ್ವಾಮೀಜಿ ಮಠಾಧಿಪತಿಯಾಗಿದ್ದರು.

ನೀರಾವರಿ ಹೋರಾಟದಲ್ಲಿ ಮುಖ್ಯಪಾತ್ರ: ಚಿಕ್ಕನಾಯಕನಹಳ್ಳಿ ತಾಲೂಕಿಗೆ ಹೇಮಾವತಿ ಹರಿಯುವಲ್ಲಿ ಪ್ರಮುಖ ಪಾತ್ರ ವಹಿಸಿದರು ಡಾ.ಯತೀಶ್ವರ ಶಿವಾಚಾರ್ಯ ಸ್ವಾಮೀಜಿ. 2003ರಲ್ಲಿ ಈ ಸಂಬಂಧ ಹೋರಾಟದ ನೇತೃತ್ವ ವಹಿಸಿದರು. ಹುಳಿಯಾರು, ಚಿಕ್ಕನಾಯಕನಹಳ್ಳಿಗಳಲ್ಲಿ ನಡೆದ ಪ್ರತಿಭಟನೆಗಳಲ್ಲಿ ನೇರವಾಗಿ ಮುಂದಾಳತ್ವ ವಹಿಸಿದರು. ತಮ್ಮ ಮಾತಿನ ಶಕ್ತಿ ಮೂಲಕವೇ ಹೋರಾಟಕ್ಕೆ ಹುರಿದುಂಬಿಸುತ್ತಿದ್ದ ಶ್ರೀಗಳು ಎಲ್ಲರ ಸಹಕಾರ ಕೋರಲು ಬೀದಿಗಳಲ್ಲಿ ಕಾಲ್ನಡಿಗೆಯಲ್ಲಿ ಸಾಗುತ್ತಿದ್ದರು. 2017ರಲ್ಲಿ ಚಿಕ್ಕನಾಯಕನಹಳ್ಳಿಯಿಂದ ಕೆ.ಬಿ.ಕ್ರಾಸ್​ವರೆಗೆ ಪಾದಯಾತ್ರೆ ಮಾಡುವ ಮೂಲಕ ಹೇಮಾವತಿ ನೀರಾವರಿ ಹೋರಾಟಕ್ಕೆ ಬಲ ತುಂಬಿದರು. ಅಷ್ಟೇ ಅಲ್ಲ, ಕೊಬ್ಬರಿ ಬೆಲೆ ಹೆಚ್ಚಳಕ್ಕೆ ಆಗ್ರಹಿಸಿ ಕುಪ್ಪೂರು ಮಠದಿಂದ ತೋಟಗಾರಿಕೆ ಇಲಾಖೆಯವರೆಗೆ ನಡೆದ ಪಾದಯಾತ್ರೆಯ ನೇತೃತ್ವ ವಹಿಸಿದ್ದರು.

ಡಾ.ಯತೀಶ್ವರ ಶಿವಾಚಾರ್ಯ ಸ್ವಾಮೀಜಿ ನಿಧನದಿಂದ ಶಿವಾಚಾರ್ಯ ಬಳಗಕ್ಕೆ ತುಂಬಲಾರದ ನಷ್ಟವಾಗಿದೆ. ಸದಾ ಧರ್ಮಪ್ರಚಾರದಲ್ಲಿ ನಿರತರಾಗಿದ್ದ ಶ್ರೀಗಳು ಆಕಸ್ಮಿಕವಾಗಿ ಲಿಂಗೈಕ್ಯರಾದ ಸುದ್ದಿ ಕೇಳಿ ಎಲ್ಲ ಭಕ್ತರಿಗೂ ಆಘಾತವಾಗಿದೆ. ಕಾಶಿ ಪೀಠದ ಕಾರ್ಯಕ್ರಮ ಗಳಲ್ಲಿ ತಮ್ಮ ಭಕ್ತರೊಂದಿಗೆ ಬಂದು ಅವರು ಸೇವೆ ಸಲ್ಲಿಸಿದ್ದು ಅವಿಸ್ಮ ರಣೀಯ. ಶ್ರೀಸಿದ್ಧಾಂತ ಶಿಖಾಮಣಿ ಪಾರಾಯಣದ ಸಿಡಿಗಳನ್ನು ತಯಾರಿ ಸುವ ಶ್ರೀಪೀಠದ ಯೋಜನೆಯಲ್ಲಿ ಶ್ರೀಗಳು ಅಪೂರ್ವ ಸೇವೆ ಸಲ್ಲಿಸಿದ್ದರು. ಶ್ರೀಗಳ ಆತ್ಮಕ್ಕೆ ಚಿರಶಾಂತಿ ದೊರೆಯಲಿ. ಅವರ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಶ್ರೀ ಜಗದ್ಗುರು ಪಂಚಾಚಾರ್ಯರು ಶ್ರೀಮಠದ ಸಮಸ್ತ ಶಿಷ್ಯರಿಗೆ ಕೊಡಲಿ.

