

ಬಿಡದಿ : ಜನಸಾಮಾನ್ಯರ ಬದುಕಿನ ವ್ಯಥೆ, ರೋಷ, ಸ್ಥಿತಿ-ಗತಿಗಳನ್ನು ಕವನಗಳಲ್ಲಿ ಕಟ್ಟಿಕೊಟ್ಟು, ಹೊಸ ಪ್ರಜ್ಞಾವಂತ ಯುವಕರು ಉದಯಿಸಲು ಹಾಗೂ ಸಂವಿಧಾನದ ಆಶಯಗಳನ್ನು ಬಿತ್ತರಿಸಲು ಡಾ.ಸಿದ್ದಲಿಂಗಯ್ಯ ಅವರ ಪ್ರಯತ್ನ ಹಾಗೂ ಪದ್ಯ ಪ್ರಯೋಗಗಳು ಯಶಸ್ವಿಯಾಗಿವೆ ಎಂದು ಸಮೂಹ ಸಂಪನ್ಮೂಲ ಶಿಕ್ಷಕ ಚಿಕ್ಕವೀರಯ್ಯ ಅಭಿಪ್ರಾಯಪಟ್ಟರು.
ಬನ್ನಿಕುಪ್ಪೆ (ಬಿ) ಕ್ಲಸ್ಟರ್‌ನ ವಾಜರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕವಿ ಸಿದ್ದಲಿಂಗಯ್ಯ ಅವರ ಜನ್ಮದಿನದ ಕಾರ್ಯಕ್ರಮದಲ್ಲಿ ಮಾತನಾಡಿ, ಸಿದ್ದಲಿಂಗಯ್ಯ ಅವರ ಹೊಸ ಕವಿತೆಗಳು, ಹೊಲೆ ಮಾದಿಗರ ಹಾಡು, ಸಾವಿರಾರು ನದಿಗಳು, ಕಪ್ಪು ಕಾಡಿನ ಹಾಡು, ಕವನ ಸಂಕಲನಗಳು, ಗ್ರಾಮ ದೇವತೆಗಳು, ಊರುಕೇರಿ, ಏಕಲವ್ಯ ಕೃತಿಗಳು ನಾಡಿನ ಪ್ರಜ್ಞಾವಂತ ವ್ಯವಸ್ಥೆಯೊಂದು ಹುಟ್ಟಿಕೊಳ್ಳಲು, ಅದರ ಭಾಗವಾಗಿ
ಹೊಸ ತಲೆಮಾರೊಂದು ಹುಟ್ಟಿಕೊಳ್ಳಲು ಕಾರಣವಾಗಿವೆ ಎಂದರು.
ಸಿದ್ದಲಿಂಗಯ್ಯನವರ ನನ್ನ ಜನಗಳು, ಅಂಬೇಡ್ಕರ್, 47ರ ಸ್ವಾತಂತ್ರ್ಯ, ನನ್ನ ಕವನ, ಪ್ರಕೃತಿ, ಗ್ರಾಮ ದೇವತೆ, ಗಾಂಧಿ, ಯುಗಾದಿ, ಶೂದ್ರ, ಕೆಂಪು ಸೂರ್ಯ ಸೇರಿ ಹಲವು ಕವಿತೆಗಳು ಪ್ರೇರಣಾದಾಯಕವಾಗಿದ್ದು, ಸಾವಿರಾರು ವಿದ್ಯಾರ್ಥಿ ದೆಸೆಯಲ್ಲಿಯೇ ಪ್ರಭಾವಿಸಿವೆ. ಡಾ.ಸಿದ್ದಲಿಂಗಯ್ಯ ಅವರು ಗುರುವಾಗಿ, ಶ್ರೇಷ್ಠ ಚಿಂತಕರಾಗಿ, ಹೋರಾಟಗಾರರಾಗಿ, ಸಮಗ್ರ ಬದುಕಿನ ರಾಯಭಾರಿಯಾಗಿ, ನಮ್ಮ ಸುತ್ತಲಿನ ವ್ಯವಸ್ಥೆಯನ್ನು ಪ್ರಭಾವಿಸುತ್ತಾ ಬಂದಿದ್ದಾರೆ. ವಿದ್ಯಾರ್ಥಿಗಳಿಗೆ ಇವರ ಪದ್ಯಗಳು, ಸರಳವಾಗಿ ಅರ್ಥವಾಗಲಿದ್ದು, ಸಾಹಿತ್ಯದ ವಿದ್ಯಾರ್ಥಿಗಳಾಗಲು ಪ್ರಭಾವಿಸುತ್ತವೆ ಎಂದರು.
ಶಿಕ್ಷಕಿ ವಿಜಯಲಕ್ಷ್ಮೀ ಮಾತನಾಡಿ, ನಾಡೋಜ ಸಿದ್ದಲಿಂಗಯ್ಯ ಅವರು, ನಮ್ಮ ನಡುವಿನ ಶ್ರೇಷ್ಠ ಪ್ರತಿಭೆ ಹಾಗೂ ಮಾನವೀಯ, ಅಂತಃಕರಣ ಉಳ್ಳವರಾಗಿದ್ದರು. ಸಮ ಸಮಾಜದ ಆಶಯಗಳನ್ನು ಸಿದ್ದಲಿಂಗಯ್ಯ ಅವರು ಕವಿತೆಗಳಲ್ಲಿ ಪ್ರಸ್ತುತ ಪಡಿಸುವ ಮೂಲಕ ಅಂಬೇಡ್ಕರ್ ಚಿಂತನೆಗಳನ್ನು ನಮ್ಮೆಲ್ಲರಿಗೂ ಪದ್ಯದ ರೂಪದಲ್ಲಿ ಉಡುಗೊರೆಯಾಗಿ ನೀಡಿದ್ದಾರೆ. ಇಂತಹ ವ್ಯಕ್ತಿತ್ವವನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಕಾರ್ಯವನ್ನು ನಾವೆಲ್ಲರೂ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಸಹಶಿಕ್ಷಕಿ ಸುಗುಣ, ಅಂಗನವಾಡಿ ಕಾರ್ಯಕರ್ತೆ ಹನುಮಕ್ಕ,
ಸಹಾಯಕಿ ಚಿಕ್ಕ ಹನುಮಕ್ಕ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.