ಕಲಬುರಗಿ ರಂಗಾಯಣಕ್ಕೆ ಜಂಗಮಶೆಟ್ಟಿ ಸಾರಥ್ಯ

KLB Dr.Sujata Jangamshetty
Published on

ಡಾ.ಸುಜಾತಾಗೆ ಒಲಿದ ನಿರ್ದೇಶಕಿ ಸ್ಥಾನ | ರಂಗ ಸೇವೆಯೇ ಜೀವನವಾಗಿಸಿಕೊಂಡ ರಂಗಕರ್ಮಿ



ವಿಜಯವಾಣಿ ಸುದ್ದಿಜಾಲ ಕಲಬುರಗಿ
ಹವ್ಯಾಸಿ ರಂಗಭೂಮಿಯ ರಂಗಕರ್ಮಿ, ಸಾಹಿತಿ, ಉದ್ಘೋಷಕಿ, ನಟಿ ಡಾ.ಸುಜಾತಾ ಜಂಗಮಶೆಟ್ಟಿ ಅವರನ್ನು ಕಲಬುರಗಿ ರಂಗಾಯಣ ನಿರ್ದೇಶಕರನ್ನಾಗಿ ನೇಮಕ ಮಾಡಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧೀನ ಕಾರ್ಯದರ್ಶಿ ಎಸ್.ಗೀತಾಬಾಯಿ ಆದೇಶ ಹೊರಡಿಸಿದ್ದಾರೆ.
ಕಳೆದ ಮೂರು ದಶಕದಿಂದ ರಂಗಭೂಮಿ ಕ್ಷೇತ್ರದಲ್ಲಿ ಸಕ್ರಿಯವಾಗಿರುವ ಡಾ.ಸುಜಾತಾ ಜಂಗಮಶೆಟ್ಟಿ ಬಾಲ್ಯದಿಂದಲೇ ರಂಗಭೂಮಿ ನೋಡುತ್ತ ಬೆಳೆದವರು. ಸೇಡಂನಲ್ಲಿನ ಅಜ್ಜನ ಮನೆಗೆ ಹೋದಾಗ ಬಯಲಾಟ, ದೊಡ್ಡಾಟ ಸೇರಿ ರಂಗಕಲೆಗಳ ಬಗ್ಗೆ ಆಸಕ್ತಿ ಬೆಳೆಸಿಕೊಂಡವರು.
ಗುಲ್ಬರ್ಗ ವಿಶ್ವವಿದ್ಯಾಲಯದ ಕನ್ನಡದಲ್ಲಿ ಎಂ.ಎ, ಪಿಎಚ್.ಡಿ ಪಡೆದಿದ್ದರೂ, ನಾಟಕದಲ್ಲಿ ಅಭಿನಯಿಸುತ್ತಿದ್ದರು. ನಂತರ ರಂಗ ಸಾಹಿತ್ಯದಲ್ಲಿ ತೊಡಗಿಸಿಕೊಂಡು ವಿಮರ್ಶೆ, ಲೇಖನ ಬರೆಯಲು ಆರಂಭಿಸಿ, ರಂಗಭೂಮಿ, ಸಾಹಿತ್ಯದಲ್ಲಿ ಸಕ್ರಿಯವಾಗಿದ್ದಾರೆ. ಮೂರು ದಶಕಕ್ಕೂ ಅಧಿಕ ವರ್ಷ ರಂಗಭೂಮಿ, ನಟನೆ ಸೇರಿ ಎಲ್ಲ ವಿಭಾಗದಲ್ಲೂ ಕಾರ್ಯನಿರ್ವಹಿಸಿದ ಬಹುಮುಖ ಪ್ರತಿಭೆಯಾಗಿದ್ದಾರೆ.
ಆಕಾಶವಾಣಿ ನಾಟಕ ವಿಭಾಗದಲ್ಲಿ ಕಲಾವಿದೆ, ದೂರದರ್ಶನ, ಆಕಾಶವಾಣಿಯಲ್ಲಿ ಉದ್ಘೋಷಕಿಯಾಗಿ, ಧಾರವಾಹಿ, ಸಿನೆಮಾಗಳಲ್ಲಿ ಅಭಿನಯಿಸಿದ್ದಾರೆ. ಕರ್ನಾಟಕ ನಾಟಕ ಅಕಾಡೆಮಿ ಸದಸ್ಯರಾಗಿ, ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿವಿ ಸಿಂಡಿಕೇಟ್ ಸದಸ್ಯೆ, ರಂಗಸಮಾಜ (ರಂಗಾಯಣ), ಚಲನಚಿತ್ರದ ಸಬ್ಸಿಡಿ ಕಮಿಟಿ, ಗುಬ್ಬಿ ವೀರಣ್ಣ ರಂಗ ಪ್ರಶಸ್ತಿ ಸಮಿತಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಜಾಗೃತಿ ಸಮಿತಿ, ಕನ್ನಡ ಸಾಹಿತ್ಯ ಪರಿಷತ್‌ನ ಪ್ರಕಟಣಾ ಸಮಿತಿ, ಗ್ರಂಥಾಲಯ ಪ್ರಾಧಿಕಾರ, ಕಸಾಪ ದತ್ತಿ ಪ್ರಶಸ್ತಿ ಆಯ್ಕೆ ಸಮಿತಿ, ಕನ್ನಡ ಪುಸ್ತಕ ಪ್ರಾಧಿಕಾರದ ಪುಸ್ತಕಗಳ ಸಗಟು ಖರೀದಿಗೆ ಬಂದ ಕೃತಿಗಳ ಆಯ್ಕೆ ಸಮಿತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ವಾರ್ಷಿಕ ಪುಸ್ತಕ ಮೌಲ್ಯ ಮಾಪನ ಸೇರಿ ವಿವಿಧ ಸಮಿತಿಗಳ ಸದಸ್ಯೆಯಾಗಿ ಕಾರ್ಯನಿರ್ವಹಿಸಿದ್ದಾರೆ.


