ರಾಜೀವ್‌ಗಾಂಧಿ ನೀಲಿಗಣ್ಣಿನ ಹುಡುಗ ಪರಂ 1989ರಲ್ಲಿ ರಾಜಕೀಯ ಇನ್ನಿಂಗ್ಸ್ ಆರಂಭ

Param_Web
Published on

ತುಮಕೂರು: ದಿವಂಗತ ಪ್ರಧಾನಿ ರಾಜೀವ್‌ಗಾಂಧಿ ನೀಲಿಗಣ್ಣಿನ ಹುಡುಗ ಡಾ.ಜಿ.ಪರಮೇಶ್ವರ 1989ರಲ್ಲಿ ಮೊದಲ ಬಾರಿ ಚುನಾವಣೆ ಎದುರಿಸಿದ್ದು ಮಧುಗಿರಿ ಮೀಸಲು ಕ್ಷೇತ್ರದಿಂದ. ಮೊಟ್ಟಮೊದಲ ಚುನಾವಣೆ ಎದುರಿಸಿದಾಗ ಪರಂಗೆ ಕೇವಲ 39 ವರ್ಷ.

ಮೊದಲ ಪ್ರಯತ್ನದಲ್ಲೇ ಶಕ್ತಿಸೌಧ ಪ್ರವೇಶಿಸಿದ ಪರಮೇಶ್ವರ್‌ಗೆ 1993-94ರ ವೀರಪ್ಪ ಮೊಯ್ಲಿ ಸಚಿವ ಸಂಪುಟದಲ್ಲಿ ರೇಷ್ಮೆ ಸಚಿವರಾಗುವ ಯೋಗವು ಒದಗಿಬಂತು. 1994ರ ಚುನಾವಣೆಯಲ್ಲಿ ಸೋಲನುಭವಿಸಿದರು. 1999 ಹಾಗೂ 2004ರಲ್ಲಿ ಮಧುಗಿರಿಯಿಂದಲೇ ಮರು ಆಯ್ಕೆಯಾದ ಪರಮೇಶ್ವರ್ ಕ್ಷೇತ್ರ ಮರುವಿಂಗಡಣೆ ಬಳಿಕ ಕೊರಟಗೆರೆ ಕ್ಷೇತ್ರಕ್ಕೆ ವಲಸೆ ಬಂದರು.

1999ರಿಂದ 2004ರವರೆಗೆ ಎಸ್.ಎಂ.ಕೃಷ್ಣ ಸಚಿವ ಸಂಪುಟದಲ್ಲಿ ಉನ್ನತ ಶಿಕ್ಷಣ ಸಚಿವರಾಗಿದ್ದರು. ನಂತರ 2008ರಲ್ಲಿ ಮತ್ತೆ ವಿಧಾನಸಭೆ ಪ್ರವೇಶಿಸಿದ ಪರಂ ಹೆಗಲಿಗೆ 2010 ರಿಂದ 2018ರವರೆಗೆ ಕೆಪಿಸಿಸಿ ಹೊಣೆಬಿತ್ತು. ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿದ್ದಾಗಲೇ 2013ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಸ್ವಂತಶಕ್ತಿ ಮೇಲೆ ಅಧಿಕಾರಕ್ಕೆ ಬಂದಿತಾದರು ಪರಂ ಸ್ವಕ್ಷೇತ್ರದಲ್ಲಿ ಸೋಲುಂಡಿದ್ದರು. ಹಾಗಾಗಿ, ಅವರ ಸಿಎಂ ಹುದ್ದೆ ಕನಸುಭಗ್ನಗೊಂಡಿತ್ತು. ವಿಧಾನಪರಿಷತ್ ಸದಸ್ಯರಾಗಿ ಸಿದ್ದರಾಮಯ್ಯ ಸಂಪುಟದಲ್ಲಿ ಗೃಹಸಚಿವರಾಗಿ ಸೇವೆ ಸಲ್ಲಿಸುವ ಅವಕಾಶ ಪಡೆದರು.

2018ರಲ್ಲಿ ಜೆಡಿಎಸ್-ಕಾಂಗ್ರೆಸ್ ಸರ್ಕಾರ ರಚನೆ ಆದಾಗ ಮೈತ್ರಿ ಸರ್ಕಾರದಲ್ಲಿ ಪರಂಗೆ ಡಿಸಿಎಂ ಹುದ್ದೆ ಜವಾಬ್ದಾರಿ ಸಿಕ್ಕಿತು. 14 ತಿಂಗಳಲ್ಲೇ ಸರ್ಕಾರ ಪತನಗೊಂಡಿತ್ತು. ಈಗ ಸಿದ್ದರಾಮಯ್ಯ ಸರ್ಕಾರದಲ್ಲಿ ಮತ್ತೊಮ್ಮೆ ಸಚಿವ ಸ್ಥಾನ ಅದೃಷ್ಟ ಮತ್ತೊಮ್ಮೆ ಹುಡುಕಿಕೊಂಡುಬಂದಿದೆ.

ಎಂ.ಎಸ್ಸಿ ., (ಕೃಷಿ), ಪಿ.ಎಚ್‌ಡಿ., ಪದವೀಧರ ಡಾ.ಜಿ.ಪರಮೇಶ್ವರ ಹುಟ್ಟೂರು ತುಮಕೂರು ತಾಲೂಕು ಸಿದ್ಧಾರ್ಥನಗರ (ಗೊಲ್ಲಹಳ್ಳಿ). 1951 ಆಗಸ್ಟ್ 6 ರಂದು ಶಿಕ್ಷಣ ಭೀಷ್ಮ ದಿವಂಗತ ಎಚ್.ಎಂ.ಗಂಗಾಧರಯ್ಯ ದಂಪತಿ ದ್ವಿತೀಯ ಪುತ್ರರಾಗಿ ಪರಂ ಜನನ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net