

ಬೆಂಗಳೂರು: ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾಪನೆ ಬಳಿಕ 48 ದಿನಗಳ ಕಾಲ ಮಂಡಲೋತ್ಸವ ನಡೆಯುತ್ತಿದ್ದು, ರಾಜ್ಯದ ಪ್ರಸಿದ್ಧ ಜ್ಯೋತಿಷಿ, ವಿದ್ವಾಂಸ ಡಾ.ಪಂಡಿತ್ ಎಸ್. ಪ್ರಸನ್ನಾಚಾರ್ಯ ಕಟ್ಟಿ ಮತ್ತು ತಂಡದ ಸದಸ್ಯರು ಸತತ ನಾಲ್ಕು ದಿನಗಳ ಕಾಲ ವಿಶೇಷ ಧಾರ್ಮಿಕ ಆಚರಣೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ.
ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ನೇತೃತ್ವದಲ್ಲಿ ಅಯೋಧ್ಯೆಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರಗುತ್ತಿವೆ. 48 ದಿನಗಳ ಮಂಡಲೋತ್ಸವದಲ್ಲಿ ಪ್ರತಿದಿನ ಯಾಗ, ಯ, ಹೋಮ, ಹವನ, ಶಾಂತಿ ಪೂಜೆಗಳು ನಡೆಯುತ್ತಿವೆ. ಅನೇಕ ಸಾಧು, ಸಂತರು ಭಕ್ತರು ವಿವಿಧ ಅನುಷ್ಠಾನಗಳಲ್ಲಿ ಭಾಗವಹಿಸುತ್ತಿದ್ದಾರೆ.
ಡಾ.ಪ್ರಸನ್ನಾಚಾರ್ಯ ಕಟ್ಟಿ ಮತ್ತು ತಂಡದ ಸದಸ್ಯರು ಬಾಲರಾಮನ ಉತ್ಸವಮೂರ್ತಿಯ ಉತ್ತರ ದ್ವಾರದ ಮಂದಿರದ ಪ್ರಾಂಗಣದಲ್ಲಿ ಪ್ರತಿನಿತ್ಯ ತತ್ವ ಮಂತ್ರ, ಜಪ, ತಪ, ಹೋಮ, ಹವನ, ಪಾರಾಯಣ ನಡೆಸಿದ್ದಾರೆ. ಮಂದಿರದ ಈಶಾನ್ಯ ಭಾಗದಲ್ಲಿರುವ ಬೃಹತ್ ಪ್ರಮಾಣದ ಉಭಯ ಯಾಗ&ಯ ಶಾಲೆಗಳಲ್ಲಿ "ಋಗ್ವೇದ ಸಂಹಿತಾ ಮಹಾಯಾಗ', "ರಾಮತಾರಕ ಮಂತ್ರಯಾಗ' ಮತ್ತು "72 ಮಹಾಮಂತ್ರಯಾಗ' ಸೇರಿ ಲೋಕ ಕಲ್ಯಾಣಾರ್ಥ ಹೋಮ, ಹವನಗಳನ್ನು ಯಶಸ್ವಿಯಾಗಿ ನೆರವೇರಿಸಿದ್ದಾರೆ.
ಕಟ್ಟಿ ಅವರ ತಂಡದಲ್ಲಿ ವಿದ್ವಾನ್ ನಂಬಿ ವಾಸುದೇವಾಚಾರ್ಯ, ವಿದ್ವಾನ್ ನಂಬಿ ವೇಣುಮಾಧವಚಾರ್ಯ, ಪಂಡಿತ್ ನಂಬಿ ನರಹರಿ ಆಚಾರ್ಯ, ಪಂಡಿತ್ ಸತ್ಯಪ್ರಿಯ ಆಚಾರ್ಯ, ಪಂಡಿತ್ ರಜತ್ ಆಚಾರ್ಯ, ರಾವೇಂದ್ರ ಆಚಾರ್ಯ, ಹರೀಶ್ ಆಚಾರ್ಯ ಇದ್ದರು.
ಜಗತ್ತಿನಾದ್ಯಂತ ರಾಮರಾಜ್ಯದ ಪರಿಕಲ್ಪನೆ ಮೂಡಿಸುವುದರಿಂದ ಎಲ್ಲೆಡೆ ಶಾಂತಿ, ನೆಮ್ಮದಿ, ಸೌಹಾರ್ದತೆ, ಸಮೃದ್ಧಿ ಮತ್ತು ಸೌಖ್ಯ ನೆಲೆಸುತ್ತದೆ. ಬಡವರಿಗೆ ಉಚಿತ ಮನೆ ಕಟ್ಟಲು ನೆರವಾದವರು, ಗೋಶಾಲೆಗಳಿಗೆ ಸಹಾಯ ಮಾಡಿದವರು, ಅನೇಕ ರೀತಿಯ ಸಮಸ್ಯೆಯಲ್ಲಿರುವವರಿಗೆ ವಿದ್ಯಾದಾನ, ಅನ್ನದಾನ ಇತ್ಯಾದಿ ಸೇವಾಕಾರ್ಯ ಮಾಡಿದವರನ್ನು ಗುರುತಿಸಿ ಪೇಜಾವರ ಶ್ರೀ ಆಶೀರ್ವದಿಸುತ್ತಿದ್ದಾರೆ. ಇದು ಇಂದಿನ ಪೀಳಿಗೆಗೆ ಮಾದರಿಯಾಗಿದೆ.
-ವಿದ್ವಾನ್ ಡಾ.ಎಸ್. ಪ್ರಸನ್ನಾಚಾರ್ಯ ಕಟ್ಟಿ, ಜ್ಯೋತಿಷಿ