

ಬೆಂಗಳೂರು: ಕರ್ನಾಟಕವು ಜ್ಞಾನ ಮತ್ತು ತಾಂತ್ರಿಕ ಪ್ರಗತಿಯ ಕೇಂದ್ರವಾಗಿದ್ದು, ಭವಿಷ್ಯದಲ್ಲಿ ಕರ್ನಾಟಕ ಇನ್ನಷ್ಟು ಪರಿಪೂರ್ಣವಾಗಲಿದೆ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಶೆಲ್ ಇಂಡಿಯಾ ಸಂಸ್ಥೆಯು ಶುಕ್ರವಾರ ಆಯೋಜಿಸಿದ್ದ ‘ಚೇಂಜ್ ಮೇಕರ್ಸ್ ಆಫ್ ಟುಮಾರೋ (ನಾಳೆಗಾಗಿ ಬದಲಾವಣೆಗಾರರು) 2024ರ ಎರಡನೇ ಆವೃತ್ತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸೃಜಶೀಲ ಮತ್ತು ಚತುರ ಯುವ ಸಮೂಹ, ಉದ್ಯಮದ ನಾಯಕರು ಹಾಗೂ ನವೋದ್ಯಮಿಗಳನ್ನು ಒಂದೇ ವೇದಿಕೆಯಡಿ ಸೇರಿಸುವ ಚೇಂಜ್ ಮೇಕರ್ಸ್ ಆಫ್ ಟುಮಾರೋ ಕಾರ್ಯಕ್ರಮ ಭವಿಷ್ಯದ ದಿನಗಳನ್ನು ಇನ್ನಷ್ಟು ಉತ್ತಮಗೊಳಿಸಲು ಪೂರಕವಾಗಿದ್ದು, ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕವಾಗಿದೆ. ಪ್ರತಿಭೆಗಳನ್ನು ಗುರುತಿಸಿ, ಪೋಷಿಸುವಲ್ಲಿ ಶೆಲ್ ಇಂಡಿಯಾ ತೋರುತ್ತಿರುವ ಬದ್ಧತೆ ಶ್ಲಾಘನೀಯ. ಇಂತಹ ಕಾರ್ಯಕ್ರಮಗಳಿಂದ ಯುವಜನರ ಮನಸ್ಥಿತಿ ಮತ್ತು ಕೌಶಲ್ಯ ಹೆಚ್ಚಾಗಲು ಸಹಾಯವಾಗುತ್ತದೆ ಎಂದು ಮಧು ಬಂಗಾರಪ್ಪ ತಿಳಿಸಿದರು.
ದಿನಪೂರ್ತಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಪರಿಣತರು, ನವೋದ್ಯಮಿಗಳು ಭವಿಷ್ಯದ ಇಂಧನದ ರೂಪುರೇಷೆಗಳನ್ನು ಸಿದ್ಧಪಡಿಸುವ ಬಗ್ಗೆ ವಿಸ್ತೃತವಾಗಿ ಚರ್ಚೆ ನಡೆಸಿದರು.
ಕಾರ್ಯಕ್ರಮದಲ್ಲಿ ಇಂಧನ ಮತ್ತು ಜಲಸಂಪನ್ಮೂಲ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ, ಶೆಲ್ ಗ್ರೂಪ್ ಆಫ್ ಕಂಪನೀಸ್ ಅಧ್ಯಕ್ಷ ಮಾನ್ಸಿ ಮದನ್ ತ್ರಿಪಾಠಿ, ಹಿಟಾಚಿ ಕಂಪನಿಯ ಸಿಇಒ ವೇಣು ನುಗುರಿ, ವೋಲ್ವೋ ಗ್ರೂಪ್ ಇಂಡಿಯಾದ ಎಂ.ಡಿ. ಕಮಲ್ ಬಾಲಿ, ನಿರಾಣಿ ಗ್ರೂಪ್‌ನ ವಿಜಯ್ ನಿರಾಣಿ ಹಾಗೂ ವಿಪ್ರೋ, ಮೈಕ್ರೋಸಾಫ್ಟ್, ಆಕ್ಸೆಂಚರ್, ಇನ್ಫೋಸಿಸ್, ಎಚ್‌ಪಿ ಮತ್ತು ಟಾಟಾ ಕನ್ಸಲ್ಟೆನ್ಸಿ ಮತ್ತಿತರ ಕಂಪನಿಗಳ ಪ್ರತಿನಿಧಿಗಳು ಪಾಲ್ಗೊಂಡು ಭವಿಷ್ಯದ ಇಂಧನ ಅಗತ್ಯ ಮತ್ತು ಪರ್ಯಾಯ ಮಾರ್ಗ ಕುರಿತು ಚರ್ಚೆ ನಡೆಸಿದರು.
-ಗೌರವ ಗುಪ್ತಾ, ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