ಡಾ.ರಾಜ್ ಕಾಂಪ್ಲೆಕ್ಸ್‌ಗೆ ಬೇಕಿದೆ ನಿರ್ವಹಣೆ ಭಾಗ್ಯ

Rmgm-Ph-001-Dr. RajkumAr Complex News Photo-Rmgm -3-5-2024
Published on

*ರಾಮನಗರ ನಗರಸಭೆಯ ಪ್ರಮುಖ ವಾಣಿಜ್ಯ ಕಟ್ಟಡ

*ದುಪ್ಪಟ್ಟು ಬಾಡಿಗೆ ನಿಗದಿ

*ಮೂಲಸೌಕರ್ಯ ಕೊರತೆ

ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ

ನಗರಸಭೆಯ ಪ್ರತಿಷ್ಠಿತ ವಾಣಿಜ್ಯ ಸಂಕೀರ್ಣಗಳಲ್ಲಿ ಒಂದಾಗಿರುವ, ಲಕ್ಷಾಂತರ ರೂಪಾಯಿ ಆದಾಯ ತರುವ ಡಾ.ರಾಜ್‌ಕುಮಾರ್ ಕಾಂಪ್ಲೆಕ್ಸ್ ನಿರ್ವಹಣೆ ಇಲ್ಲದೆ ಸೊರಗಿದೆ.

ಸುಮಾರು 30 ವರ್ಷಗಳ ಹಿಂದೆ ಪುರಸಭೆ ಆಡಳಿತದಲ್ಲಿ ಅರ್ಕಾವತಿ ನದಿ ಸಮೀಪದ ಜಾಗದಲ್ಲಿ ನಗರದ ವ್ಯಾಪಾರಸ್ಥರಿಗೆ, ಗ್ರಾಹಕರಿಗೆ ಅನುಕೂಲವಾಗುವ ದೃಷ್ಟಿಯಿಂದ ಬೃಹತ್ ವಾಣಿಜ್ಯ ಕಟ್ಟಡ ತಲೆ ಎತ್ತಿತ್ತು. ಆ ದಿನಗಳಲ್ಲಿ ನಗರದ ಪ್ರಮುಖ ವಾಣಿಜ್ಯ ಕಟ್ಟಡ ಇದಾಗಿತ್ತಲ್ಲದೆ, ನಗರಸಭೆ, ಅಂಗಡಿ ಮಳಿಗೆಗಳನ್ನು ಹರಾಜು ಮೂಲಕ ಬಾಡಿಗೆ ಪಡೆಯುತ್ತಾ ಬಂದಿದೆ.

ಲಕ್ಷಾಂತರ ರೂಪಾಯಿ ಆದಾಯ ತರುವ ವಾಣಿಜ್ಯ ಕಟ್ಟಡವಾಗಿದ್ದರೂ ಇಂಥ ಕಟ್ಟಡ ಕಾಲಕಾಲಕ್ಕೆ ನಿರ್ವಹಣೆ ಇಲ್ಲದೆ ಶಿಥಿಲವಾಗಿದೆ. ಕಟ್ಟಡ ಸುಣ್ಣಬಣ್ಣ ಕಾಣದೆ ನೂರಾರು ವರ್ಷಗಳ ಹಳೇ ಕಟ್ಟಡದಂತೆ ಕಾಣುತ್ತಿದ್ದು, ವಾಣಿಜ್ಯ ವಹಿವಾಟಿನಿಂದ ದೂರವಾಗಿದೆ. ಬೃಹತ್ ಕಟ್ಟಡ ವಾಣಿಜ್ಯ ಚಟುವಟಿಕೆಯಿಂದ ದೂರವಾಗುತ್ತಿರುವುದು ಸಾರ್ವಜನಿಕರಲ್ಲಿ ಬೇಸರ ತರಿಸಿದ್ದು, ನಗರಸಭೆ ಕಟ್ಟಡಕ್ಕೆ ಆಧುನಿಕ ಸ್ಪರ್ಶ ನೀಡಿ, ಅಭಿವೃದ್ಧಿಯ ಕಾಯಕಲ್ಪ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಗಿಜಿಗುಡುತ್ತಿದ್ದ ವಾಣಿಜ್ಯ ಕೇಂದ್ರ

