ಸಮ ಸಮಾಜಕ್ಕೆ ಶ್ರಮಿಸಿದ ರಾಜೇಂದ್ರ ಶ್ರೀ

Oplus_131072
Oplus_131072
Published on

ಯಳಂದೂರು: ಸುತ್ತೂರು ಮಠದ ಶ್ರೀ ರಾಜೇಂದ್ರ ಶ್ರೀಗಳು ಅಧುನಿಕ ಸಮಾಜ ಸುಧಾರಕರು ಎಂದು ಮರಿಯಾಲ ಮಠದ ಶ್ರೀ ಇಮ್ಮಡಿ ಮುರುಘರಾಜೇಂದ್ರ ಸ್ವಾಮೀಜಿ ಬಣ್ಣಿಸಿದರು.


ಉಮ್ಮತ್ತೂರು ಗ್ರಾಮದ ಜೆಎಸ್‌ಎಸ್ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಡಾ.ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ 109ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ರಾಜೇಂದ್ರ ಶ್ರೀಗಳು ಗ್ರಾಮೀಣ ಭಾಗದ ಮಕ್ಕಳ ಶಿಕ್ಷಣದಾತರಾಗಿದ್ದರು. ಆ ಕಾಲದಲ್ಲಿ ಶಿಕ್ಷಣದ ಜತೆಗೆ ದಾಸೋಹ ನೀಡಿ ಮಕ್ಕಳನ್ನು ಪೋಷಿಸಿದರು. ಇದಕ್ಕಾಗಿ ತಮ್ಮ ಚಿನ್ನದ ಕರಡಿಗೆ, ರುದ್ರಾಕ್ಷಿ ಅಡವಿಟ್ಟಿದ್ದರು. ವಿದ್ಯಾರ್ಥಿಗಳಿಗೆ ಪ್ರಾಮಾಣಿಕವಾಗಿ ಮಮತೆ ಹಾಗೂ ಪ್ರೀತಿಯನ್ನು ಧಾರೆ ಎರೆದು ಜೀವನದ ಮೌಲ್ಯಗಳನ್ನು ತಿಳಿಸಿಕೊಟ್ಟ ಮಹಾನ್ ಸಂತ. ಈ ಸಂಸ್ಥೆ ಇಂದು ದೊಡ್ಡ ಮಟ್ಟದಲ್ಲಿ ಬೆಳೆಯಲು ಇವರ ಸಾರ್ಥಕ, ಪ್ರಾಮಾಣಿಕ ಪರಿಶ್ರಮ ಕಾರಣವಾಗಿದೆ. ಇದರೊಂದಿಗೆ ಇಂದಿನ ಶ್ರೀಗಳು ಅವರು ಹಚ್ಚಿದ ಹಣತೆಯನ್ನು ಇನ್ನಷ್ಟು ಪ್ರಜ್ವಲಗೊಳಿಸಿ ವಿದೇಶಗಳಲ್ಲೂ ಅದರ ಬೆಳಕನ್ನು ಚೆಲ್ಲಿದ್ದಾರೆ. ಇಂತಹ ಸಂತರ ತತ್ವಾದರ್ಶ, ಗುಣಗಳನ್ನು ಇಂದಿನ ಜನತೆ ಅಳವಡಿಸಿಕೊಳ್ಳಬೇಕು ಎಂದರು.


ನಿವೃತ್ತ ಉಪನ್ಯಾಸಕ ಎಚ್.ರಾಜು ಕೆಬ್ಬೇಪುರ ಮಾತನಾಡಿ, ಶ್ರೀಗಳು ಸಮಾಜ ಸೇವೆ ಮಾಡುತ್ತಾ ತಮ್ಮ ಜೀವನವನ್ನೇ ಸಮಾಜದ ಪ್ರಗತಿಗೆ ಮುಡುಪಾಗಿಟ್ಟದ್ದರು. ಇದರೊಂದಿಗೆ ಮಹಿಳೆಯರಿಗೆ ಶಿಕ್ಷಣ ನೀಡಲು ಜೆಎಸ್‌ಎಸ್ ಸಂಸ್ಥೆಯ ಪಾತ್ರ ಪ್ರಮುಖವಾಗಿದ್ದು ಇದರಲ್ಲಿ ಜಾತಿ, ಧರ್ಮ, ಲಿಂಗ ಭೇದವಿಲ್ಲದೆ ಸರ್ವರನ್ನು ಒಳಗೊಂಡ ಸಮ ಸಮಾಜದ ಸುಧಾರಣೆ ಮಾಡಿದ ಸಂತರಾಗಿದ್ದರು. ವಿಶ್ವದಾದ್ಯಂತ ತನ್ನ ಶಿಷ್ಯ ವೃಂದವನ್ನು ಹೊಂದಿರುವುದು ನಮ್ಮೆಲ್ಲರ ಹೆಮ್ಮೆ ಎಂದರು.


ಗ್ರಾಮದ ಪ್ರಮುಖ ಬೀದಿಗಳಲ್ಲಿ ಕಲಾತಂಡಗಳೊಂದಿಗೆ ಡಾ.ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ ಭಾವಚಿತ್ರವನ್ನು ಮೆರವಣಿಗೆ ಮಾಡಲಾಯಿತು. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಗ್ರಾಪಂ ಅಧ್ಯಕ್ಷೆ ಬಿ.ಎಸ್.ಯಮುನಾ, ಉಪಾಧ್ಯಕ್ಷ ನಂಜುಂಡಶೆಟ್ಟಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನಾಗೇಂದ್ರ ಸ್ವಾಮಿ, ಹಾಲು ಉತ್ಪಾದಕರ ಸಹಕಾರ ಸಂಘದ ನಾಗೇಗೌಡ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಎಚ್.ವಿ.ಚಂದ್ರು, ಕಿನಕಹಳ್ಳಿ ಪ್ರಭುಪ್ರಸಾದ್, ವಿದ್ಯಾರ್ಥಿಗಳು, ಗ್ರಾಮಸ್ಥರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net