

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮೊಮ್ಮಗಳು ಡಾ.ಸೌಂದರ್ಯಾ ಅವರ ಅಂತ್ಯಸಂಸ್ಕಾರ ಪ್ರಕ್ರಿಯೆ ಇನ್ನೇನು ಕೆಲವೇ ಕ್ಷಣಗಳಲ್ಲಿ ಆರಂಭವಾಗಲಿದೆ.
ಬೆಂಗಳೂರಿನ ಅಬ್ಬಿಗೆರೆ ಫಾರ್ಮ್ಹೌಸ್ನಲ್ಲಿ ಅಂತ್ಯಸಂಸ್ಕಾರ ನಡೆಯಲಿದ್ದು, ಅದಕ್ಕಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಂತ್ಯಸಂಸ್ಕಾರದ ಮುನ್ನ ನಡೆಯುವ ವಿಧಿ-ವಿಧಾನಗಳು ಆರಂಭಗೊಂಡಿದ್ದು, ಮಾಜಿ ಸಿಎಂ ಯಡಿಯೂರಪ್ಪ ಮತ್ತು ಕುಟುಂಬಸ್ಥರು ಈಗಾಗಲೇ ಪಾದಪೂಜೆ ನೆರವೇರಿಸಿದ್ದಾರೆ.
ಒಟ್ಟು ಪ್ರಕ್ರಿಯೆ ಸುಮಾರು ಒಂದು ಗಂಟೆಯ ಕಾಲ ನಡೆಯಲಿದೆ. ವೀರರುದ್ರಮುನಿ ಶಿವಾಚಾರ್ಯ ಅವರ ನೇತೃತ್ವದಲ್ಲಿ ಅಂತ್ಯಕ್ರಿಯೆ ವಿಧಿ-ವಿಧಾನ ನಡೆಯುತ್ತದೆ ಎಂದು ನವೀನ್ ಶಾಸ್ತ್ರಿ ಎಂಬವರು ತಿಳಿಸಿದ್ದಾರೆ.
ಡಾ.ಸೌಂದರ್ಯ ಅವರ ತಂದೆ ವಿರೂಪಾಕ್ಷಪ್ಪ ಅವರು ಹುಬ್ಬಳ್ಳಿಯ ನಿವಾಸದಿಂದ ಹೊರಟಿದ್ದು, ಕೆಲವೇ ಕ್ಷಣಗಳಲ್ಲಿ ಬಂದು ತಲುಪಲಿದ್ದಾರೆ. ಅವರ ಬರುವಿಕೆಗಾಗಿ ಕುಟುಂಬ ಕಾಯುತ್ತಿದ್ದು, ಅವರು ಆಗಮಿಸುತ್ತಿದ್ದಂತೆ ಎಲ್ಲ ಪ್ರಕ್ರಿಯೆಗಳು ಚುರುಕಾಗಿ ನಡೆಯಲಿವೆ.