ಕಟ್ಟಡದಲ್ಲಿ ಬ್ಯಾಂಕ್, ಬೆಸ್ಕಾಂ, ತಾಪಂ ಕಚೇರಿ, ಪ್ರಾಧಿಕಾರ ಕಚೇರಿ, ವಾಣಿಜ್ಯ ಇಲಾಖೆ, ಜಲಮಂಡಳಿ ಕಚೇರಿಗಳಿದ್ದವು. ತೆಗೆ ನೂರಾರು ಅಂಗಡಿಗಳೊಂದಿಗೆ ಪ್ರಮುಖ ವಾಣಿಜ್ಯ ಕೇಂದ್ರವಾಗಿ ಗುರುತಿಸಿಕೊಂಡಿತ್ತು. ಇತ್ತೀಚಿನ ಕೆಲವು ವರ್ಷಗಳಲ್ಲಿ ಸರ್ಕಾರಿ ಕಚೇರಿಗಳು, ಬ್ಯಾಂಕ್ ಇಲ್ಲಿಂದ ಸ್ಥಳಾಂತರವಾದ ನಂತರ ಕಟ್ಟಡ ನಿರ್ವಹಣೆ ಇಲ್ಲದೆ, ಶುಚಿತ್ವ ಕಾಣದೆ, ಒಂದೊಂದೇ ವ್ಯಾಪಾರ ಮಳಿಗೆಗಳು ಖಾಲಿಯಾಗಿ ಕೆಲವೇ ಕೆಲವು ಅಂಗಡಿಗಳು ವ್ಯಾಪಾರ ನಡೆಸುತ್ತಿವೆ.

ಸೋರುವ ಕಟ್ಟಡ

ಕಟ್ಟಡದ ಮೂರನೇ ಮಹಡಿ ಪೂರ್ಣವಾಗದ ಕಾರಣ, ಮಳೆ ಬಂದಾಗ ನೀರು ಸೋರಿಕೆಯಾಗಿ, ಕಟ್ಟಡ ಶಿಥಿಲವಾಗಿ, ಗೋಡೆಗಳಲ್ಲಿ ಗಿಡಗಂಟಿ ಬೆಳೆದಿವೆ. ತೆಗೆ ಕಟ್ಟಡಕ್ಕೆ ಭದ್ರತೆ ಇಲ್ಲದ ಕಾರಣ ರಾತ್ರಿ ವೇಳೆ ಒಳ ಭಾಗ ಮದ್ಯವ್ಯಸನಿಗಳ ತಾಣವಾಗಿ ಮಾರ್ಪಡಾಗುತ್ತಿದೆ. ಎಲ್ಲೆಂದರಲ್ಲಿ ಮದ್ಯದ ಖಾಲಿ ಬಾಟಲಿಗಳು ಕಂಡುಬರುತ್ತಿವೆ.

ದುಪ್ಪಟ್ಟು ಬಾಡಿಗೆ

ಕಟ್ಟಡದಲ್ಲಿ ಬಹಳಷ್ಟು ಅಂಗಡಿ ಮಳಿಗೆಗಳು ಖಾಲಿ ಇವೆ. ನಗರಸಭೆ ದುಪ್ಪಟ್ಟು ಬಾಡಿಗೆ ನಿಗದಿಪಡಿಸುತ್ತದೆ ಎಂದು ವ್ಯಾಪಾರಿಗಳು ಕಡಿಮೆಯಾಗುತ್ತಿದ್ದಾರೆ. ಕಡಿಮೆ ಬಾಡಿಗೆ ವಿಧಿಸಿ, ಕಟ್ಟಡವನ್ನು ನವೀಕರಣಗೊಳಿಸಿದರೆ, ಮತ್ತಷ್ಟು ವಾಣಿಜ್ಯ ಕೇಂದ್ರಗಳು ತಲೆಎತ್ತಲು ಸಾಧ್ಯ. ಖಾಲಿಯಿರುವ ಅಂಗಡಿಗಳಿಗೆ ದುಪ್ಪಟ್ಟು ದರ ವಿಧಿಸುವ ಕಾರಣ ವಾಣಿಜ್ಯ ಚಟುವಟಿಕೆ ವಿಸ್ತಾರಗೊಳ್ಳಲು ಆಗುತ್ತಿಲ್ಲ. ಇದರಿಂದ ಅಂಗಡಿ, ಮಳಿಗೆಗಳು ಖಾಲಿಖಾಲಿ ಇವೆ ಎಂಬುದು ಸಾರ್ವಜನಿಕರ ದೂರು.

