

ಹನೂರು: ತಾಲೂಕಿನ ಕುರಟ್ಟಿ ಹೊಸೂರು ಗ್ರಾಮದಲ್ಲಿ ಹಸುಗಳಿಗೆ ಚರ್ಮಗಂಟು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಗುರುವಾರ ಜಾನುವಾರು ಆರೋಗ್ಯ ವಿಭಾಗದ ಅಪರ ನಿರ್ದೇಶಕ ಡಾ. ಶಿವರುದ್ರಪ್ಪ ಭೇಟಿ ನೀಡಿ ಪರಿಶೀಲಿಸಿದರು.
ಗ್ರಾಮದ ಕೊಟ್ಟಿಗೆಗಳಿಗೆ ತೆರಳಿದ ಡಾ. ಶಿವರುದ್ರಪ್ಪ ಅವರು ರೈತರು ಹಾಗೂ ಅಧಿಕಾರಿಗಳಿಂದ ಅಗತ್ಯ ಮಾಹಿತಿ ಪಡೆದು ಪರಿಶೀಲಿಸಿದರು. ಈ ವೇಳೆ ರೋಗ ತಗುಲಿರುವ ಹಸುಗಳಿಗೆ ಕಾಲಮಿತಿಯೊಳಗೆ ಸೂಕ್ತ ಚಿಕಿತ್ಸೆ ನೀಡುವುದರ ಜತೆಗೆ ರೋಗ ಉಲ್ಬಣಗೊಳ್ಳದಂತೆ ಅಗತ್ಯ ಮುಂಜಾಗ್ರತಾ ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಪಂ ಸಿಇಒ ಅವರ ಗಮನಕ್ಕೆ ತಂದು ನರೇಗಾ ಯೋಜನೆಯಡಿ ಜಾನುವಾರು ಕೊಟ್ಟಿಗೆಗಳನ್ನು ನಿರ್ಮಿಸಲು ಕ್ರಮವಹಿಸುವಂತೆ ನಿರ್ದೇಶನ ನೀಡಿದರು. ಪ್ರತಿಯೊಂದು ಹಸುವಿಗೂ ಲಸಿಕೆ ಕೊಡಿಸುವಂತೆ ಹಾಗೂ ಕೊಟ್ಟಿಗೆಗಳಲ್ಲಿ ಸ್ವಚ್ಛತೆ ಕಾಪಾಡುವಂತೆ ರೈತರಿಗೆ ಸಲಹೆ ನೀಡಿದರು.
ಗ್ರಾಮದ ರೈತ ಮುನಿಸಿದ್ಧ ಮಾತನಾಡಿ, ಹಸುವನ್ನು ಖರೀದಿಸಬೇಕಾದರೆ 50 ಸಾವಿರ ರೂ.ಗಿಂತ ಹೆಚ್ಚು ವ್ಯಯಿಸಬೇಕಿದೆ. ಆದರೆ ಮೃತಪಟ್ಟ ಹಸುವಿಗೆ 15 ಸಾವಿರ ರೂ. ಪರಿಹಾರ ನೀಡುತ್ತಿರುವುದು ಪ್ರಯೋಜನಕ್ಕೆ ಬಾರದಂತಾಗಿದೆ. ಆದ್ದರಿಂದ ಸರ್ಕಾರದಿಂದ ನೀಡುತ್ತಿರುವ ಪರಿಹಾರ ಹಣವನ್ನು ಹೆಚ್ಚಿಸುವಂತೆ ಮನವಿ ಮಾಡಿದರು.
ಪಶುಪಾಲನಾ ಇಲಾಖೆಯ ಜಂಟಿ ನಿರ್ದೇಶಕ ಡಾ. ಶಿವಣ್ಣ, ಉಪ ನಿರ್ದೇಶಕ ಡಾ. ಮಂಜುನಾಥ್, ಸಹಾಯಕ ನಿರ್ದೇಶಕ ಡಾ. ಸಿದ್ದರಾಜು ಹಾಗೂ ಇನ್ನಿತರರು ಇದ್ದರು.