

ಬೆಂಗಳೂರು: ತಾಳೆಗರಿ ಸಂಗ್ರಹಿಸುವ ಮೂಲಕ ಸಾವಿರಾರು ವಚನಗಳು ಹಾಗೂ ನೂರಾರು ವಚನಕಾರರನ್ನು ಬೆಳಕಿಗೆ ತಂದ ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿ ಅವರು ಬಿಎಂಶ್ರೀ ಹೇಳಿದಂತೆ ‘ವಚನ ಗುಮ್ಮಟ’ ಎಂದು ಸಚಿವ ಎಂ.ಬಿ. ಪಾಟೀಲ್ ಬಣ್ಣಿಸಿದ್ದಾರೆ.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್, ಬೆಂಗಳೂರು ನಗರ ಶರಣ ಸಾಹಿತ್ಯ ಪರಿಷತ್ ಹಾಗೂ ಕದಳಿ ಮಹಿಳಾ ವೇದಿಕೆ ಸಹಯೋಗದಲ್ಲಿ ನಗರದ ಗಾಂಧಿ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ವಚನ ಪಿತಾಮಹ ಡಾ.ಫ.ಗು. ಹಳಕಟ್ಟಿ ಜನ್ಮದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಹಳಕಟ್ಟಿ ಅವರು ತಾಳೆಗರಿ ಸಂಗ್ರಹಿಸಿ ವಚನ ಸಂರಕ್ಷಣೆ ಮಾಡದಿದ್ದರೆ ಬಸವಾದಿ ಶಿವಶರಣರು ಹಾಗೂ ವಚನಗಳು ಬೆಳಕಿಗೆ ಬರುತ್ತಲೇ ಇರಲಿಲ್ಲ. ತಮ್ಮ ನಿಯಂತ್ರಣ ಕಾಯಕದ ಮೂಲಕ 250 ವಚನಕಾರರು, ಹತ್ತು ಸಾವಿರಕ್ಕೂ ಅಧಿಕ ವಚನಗಳನ್ನು ತಲುಪಿಸಿದ್ದಾರೆ. ಅದಕ್ಕಿಂತ ಮೊದಲು ಕೇವಲ 40 ವಚನಕಾರರು ಮಾತ್ರವೇ ನಾಡಿನ ಜನರಿಗೆ ತಿಳಿದಿತ್ತು ಎಂದರು.
ತಾವು ಸಂಗ್ರಹಿಸಿದ ವಚನಗಳನ್ನು ಮಂಗಳೂರಿನ ಬಾಸೆಲ್ ಮಿಷನ್ ಸಂಸ್ಥೆಗೆ ಮುದ್ರಿಸಲು ನೀಡಿದಾಗ, ಅವರು ಕ್ರಿಶ್ಚಿಯನ್ ಧರ್ಮಕ್ಕೆ ಧಕ್ಕೆ ಆಗುತ್ತದೆ ಎಂದು ಹೇಳಿ ಹಳಕಟ್ಟಿ ಅವರಿಗೆ ಅವುಗಳನ್ನು ಹಿಂದಿರುಗಿಸಿದರು. ಆಗ ಹಳಕಟ್ಟಿ ಸ್ವಂತ ಮನೆ ಮಾರಾಟ ಮಾಡಿ, ವಚನಗಳನ್ನು ಅಚ್ಚು ಹಾಕಿಸಿದರು. ಅಲ್ಲದೆ, ವಿಜಯಪುರದಲ್ಲಿ ಬಿಎಲ್ಡಿ ಶಿಕ್ಷಣ ಸಂಸ್ಥೆ, ಸಿದ್ಧೇಶ್ವರ ಬ್ಯಾಂಕ್, ಭೂತನಾಳ ಕೆರೆ ನಿರ್ಮಾಣ ಸೇರಿ ಹಲವು ಸಮಾಜಮುಖಿ ಕಾರ್ಯಗಳನ್ನು ಮಾಡಿದ ಕೀರ್ತಿ ಹಳಕಟ್ಟಿ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.
ಬಸವಾದಿ ಶರಣರನ್ನು ನೆನೆಯುವಾಗ ಹಳಕಟ್ಟಿ ಆವರನ್ನೂ ನೆನೆಯಬೇಕು ಎಂದ ಎಂಬಿಪಿ, ಫ.ಗು.ಹಳಕಟ್ಟಿ ಸಂಶೋಧನಾ ಸಂಸ್ಥೆ ಸ್ಥಾಪನೆಗೆ ಕಾರಣರಾದ ಸಂಶೋಧಕ ಡಾ.ಎಂ.ಎಂ. ಕಲ್ಬುರ್ಗಿ ಅವರನ್ನು ಇದೇ ವೇಳೆ ಸ್ಮರಿಸುತ್ತ ಹಳಕಟ್ಟಿ ಅವರು ಕೊಡುಗೆಯಾಗಿ ನೀಡಿರುವ ವಚನಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕಾರ್ಯ ಆಗಬೇಕು ಎಂದರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ಗೆ ಸರ್ಕಾರದಿಂದ 2 ಕೋಟಿ ರೂ. ಅನುದಾನ ಒದಗಿಸುವಂತೆ ಮಾಡಲಾದ ಮನವಿಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುವುದಾಗಿ ಸಚಿವರು ಭರವಸೆ ನೀಡಿದರು.
ಗದಗದ ತೋಂಟದಾರ್ಯ ಸಂಸ್ಥಾನ ಮಠದ ಜಗದ್ಗುರು ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ ಮಾತನಾಡಿ, ಕನ್ನಡ ಸಾಹಿತ್ಯಕ್ಕೆ ಗೌರವ ತಂದುಕೊಟ್ಟ ಸಾಹಿತ್ಯ ಅಂದರೆ ಅದು ವಚನ ಸಾಹಿತ್ಯ. ಅದನ್ನು ನಮಗೆ ಒದಗಿಸಿಕೊಟ್ಟ ಹಳಕಟ್ಟಿ ಅವರ ಕೊಡುಗೆಯನ್ನು ಶ್ಲಾಘಿಸಿದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಸಿ. ಸೋಮಶೇಖರ್ ಮಾತನಾಡಿ, 12ನೇ ಶತಮಾನದ ವಚನ ಸಾಹಿತ್ಯವನ್ನು ಪುನರ್ ಸೃಷ್ಟಿಸಿದ ಕೀರ್ತಿ .ಗು. ಹಳಕಟ್ಟಿ ಅವರಿಗೆ ಸಲ್ಲುತ್ತದೆ. ವಚನ ಸಾಹಿತ್ಯಕ್ಕಾಗಿ ತಮ್ಮ ಬಡತನವನ್ನೇ ಮುಚ್ಚಿಟ್ಟು ಕಾಯಕಯೋಗಿಯಾಗಿ ಕಾರ್ಯನಿರ್ವಹಿಸಿದ ಧೀಮಂತ ವ್ಯಕ್ತಿ ಹಳಕಟ್ಟಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಾಹಿತಿ ಡಾ. ಚಂದ್ರಶೇಖರ ಕಂಬಾರ, ಬೆಂಗಳೂರು ನಗರ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ವಿ. ನಾಗರಾಜಮೂರ್ತಿ, ಕದಳಿ ಮಹಿಳಾ ವೇದಿಕೆಯ ಪ್ರಮೀಳಾ ಗರಡಿ ಇತರರು ಇದ್ದರು.