ಮೂಲಸೌಕರ್ಯ ಕಲ್ಪಿಸಿ

ಕಟ್ಟಡದ ಒಳಗೆ ಮದ್ಯಪಾನ ಮಾಡುವುದನ್ನು ತಡೆಗಟ್ಟುವುದು, ಸ್ಚಚ್ಛತೆ ಕಾಪಾಡುವುದು, ಮೂರನೇ ಮಹಡಿಯ ದುರಸ್ತಿ, ಕಟ್ಟಡಕ್ಕೆ ಬಣ್ಣ, ಭದ್ರತಾ ಸಿಬ್ಬಂದಿ ನೇಮಕ, ನೀರಿನ ಸಂಪರ್ಕ, ವಾಣಿಜ್ಯ ಚಟುವಟಿಕೆಗೆ ಪೂರಕ ಕೊಠಡಿಗಳ ಅಭಿವೃದ್ಧಿ ಅಗತ್ಯವಾಗಿದೆ.

ವಾಣಿಜ್ಯ ಕಟ್ಟಡ ನಿರ್ವಹಣೆ, ಅಭಿವೃದ್ಧಿಗಾಗಿ ಸಮಗ್ರ ಯೋಜನೆ ನಗರಸಭೆ ಸಿದ್ಧಪಡಿಸುತ್ತಿದೆ. ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಉತ್ತಮ ವಾಣಿಜ್ಯ ಕಟ್ಟಡವಾಗಿ ಪರಿವರ್ತಿಸಲು ಕ್ರಮ ಕೈಗೊಳ್ಳುತ್ತಿದೆ. ಈಗಾಗಲೇ ಕಟ್ಟಡದಲ್ಲಿ ಸ್ವಚ್ಛತೆ ಹಾಗೂ ಶೌಚಗೃಹ ವ್ಯವಸ್ಥೆ ಮಾಡಲಾಗಿದೆ. ಭದ್ರತಾ ಸಿಬ್ಬಂದಿ ನೇಮಿಸಲು ಕ್ರಮ ಕೈಗೊಳ್ಳಲಾಗುವುದು.

ನಾಗೇಶ್, ಆಯುಕ್ತ, ನಗರಸಭೆ, ರಾಮನಗರ

ಪ್ರಮುಖ ಸ್ಥಳದಲ್ಲಿದ್ದರೂ ವಾಣಿಜ್ಯ ಸಂಕೀರ್ಣ ಅಭಿವೃದ್ಧಿ ಮತ್ತು ನಿರ್ವಹಣೆ ಕೊರತೆಯಿಂದ ಕಟ್ಟಡ ವಾಣಿಜ್ಯ ಚಟುವಟಿಕೆಯಿಂದ ದೂರವಾಗುತ್ತಿದೆ. ಮೂಲಸೌಕರ್ಯವಿಲ್ಲ, ಸ್ವಚ್ಚತೆ ಇಲ್ಲ. ಹಲವು ಸಮಸ್ಯೆಯಲ್ಲಿ ಸಂಕೀರ್ಣ ಸೊರಗಿದೆ. ನಗರಸಭೆ ಹೀಗೆಯೇ ಕಟ್ಟಡ ನಿರ್ವಹಣೆ ಮಾಡದೆ ನಿರ್ಲಕ್ಷ್ಯ ಮಾಡುತ್ತಿದ್ದರೆ, ಇಡೀ ಸಂಕೀರ್ಣ ವಾಣಿಜ್ಯ ಚಟುವಟಿಕೆಯಿಂದ ದೂರವಾಗಲಿದೆ.

ರಾಜೇಶ್

ವಾಣಿಜ್ಯ ಕಟ್ಟಡದ ಅಂಗಡಿ ಬಾಡಿಗೆದಾರ, ರಾಮನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net