ಕನ್ನಡ ಪತ್ರಿಕೋದ್ಯಮದಲ್ಲಿ ಬಹು ದೊಡ್ಡ ಬದಲಾವಣೆ ತಂದವರು ಡಾ.ವಿಜಯ ಸಂಕೇಶ್ವರ-ಕೇಂದ್ರ ಸಚಿವ ಪ್ರಲ್ಹಾದ ಜೋಶಿ

Dr.Vijay Sankeshwar School
Published on

ಕಾರವಾರ/ಯಲ್ಲಾಪುರ: ಕಾಲ ಬದಲಾಗುತ್ತಿದೆ.5ಜಿ ಯುಗದಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ವಿಫುಲ ಅವಕಾಶಗಳಿದ್ದು, ಅದಕ್ಕೆ ತಕ್ಕಂತೆ ಬದಲಾಗಿ, ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಂಡು ಬೆಳೆಯಿರಿ ಎಂದು ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಲ್ಹಾದ ಜೋಶಿ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಯಲ್ಲಾಪುರದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯಲ್ಲಿ ಡಾ.ವಿಜಯ ಸಂಕೇಶ್ವರ ಮೀಡಿಯಾ ಸ್ಕೂಲ್‌ನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.

ಇನ್ನು ಕೆಲವೇ ದಿನಗಳಲ್ಲಿ 5ಜಿ ದೇಶದ ಎಲ್ಲ ಮೂಲೆಗಳಿಗೂ ತಲುಪಲಿದೆ. ಭಾರತೀಯ ತಂತ್ರಜ್ಞಾನದಲ್ಲೇ 6ಜಿ ಅಭಿವೃದ್ಧಿಪಡಿಸಲಾಗುತ್ತಿದೆ. ಸದ್ಯದಲ್ಲೇ ಭಾರತ ವಿಶ್ವದ ಮೂರನೇ ಅತಿ ದೊಡ್ಡ ಆರ್ಥಿಕತೆಯಾಗಿ ಬೆಳೆಯುತ್ತಿದೆ. ಇಲ್ಲಿರುವ ದೊಡ್ಡ ಸಂಖ್ಯೆಯ ಯುವಕರು, ಅವರಲ್ಲಿರುವ ಕೌಶಲ ಭಾರತಕ್ಕೆ ವರವಾಗಿದೆ ಎಂದರು.
ಸಾಧನೆ ಮಾಡಬೇಕು ಎಂದರೆ ಅದಕ್ಕೆ ಕನಸು ಇರಬೇಕು. ಅದನ್ನು ಸಾಕಾರ ಮಾಡುವ ಘಟ್ಟಿ ನಿರ್ಣಯ, ಪರಿಶ್ರಮ, ಯೋಜಿಸಿದ ಕೆಲದಕ್ಕೆ ಬೆನ್ನು ಹತ್ತುವ ಮನೋಭಾವ ಇರಬೇಕು.

ಪತ್ರಕರ್ತರಾಗುವವರು ಓದಬೇಕು, ಓದಿದ್ದನ್ನು ಮಂಥನ ಮಾಡಬೇಕು. ತಿಳಿದ ವಿಷಯಗಳನ್ನು ಪ್ರಶ್ನೆ ಮಾಡಿ, ವಿಶ್ಲೇಷಣೆ ಮಾಡಿ ಒಪ್ಪುವ ಮನಸ್ಥಿತಿ ಬೇಕು. ಪತ್ರಕರ್ತನಾಗುವವನಿಗೆ ಪ್ರಸ್ತುತ ವಿದ್ಯಮಾನ, ಅರ್ಥಿಕತೆ, ನ್ಯಾಯಶಾಸ್ತ್ರ, ತರ್ಕ ಬುದ್ಧಿ ಇರಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಪತ್ರಕರ್ತನಿಗೆ ಕಾಮನ್ ಸೆನ್ಸ್ ಇರಬೇಕು. ಅದನ್ನು ಶಾಲೆಯಲ್ಲಿ ಹೇಳಿಕೊಡುವುದಿಲ್ಲ. ಕೇಳಿ ಕಲಿಯಬೇಕು ಎಂದರು.
ವಿಜಯ ಸಂಕೇಶ್ವರ ಮಾದರಿ:
ಈ ಹಿಂದೆ ಕನ್ನಡ ಪತ್ರಿಕೋದ್ಯಮ ನಿಂತ ನೀರಾಗಿತ್ತು. ಆಗಿನ ಪತ್ರಿಕಾ ಮಾಲೀಕರೂ ಪತ್ರಿಕೋದ್ಯಮದ ಬದಲಾವಣೆಯ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಕನ್ನಡ ಪತ್ರಿಕೋದ್ಯಮದಲ್ಲಿ ಬಹು ದೊಡ್ಡ ಬದಲಾವಣೆ ತಂದಿರುವುದು ಡಾ.ವಿಜಯ ಸಂಕೇಶ್ವರ ಅವರು. ಪತ್ರಿಕೆ ಮಾಡಿದರೆ, ನಷ್ಟ ಅನುಭವಿಸುತ್ತೀರಿ ಎಂದು ಹಲವರು ಅವರಿಗೆ ಸಲಹೆ ನೀಡಿದ್ದರು. ಆದರೆ, ಅವರು ಹಿಂದಡಿ ಇಡಲಿಲ್ಲ. ಅವರು ಮೊದಲು ಪ್ರಾರಂಭಿಸಿದ ಪತ್ರಿಕೆ ಮಾರುವಾಗ ಅತ್ಯಧಿಕ ಪ್ರಸರಣ ಸಂಖ್ಯೆ ತಲುಪಿತ್ತು. ಈಗ ಪ್ರಾರಂಭಿಸಿದ ವಿಜಯವಾಣಿ ಕೂಡ ರಾಜ್ಯದ ನಂಬರ್ 1 ಪತ್ರಿಕೆಯಾಗಿದೆ. ಮೀಡಿಯಾ ಸ್ಕೂಲ್ ಗೆ ವಿಜಯ ಸಂಕೇಶ್ವರ ಅವರ ಹೆಸರಿಟ್ಟಿರುವುದು ಸ್ತುತ್ಯಾರ್ಹ. ಇದು ಕನ್ನಡ ಪತ್ರಿಕೋದ್ಯಮದಲ್ಲಿ ಮಹತ್ವವದ ದಿನ ಎಂದರು.

