ನೇತ್ರದಾನಿಗಳ ಸಂಖ್ಯೆ ಇಳಿಕೆಯಾಗಿರುವುದು ಆತಂಕಕಾರಿ ಬೆಳವಣಿಗೆ: ಡಾ. ರವಿ ದೊರೈರಾಜ್​ ಕಳವಳ

DR Dorairaj
Published on

ಬೆಂಗಳೂರು: ಕಾರ್ನಿಯಾ ಅಂಧತ್ವ ಹೊಂದಿರುವವರಿಗೆ ಕಾರ್ನಿಯಾ ಕಸಿ ಮಾಡಿ ದೃಷ್ಟಿ ಸಮಸ್ಯೆ ನಿವಾರಣೆ ಮಾಡಬಹುದು. ಆದರೆ, ನೇತ್ರದಾನ ಮಾಡುವವರ ಸಂಖ್ಯೆ ಇಳಿಕೆಯಾಗಿರುವುದರಿಂದಾಗಿ, ಪ್ರತಿ ವರ್ಷ ಕಾರ್ನಿಯಾ ಕಸಿ ಸಂಖ್ಯೆಯೂ ಕಡಿಮೆಯಾಗಿದೆ ಎಂದು ಡಾ. ಅಗರ್ವಾಲ್ಸ್​ ಐ ಹಾಸ್ಪಿಟಲ್​ ಬೆಂಗಳೂರು ಪ್ರಾದೇಶಿಕ ಕ್ಲಿನಿಕಲ್​ ಸೇವೆಗಳ ಮುಖ್ಯಸ್ಥ ಡಾ. ರವಿ ದೊರೈರಾಜ್​ ಹೇಳಿದ್ದಾರೆ.

ಡಾ. ಅಗರ್ವಾಲ್ಸ್​ ಐ ಹಾಸ್ಪಿಟಲ್​ನ ಬನ್ನೇರಟ್ಟ ಶಾಖೆಯಲ್ಲಿ ಸೋಮವಾರ ಆಯೋಜಿಸಿದ್ದ ವಾಕಥಾನ್​ನಲ್ಲಿ ಮಾತನಾಡಿ, ಕಣ್ಣಿನ ದಾನವನ್ನು ಪೋತ್ಸಾಹಿಸುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಬೇಕಾದ ಅಗತ್ಯ ಇದೆ. ಧಾರ್ಮಿಕ ನಂಬಿಕೆಗಳು ಹಾಗೂ ಮಾಹಿತಿ ಕೊರತೆಯಿಂದ ಕೆಲ ಜನರು ನೇತ್ರದಾನಕ್ಕೆ ಹಿಂದೇಟು ಹಾಕುತ್ತಾರೆ. ನೇತ್ರದಾನದಿಂದ ವರ್ಷದಲ್ಲಿ 45 ಸಾವಿರದಷ್ಟು ಕಣ್ಣುಗಳು ಸಂಗ್ರಹವಾಗುತ್ತದೆ. ಆದರಲ್ಲಿ 25&30 ಸಾವಿರದಷ್ಟು ಕಣ್ಣುಗಳು ಮಾತ್ರ ದೃಷ್ಟಿದೋಷ ನಿವಾರಣೆಗೆ ಬಳಕೆಯಾಗುತ್ತವೆ ಎಂದು ಹೇಳಿದರು.

ಕಳೆದ ಒಂದು ವರ್ಷದ ಅವಧಿಯಲ್ಲಿ ಡಾ. ಅಗರ್ವಾಲ್ಸ್​ ಐ ಬ್ಯಾಂಕ್​ ರಾಜ್ಯದಲ್ಲಿ ಒಟ್ಟು 5521 ಕಣ್ಣುಗಳನ್ನು ದಾನ ಮಾಡಿದೆ. ಈ ಪೈಕಿ 1821 ಕಾರ್ನಿಯಾಗಳನ್ನು ಯಶಸ್ವಿಯಾಗಿ ಕಸಿಗೆ ಬಳಸಲಾಗಿದೆ. ದೇಶದಲ್ಲಿ ಕಾರ್ನಿಯಾ ಕಸಿ ಪ್ರಕ್ರಿಯೆಯಲ್ಲಿ ಸಾಕಷ್ಟು ಸವಾಲುಗಳಿವೆ. ಕಸಿ ಪ್ರಕ್ರಿಯೆಯು ಯಶಸ್ವಿಯಾಗುವುದಕ್ಕೆ ನೇತ್ರ ದಾನಿಗಳ ಕೊರತೆ ಸವಾಲಾಗಿ ಪರಿಣಮಿಸಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಮ್ಯಾರಾಥಾನ್​ನಲ್ಲಿ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಡಾ. ಅನುಪಮಾ, ಆಸ್ಪತ್ರೆ ಸಿಬ್ಬಂದಿಗಳು ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net