ಡಾ. ರಾಜ್‌ಕುಮಾರ್ ಸಂಸ್ಕೃತಿ ದತ್ತಿ ಪ್ರಶಸ್ತಿ ಪ್ರದಾನ

Kasapa Dr Rajkumar award
Published on

ಬೆಂಗಳೂರು: ಕನ್ನಡಕ್ಕೆ ಕೀರ್ತಿ ತಂದ ಡಾ. ರಾಜ್‌ಕುಮಾರ್ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತಿನೊಂದಿಗೆ (ಕಸಾಪ) ವಿಶೇಷ ಬಾಂಧವ್ಯ ಹೊಂದಿದ್ದರು ಎಂದು ಕಸಾಪ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಹೇಳಿದರು.

ಕಸಾಪದ ಶ್ರೀ ಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಡಾ. ರಾಜ್‌ಕುಮಾರ್ ಸಂಸ್ಕೃತಿ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ದೇಶದಲ್ಲಿ ಕನ್ನಡಕ್ಕೆ ಅಗ್ರಸ್ಥಾನ ದೊರತದ್ದು ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರಿಂದ. ಅವರು ಪ್ರಧಾನಿ ಆದ ಸಂದರ್ಭದಲ್ಲಿ ದೇಶದ ಆಯಕಟ್ಟಿನ ಸ್ಥಾನದಲ್ಲಿ ಕನ್ನಡಿಗರಿಗೆ ಪ್ರಾಶಸ್ತ್ಯ ನೀಡಿದ್ದರು. ಆಗ ಡಾ. ರಾಜ್ ಕುಮಾರ್ ಅವರು ಕನ್ನಡಿಗರು ದೇಶ ಆಳುತ್ತಿದ್ದಾರೆ ಎಂದು ಹೆಮ್ಮೆಯಿಂದ ಹೇಳಿದ್ದನ್ನು ನೆನಪಿಸಿಕೊಂಡರು.

ಡಾ. ರಾಜ್‌ಕುಮಾರ್ ಅವರಿಗೆ ದಾದಾ ಸಾಹೇಬ್ ಾಲ್ಕೆ ಪ್ರಶಸ್ತಿ ಸಂದಾಗ ಅದರಿಂದ ಬಂದ ಒಂದು ಲಕ್ಷ ರೂ. ನಗದನ್ನು ತಾವು ಸರಸ್ವತಿ ಮಂದಿರ ಎಂದೇ ಭಾವಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ದತ್ತಿ ಇಡುವ ಮೂಲಕ ಪರಿಷತ್ತಿನ ಮೇಲಿದ್ದ ತಮ್ಮ ವಿಶ್ವಾಸವನ್ನು ಎತ್ತಿ ತೋರಿಸಿದ್ದರು. ಕನ್ನಡ ಭಾಷೆಯನ್ನು ಅಜರಾಮರವಾಗಿಸಲು ಪರಿಷತ್ತಿಗಿಂತ ನಂಬಿಕಸ್ಥ ಸಂಸ್ಥೆ ಬೇರೆ ಇಲ್ಲ ಎಂದು ಹೇಳುತ್ತಿದ್ದರು ಎಂದು ಸ್ಮರಿಸಿದರು.

ವಿಶ್ವದಲ್ಲೇ ಅತೀ ಹೆಚ್ಚು 5 ಸಾವಿರಕ್ಕೂ ಅಧಿಕ ಅಭಿಮಾನಿಗಳ ಸಂಘ ಹೊಂದಿರುವ, 700ಕ್ಕೂ ಹೆಚ್ಚು ಪ್ರತಿಮೆಗಳನ್ನು ಹೊಂದಿರುವ ಏಕೈಕ ನಟ ಡಾ. ರಾಜ್‌ಕುಮಾರ್. ಇದು ಕನ್ನಡಿಗರಿಗೆ ಅವರ ಮೇಲಿರುವ ಅಭಿಮಾನವನ್ನು ತೋರಿಸುತ್ತದೆ. ಅಂತಹ ಮೇರು ನಟರ ಹೆಸರಿನಲ್ಲಿ ನೀಡಲಾಗುವ ಪ್ರಶಸ್ತಿಯನ್ನು ಡಾ. ಬಿ. ಸರೋಜಾದೇವಿ ಅವರಿಗೆ ನೀಡುತ್ತಿರುವುದು ಉತ್ತಮವಾಗಿದೆ ಎಂದು ಹೇಳಿದರು.

ನಿರ್ಮಾಪಕ ಎಸ್.ಎ. ಚೆನ್ನೇಗೌಡ ಮಾತನಾಡಿ, ಡಾ. ರಾಜ್‌ಕುಮಾರ್ ಸಂಸ್ಕೃತಿ ದತ್ತಿ ಪ್ರಶಸ್ತಿ ನಾಡಿನ ಅತ್ಯಂತ ಗೌರವಾನ್ವಿತ ಪ್ರಶಸ್ತಿ ಆಗಿದೆ. ಇದರೊಂದಿಗೆ ಯಾವುದೇ ದತ್ತಿ ಪ್ರಶಸ್ತಿಯನ್ನು ಹೋಲಿಸಲಾಗದು. ಇಂತಹ ಪ್ರಶಸ್ತಿಯನ್ನು ಈ ಬಾರಿ ಡಾ. ಬಿ. ಸರೋಜಾದೇವಿಯವರಿಗೆ ನೀಡಿರುವುದು ಸ್ತುತ್ಯಾರ್ಹವಾಗಿದೆ ಎಂದರು.

ಡಾ. ಬಿ. ಸರೋಜಾದೇವಿ ಮಾತನಾಡಿ ‘‘ ನನಗೆ ಇದುವರೆಗೂ ಸಿಕ್ಕಿರುವ ಯಾವ ಪ್ರಶಸ್ತಿಯೂ ಡಾ. ರಾಜ್‌ಕುಮಾರ್ ಸಂಸ್ಕೃತಿ ದತ್ತಿ ಪ್ರಶಸ್ತಿಗೆ ಸಮನಲ್ಲ. ಅದಕ್ಕೆ ಕಾರಣ ಅವರು ನನ್ನ ಹೆಮ್ಮೆಯ ನಾಯಕ. ಅವರೊಂದಿಗೆ ಅಭಿನಯಿಸುವ ಮೂಲಕ ಶಿಸ್ತು, ಜವಾಬ್ದಾರಿ ಕಲಿಯಲು ಸಾಧ್ಯವಾಯಿತು ಎಂದರು.

ಗಾಯಕಿ ಡಾ. ಬಿ.ಕೆ. ಸುಮಿತ್ರಾ ಡಾ. ಬಿ. ಸರೋಜಾದೇವಿ ಅವರಿಗೆ ಡಾ. ರಾಜ್‌ಕುಮಾರ್ ಸಂಸ್ಕೃತಿ ದತ್ತಿ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಪರಿಷತ್ತು ಗೌರವ ಕಾರ್ಯದರ್ಶಿ ನೇ.ಭ.ರಾಮಲಿಂಗ ಶೆಟ್ಟಿ , ಗೌರವ ಕೋಶಾಧ್ಯಕ್ಷ ಡಾ. ಬಿ.ಎಮ್.ಪಟೇಲ್ ಪಾಂಡು, ಪರಿಷತ್ತಿನ ಪ್ರಕಟಣಾ ವಿಭಾಗದ ಮುಖ್ಯಸ್ಥರಾದ ಪ್ರೊ. ಎನ್.ಎಸ್. ಶ್ರೀಧರ ಮೂರ್ತಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net