ರಂಗ ಸೇವೆಗೆ ಒಲಿದು ಬಂದ ಗೌರವಗಳು
ಡಾ.ಸುಜಾತಾ ಜಂಗಮಶೆಟ್ಟಿ ಅವರ ರಂಗಭೂಮಿ, ಸಾಹಿತ್ಯ ಸೇವೆಗೆ ಸಾಕಷ್ಟು ಗೌರವಗಳು ದೊರೆತಿವೆ. ಕರ್ನಾಟಕ ನಾಟಕ ಅಕಾಡೆಮಿ ವಾರ್ಷಿಕ ಪ್ರಶಸ್ತಿ, ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ, ನಾಟಕ ಅಕಾಡೆಮಿ ಸಿ.ಜಿ.ಕೆ ಯುವ ರಂಗಪ್ರಶಸ್ತಿ, ಸರ್.ಎಂ.ವಿಶ್ವೇಶ್ವರಯ್ಯ ಅವರ ಹೆಸರಲ್ಲಿ ನೀಡುವ ವಿಶ್ವಚೇತನ ಪ್ರಶಸ್ತಿ, ಅಖಿಲ ಭಾರತೀಯ ಕವಿಯಿತ್ರಿ ಸಮ್ಮೇಳನದಲ್ಲಿ ಎಂಐಪಿಸಿ ವಿಶೇಷ ಪ್ರಶಸ್ತಿ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘ ನೀಡುವ ಅತ್ಯುತ್ತಮ ಶಿಕ್ಷಕಿ, ವಿ.ಜಿ.ಮಹಿಳಾ ಮಹಾವಿದ್ಯಾಲಯಲ್ಲಿ ಅತ್ಯುತ್ತಮ ಅಭಿನಯಕ್ಕಾಗಿ ನೀಡುವ ಉತ್ತಮ ನಟನಾ ಪ್ರಶಸ್ತಿ ಸೇರಿ ಹಲವು ಸಮ್ಮಾನಗಳಿಗೆ ಭಾಜನರಾಗಿದ್ದಾರೆ.


ರಂಗಸoಗಮ ಕಲಾವೇದಿಕೆಯಡಿ ಸಮಾಜಕ್ಕೆ ಶಕ್ತಿ
ರಂಗ ಸಂಗಮ ಕಲಾವೇದಿಕೆ ಅಡಿ ನಾಟಕೋತ್ಸವ, ವಿಚಾರ ಸಂಕಿರಣ, ಸಂವಾದ, ಪ್ರಶಸ್ತಿ ಪ್ರದಾನ, ಸಂಗೀತ ಕಾರ್ಯಕ್ರಮ, ನಾಟ್ಯ ಕಾರ್ಯಕ್ರಮ, ಪುಸ್ತಕ ಬಿಡುಗಡೆ, ಮಹಿಳಾಪರ ಕಾರ್ಯಕ್ರಮ ಸೇರಿ ಹಲವು ಚಟುವಟಿಕೆಗಳನ್ನು ನಡೆಸುವ ಮೂಲಕ ರಂಗ ಕ್ಷೇತ್ರಕ್ಕೆ ಅಪಾರ ಸೇವೆ ಸಲ್ಲಿಸಿದ್ದಾರೆ. ಇದೆಲ್ಲವನ್ನು ಪರಿಗಣಿಸಿ ರಾಜ್ಯ ಸರ್ಕಾರ ಕಲಬುರಗಿ ರಂಗಾಯಣ ನಿರ್ದೇಶಕಿ ಸ್ಥಾನಕ್ಕೆ ನೇಮಕ ಮಾಡಿದೆ.


ರಂಗಕ್ಷೇತ್ರಕ್ಕೆ ಸಲ್ಲಿಸಿದ ಸೇವೆ ಪರಿಗಣಿಸಿ ಸರ್ಕಾರ ನಿರ್ದೇಶಕಿಯನ್ನಾಗಿ ಮಾಡಿದ್ದು, ನಮ್ಮ ಭಾಗದ ಸ್ಥಳೀಯ ಕಲೆಗಳು ಸೇರಿ ಎಲ್ಲ ರಂಗ ಕಲಾ ಪ್ರಕಾರಗಳಿಗೆ ಶಕ್ತಿ ತುಂಬಲು ಶಕ್ತಿ ಮೀರಿ ಪ್ರಯತ್ನಿಸುತ್ತೇನೆ. ಸಾಂಸ್ಕೃತಿಕವಾಗಿ ಶ್ರೀಮಂತ ಪರಂಪರೆ ಹೊಂದಿರುವ ಕಲ್ಯಾಣ ಕರ್ನಾಟಕ ಭಾಗದ ಗತವೈಭವ ಮರುಕಳಿಸಲು ಶ್ರಮಿಸುವೆ.
| ಡಾ.ಸುಜಾತಾ ಜಂಗಮಶೆಟ್ಟಿ, ನೂತನ ನಿರ್ದೇಶಕಿ
ಕಲಬುರಗಿ ರಂಗಾಯಣ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net