ರೋಗಿಗಳ ಆರೋಗ್ಯ ವಿಚಾರಿಸಿದ ಸಂಸದ ಡಾ. ಸಿ.ಎನ್. ಮಂಜುನಾಥ್

MN
Published on

ರಾಮನಗರ : ನಗರದ ಜಿಲ್ಲಾಸ್ಪತ್ರೆಗೆ ಸಂಸದ ಡಾ. ಸಿ.ಎನ್. ಮಂಜುನಾಥ್ ಮಂಗಳವಾರ ಭೇಟಿ ನೀಡಿ, ಆಸ್ಪತ್ರೆಯ ಹೊರರೋಗಿ ವಿಭಾಗ ಸೇರಿ ವಿವಿಧ ವಿಭಾಗಗಳಲ್ಲಿ ರೋಗಿಗಳ ಆರೋಗ್ಯದ ಕುರಿತು ವಿಚಾರಿಸಿದರು.

ಇದೇ ವೇಳೆ, ಆಸ್ಪತ್ರೆಯಲ್ಲಿ ಬಿಜೆಪಿ ಕಾರ್ಯಕರ್ತರೊಬ್ಬರ ತಾಯಿ ದಾಖಲಾಗಿರುವ ವಿಷಯ ತಿಳಿದ ಸಂಸದರು, ವಾರ್ಡ್‌ಗೆ ತೆರಳಿ ಅವರನ್ನು ಮಾತನಾಡಿಸಿ, ಬಳಿಕ ಆರೋಗ್ಯದ ಬಗ್ಗೆ ವೈದ್ಯರಿಂದ ಮಾಹಿತಿ ಪಡೆದರು.

ನಂತರ ಡಯಾಲಿಸಿಸ್ ಘಟಕಕ್ಕೆ ತೆರಳಿ ಹೃದಯ ತಪಾಸಣೆಗೆ ಅಗತ್ಯವಿರುವ ಎಕೋ ಯಂತ್ರ, ಎಂಆರ್‌ಐ ಸ್ಕ್ಯಾನಿಂಗ್ ಸೌಲಭ್ಯ ಹಾಗೂ ಅಲ್ಟ್ರಾಸೌಂಡ್ ಯಂತ್ರ ಒದಗಿಸುವ ಕುರಿತು ಚರ್ಚಿಸಿದರು. ಸಿಬ್ಬಂದಿ ಕೊರತೆ ನೀಗಿಸಲು ಸಂಬಂಧಪಟ್ಟವರೊಂದಿಗೆ ಮಾತುಕತೆ ನಡೆಸಿದರು.

ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಮಂಜುನಾಥ್ ಇತರರು ಇದ್ದರು.

ಖುಷಿ ತಂದ ಗೆಲುವು: ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಕೃಷಿ ನೀತಿಗಳ ವಿರುದ್ಧ ಹರಿಯಾಣ ಮತ್ತು ಪಂಜಾಬ್‌ನಲ್ಲಿ ದೊಡ್ಡಮಟ್ಟದ ಹೋರಾಟ ನಡೆದಿತ್ತು. ಈಗ, ಅದೇ ಹರಿಯಾಣದಲ್ಲಿ ಬಿಜೆಪಿ ಮೂರನೇ ಸಲ ಗೆದ್ದಿದೆ. ಪ್ರಧಾನಿ ಮೋದಿ ಅವರು ಕೃಷಿ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಿದ್ದಾರೆ. ಕಿಸಾನ್ ಸಮ್ಮಾನ್ ಸೇರಿ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಹಾಗಾಗಿ, ಹರಿಯಾಣದಲ್ಲಿ ಪಕ್ಷ ಗೆಲುವು ಸಾಧಿಸಿದೆ ಎಂದು ಹರಿಯಾಣ ಮತ್ತು ಜಮ್ಮುಕಾಶ್ಮೀರ ಚುನಾವಣಾ ಫಲಿತಾಂಶ ಕುರಿತ ಸುದ್ದಿಗಾರರ ಪ್ರಶ್ನೆಗೆ ಸಂಸದರು ಪ್ರತಿಕ್ರಿಯಿಸಿದರು.

ಜಮ್ಮು ಮತ್ತು ಕಾಶ್ಮೀರದಲ್ಲಿ ಪಕ್ಷ ಬಹುಮತ ಗಳಿಸಲು ಸಾಧ್ಯವಾಗಿಲ್ಲ. ಅಲ್ಲಿನ ಜನರಿಗೆ ಇನ್ನೂ ವಾಸ್ತವ ಅರಿವಾಗಬೇಕಿದೆ. ಸದ್ಯ ಅಲ್ಲಿ ಕಾಂಗ್ರೆಸ್ ನೇತೃತ್ವದ ಇಂಡಿ ಮೈತ್ರಿಕೂಟವು ಗೆಲುವು ಸಾಧಿಸಿದೆ. ರಾಜ್ಯದಲ್ಲಿ ಕಲಂ 370 ರದ್ದಾದ ಬಳಿಕ ಪರಿಸ್ಥಿತಿ ಬದಲಾಗಿದ್ದು, ಮುಂದೆ ಬಿಜೆಪಿ ಬೇರೂರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net