ವಿಆರ್ ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ.ವಿಜಯ ಸಂಕೇಶ್ವರ ಅವರು, ದಿಕ್ಸೂಚಿ ಭಾಷಣ ಮಾಡಿದರು.
ಧಾರವಾಡ ಕವಿವಿ ಕುಲಪತಿ.ಕೆ.ಬಿ.ಗುಡಸಿ ಮಾತನಾಡಿ, ಪತ್ರಿಕೋದ್ಯಮದಲ್ಲಿ ಇನ್ನೂ ಕ್ರೀಡೆ, ಅಪರಾಧ ಮುಂತಾದ ಕೆಲ ವಿಚಾರಗಳ ಬಗ್ಗೆ ವರದಿ ಮಾಡಬಲ್ಲ ತಜ್ಞರ ಕೊರತೆ ಕಾಡುತ್ತಿದೆ ಎನಿಸುತ್ತಿದೆ. ಮಾತ್ರವಲ್ಲದೇ ಭಾಷೆಯ ಸಂವಹನದ ಕೊರತೆ ಕಾಡುತ್ತಿದೆ. ಅದನ್ನು ಸಾಕಾರ ಮಾಡುವ ನಿಟ್ಟಿನಲ್ಲಿ ಡಾ.ವಿಜಯ ಸಂಕೇಶ್ವರ ಮೀಡಿಯಾ ಸ್ಕೂಲ್ ಮುಂದಾಗಲಿ ಎಂದರು.
ವಿಶ್ವದರ್ಶನ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ, ಹಿರಿಯ ಪತ್ರಕರ್ತ, ಹರಿಪ್ರಕಾಶ ಕೋಣೆಮನೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ತನ್ನ ದುಡಿಮೆಯ ಪ್ರತಿ ಕ್ಷಣವನ್ನು ದೇಶಕ್ಕಾಗಿ ಮುಡಿಪಾಗಿಟ್ಟವರು, ಪತ್ರಿಕೋದ್ಯಮದಲ್ಲಿ ಗುಣಾತ್ಮಕ ಬದಲಾವಣೆ ತಂದವರು ಡಾ. ವಿಜಯ ಸಂಕೇಶ್ವರ ಅವರು. ಅವರಿಂದ ಪತ್ರಿಕೋದ್ಯಮ ಹಿಗ್ಗಿತು ಎಂದು ಬಣ್ಣಿಸಿದರು.ನಮ್ಮ ಸಂಸ್ಥೆಯ ಉದ್ದೇಶ ಕೇವಲ ರ‍್ಯಾಂಕ್ ಪಡೆಯುವುದಲ್ಲ. ಉತ್ತಮ ನಾಗರಿಕರನ್ನು ತಯಾರು ಮಾಡುವುದಾಗಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಕಮ್ಯುನಿಕೇಶನ್ ಸ್ಕಿಲ್ ಇರದು. ಅದನ್ನು ವ್ಯಕ್ತಿ ನಿರ್ಮಾಣದ ರಾಷ್ಟ್ರ ನಿರ್ಮಾಣದ ಉದ್ದೇಶ ಸಾಕಾರ ಮಾಡಲು ಹೊರಟಿದ್ದೇವೆ. ಶೀಘ್ರದಲ್ಲಿ ವಿಶ್ವ ದರ್ಶನದಲ್ಲಿ ಎಂಸಿಎ ಸ್ನಾತಕೋತ್ತರ ಪದವಿ ಪ್ರಾರಂಭಿಸಲಿದ್ದೇವೆ ಎಂದರು.
ಮೀಡಿಯಾ ಸ್ಕೂಲ್ ಪ್ರಾಚಾರ್ಯ ನಾಗರಾಜ ಭಟ್ ಇಳೆಗುಂಡಿ, ಇಂದಿನ ಸಮಾಕಾಲೀನ ಮಾಧ್ಯಮಕ್ಕೆ ಪೂರಕವಾಗುವ ರೀತಿಯಲ್ಲಿ ಮುದ್ರಣ, ಟಿವಿ, ಡಿಜಿಟಲ್ ಪತ್ರಿಕೋದ್ಯಮಕ್ಕೆ ಬೇಕಾದ ಪ್ರತಿಭೆಗಳನ್ನು ಈ ಸ್ಕೂಲ್ ನಲ್ಲಿ ಸಿದ್ಧ ಮಾಡಲಿದ್ದೇವೆ ಎಂದರು.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯದಿಂದ ಡಾಕ್ಟರ್ ಆಫ್ ಸೈನ್ಸ್ ಪದವಿ ಪಡೆದ ಮೈಸೂರು ಮರ್ಕಂಟೈಲ್ ಕಂಪನಿಯ ಮಾಲೀಕ, ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ನಿರ್ದೇಶಕ ಡಾ.ಎಚ್.ಎಸ್.ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ನರಸಿಂಹ ಕೋಣೆಮನೆ ವಂದಿಸಿದರು. ಡಿ.ಕೆ.ಗಾಂವಕರ್ ಸಂವಾದದ ನಿರ್ವಹಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net