| ಡಾ. ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಕಾಶಿ ಜಗದ್ಗುರು

ಸಂಕೇಶ್ವರರ ಸಂತಾಪ

ಡಾ.ಯತೀಶ್ವರ ಶಿವಾಚಾರ್ಯ ಸ್ವಾಮೀಜಿ ಅವರ ಅಕಾಲಿಕ ಅಗಲಿಕೆ ನೋವು ತಂದಿದೆ ಎಂದು ವಿಆರ್​ಎಲ್ ಸಮೂಹ ಸಂಸ್ಥೆ ಚೇರ್ಮನ್ ಡಾ. ವಿಜಯ ಸಂಕೇಶ್ವರ ಮತ್ತು ವ್ಯವಸ್ಥಾಪಕ ನಿರ್ದೇಶಕ ಆನಂದ ಸಂಕೇಶ್ವರ ಸಂತಾಪ ಸೂಚಿಸಿದ್ದಾರೆ. ಕುಪ್ಪೂರು ಮಠದ ಮೂಲಕ ಅವರು ದೊಡ್ಡ ಮಟ್ಟದಲ್ಲಿ ಧಾರ್ವಿುಕ, ಸಾಮಾಜಿಕ ಕಾರ್ಯಗಳನ್ನು ಮಾಡಿದರು. ರೈತರ ಸಮಸ್ಯೆಗಳಿಗೂ ದನಿಯಾದರು ಎಂದು ಸ್ಮರಿಸಿದ್ದಾರೆ.

ಡಾ.ಯತೀಶ್ವರ ಶಿವಾಚಾರ್ಯ ಸ್ವಾಮೀಜಿ ಕೈಲಾಸವಾಸಿ ಗಳಾದ ವಿಷಯ ದುಃಖ ತಂದಿದೆ. ಪೂಜ್ಯರ ಕಾಲದಲ್ಲಿ ಕುಪ್ಪೂರು ಮಠ ಬಹಳ ಎತ್ತರಕ್ಕೆ ಬೆಳೆದಿದೆ, ಅನೇಕ ಕಾರ್ಯಕ್ರಮ ಹಮ್ಮಿಕೊಂಡು ಸಮಾಜದ ಅಭಿವೃದ್ಧಿಗೆ ಮತ್ತು ಧರ್ಮ

ಪ್ರಚಾರಕ್ಕೆ ಶ್ರಮಿಸುತ್ತಿದ್ದರು.

| ಸಿದ್ಧಲಿಂಗ ಸ್ವಾಮೀಜಿ ತುಮಕೂರು ಸಿದ್ಧಗಂಗಾ ಮಠಾಧ್ಯಕ್ಷರು

ಹಲವು ಗಣ್ಯರ ಭೇಟಿ: ಕುಪ್ಪೂರು ಮಠಕ್ಕೆ ನಾಡಿನ ಅನೇಕ ಗಣ್ಯರು ಭೇಟಿ ನೀಡಿ ಶ್ರೀಗಳ ಕೃಪಾಶೀರ್ವಾದ ಪಡೆದಿದ್ದರು. ಮಾಜಿ ಸಿಎಂ ಯಡಿಯೂರಪ್ಪ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಭಾಗ ವಹಿಸಿ 3 ಕೋಟಿ ರೂ. ಅನುದಾನ ಘೋಷಿಸಿದ್ದರು. ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಅವರು ಕುಟುಂಬಸಮೇತರಾಗಿ ಶ್ರೀಮಠಕ್ಕೆ ಭೇಟಿ ನೀಡಿ, ಆಶೀರ್ವಾದ ಪಡೆದಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net