

ಬೆಂಗಳೂರು: ಆಧುನಿಕತೆ ಬೆಳೆದಂತೆ ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋಗುತ್ತಿರುವ ಯುವ ಜನಾಂಗ ಮೂಲ ಧರ್ಮಾಚರಣೆಗಳಿಂದ ದೂರ ಸರಿಯಬಾರದು ಎಂದು ಬಾಳೆಹೊನ್ನೂರಿನ ಶ್ರೀರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಕರೆ ನೀಡಿದ್ದಾರೆ.
ಬಸವೇಶ್ವರನಗರದಲ್ಲಿ ವೀರಶೈವ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಆಯೋಜಿಸಿದ್ದ ಇಷ್ಟಲಿಂಗ ಮಹಾಪೂಜೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ವಿಜ್ಞಾನ ಎಷ್ಟೇ ಬೆಳೆದರು ಅದರಿಂದ ಸಮಾಧಾನ ಸಾಧ್ಯವಿಲ್ಲ. ಮನುಷ್ಯನ ಮಾನಸಿಕ ನೆಮ್ಮದಿಗೆ ಧರ್ಮಾಚರಣೆಗಳ ಅವಶ್ಯಕ. ಈ ನಿಟ್ಟಿನಲ್ಲಿ ಶ್ರೀಜಗದ್ಗುರು ರೇಣುಕಾದಿ ಪಂಚಾಚಾರ್ಯರು ಸ್ಥಾಪಿಸಿದ ವೀರಶೈವ ಧರ್ಮವು ಸಕಲ ಜೀವಾತ್ಮರಿಗೆ ಲೇಸನ್ನು ಬಯಸುವ ವಿಶಾಲ ತತ್ವಗಳಿಂದ ಕೂಡಿದೆ. ಪರಸ್ಪರ ದ್ವೇಷ ಅಸೂಯೆಗಳು ಎಲ್ಲೆಲ್ಲೂ ತಾಂಡವವಾಡುತ್ತಿರುವ ಇಂದಿನ ದಿನಮಾನಗಳಲ್ಲಿ ಎಲ್ಲರಲ್ಲೂ ಪ್ರೀತಿ, ಭಕ್ತಿಯನ್ನು ಮೂಡಿಸಿ ಸಾಮರಸ್ಯದ ಜೀವನಕ್ಕೆ ಧರ್ಮ ಅಗತ್ಯವಾಗಿದೆ. ವೀರಶೈವ ಧರ್ಮೀಯರ ದೇಹವೇ ದೇಗುಲವಾಗಿದ್ದು, ಮಹಾದೇವನನ್ನು ಇಷ್ಟಲಿಂಗದ ರೂಪದಲ್ಲಿ ಆರಾಧಿಸುವ ಅದ್ಭುತ ವ್ಯವಸ್ಥೆಯನ್ನು ಧರ್ಮಾಚಾರ್ಯರು ನೀಡಿದ್ದಾರೆ. ಶ್ರೀಜಗದ್ಗುರು ರೇಣುಕಾಚಾರ್ಯರು ಅಗಸ್ತ್ಯ ಮುನಿಗೆ ಬೋದಿಸಿರುವ ಶ್ರೀ ಸಿದ್ಧಾಂತ ಶಿಖಾಮಣಿ ಗ್ರಂಥದಲ್ಲಿ ‘ಇಷ್ಟಲಿಂಗಮಿದಂ ಸಾಕ್ಷಾತ್ ಅನಿಷ್ಟ ಪರಿಹಾರಕಂ’ ಎಂದು ತಿಳಿಸಿದ್ದು, ಪ್ರತಿನಿತ್ಯ ಇಷ್ಟಲಿಂಗ ಪೂಜೆ ಮಾಡುವುದರಿಂದ ಬಂದಿರುವ ಎಲ್ಲ ಕಷ್ಟ ಕಾರ್ಪಣ್ಯಗಳನ್ನು ಕಳೆದು ನೆಮ್ಮದಿಯ ಜೀವನವನ್ನು ನಡೆಸಲು ಸಾಧ್ಯ. ಆದ್ದರಿಂದ ವೀರಶೈವ ಲಿಂಗಾಯತ ಸಮಾಜದ ಬಂಧುಗಳು ಅದರಲ್ಲೂ ವಿಶೇಷವಾಗಿ ಯುವಜನಾಂಗ ಕಡ್ಡಾಯವಾಗಿ ಇಷ್ಟಲಿಂಗಧಾರಿಗಳಾಗಿ ನಿತ್ಯ ಇಷ್ಟಲಿಂಗಪೂಜೆಯನ್ನು ತಪ್ಪದೆ ಮಾಡುವಂತೆ ಶ್ರೀರಂಭಾಪುರಿ ಜಗದ್ಗುರುಗಳು ಕರೆ ನೀಡಿದರು.
ಸಮಾರಂಭದಲ್ಲಿ ಎಡೆಯೂರು, ಸಿದ್ಧರಬೆಟ್ಟ, ಸರಗೂರು ಮಠದ ಶ್ರೀಗಳು, ಸೇವಾಕರ್ತರಾದ ಶಾರದಮ್ಮ ಪಿ.ಎಸ್.ವಿಶ್ವನಾಥ್ ದಂಪತಿಗಳು, ವೀರಶೈವ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಸಿದ್ಧಲಿಂಗಾರಾಧ್ಯರು, ಗಾನಸುಧೆ ಭಜನಾ ಮಂಡಳಿಯ ಶಿವಶಂಕರ ಶಾಸ್ತ್ರಿಗಳು, ಪಾಲಾಕ್ಷ ಶಾಸ್ತ್ರಿಗಳು, ಮಾಗಡಿ ಚಂದ್ರಶೇಖರ, ಬೀರೂರು ಶಿವಸ್ವಾಮಿ, ಆರ್.ಆರ್.ಹಿರೇಮಠ, ನಂದೀಶ್ ಮತ್ತಿತರ ಮುಖಂಡರು ಪಾಲ್ಗೊಂಡಿದ್ದರು.