

ತುಮಕೂರು: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 250 ಅಡಿ ಎತ್ತರದ ಪುತ್ಥಳಿಯನ್ನು ರಾಜ್ಯದಲ್ಲಿ ನಿರ್ಮಿಸುವುದಾಗಿ ಈ ಬಾರಿಯ ಬಜೆಟ್ನಲ್ಲಿ ಘೋಷಿಸುವಂತೆ ಕರ್ನಾಟಕ ಭೀಮ ಸೇನೆ ಒತ್ತಾಯಿಸಿದೆ.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಜಗದೀಶ್, ಬೇರೆ ಸಮುದಾಯದ ನಾಯಕರುಗಳ ಪ್ರತಿಮೆಗಳನ್ನು ನಗರದ ಪ್ರಮುಖ ಜಾಗಗಳಲ್ಲಿ ಸ್ಥಾಪಿಸಿರುವ ರೀತಿಯಲ್ಲಿಯೇ ಬೆಂಗಳೂರಿನ ಲಾಲ್ಬಾಗ್ನಲ್ಲಿ ಅಂಬೇಡ್ಕರ್ ಅವರ 250 ಅಡಿ ಎತ್ತರದ ಪುತ್ಥಳಿ ಸ್ಥಾಪಿಸುವುದರ ಜತೆಗೆ, ಬಾಬಾ ಸಾಹೇಬರ ಕುರಿತು ಮ್ಯೂಸಿಯಂ ಸ್ಥಾಪಿಸುವಂತೆ ಆಗ್ರಹಿಸಿದರು.
ತೆಲಂಗಾಣದಲ್ಲಿ 125 ಅಡಿ ಎತ್ತರದ ಅಂಬೇಡ್ಕರ್ ಪ್ರತಿಮೆಯನ್ನು ಅಂದಿನ ಸಿಎಂ ಕೆ.ಸಿ.ಚಂದ್ರಶೇಖರರಾವ್ ಪ್ರತಿಷ್ಠಾಪಿಸಿದರೆ, ಆಂಧ್ರಪ್ರದೇಶದ ಅಂದಿನ ಸಿಎಂ ವೈ.ಎನ್.ಜಗಮೋಹನ್ ರೆಡ್ಡಿ ಅವರು ಸುಮಾರು 206 ಅಡಿ ಎತ್ತರದ ಅಂಬೇಡ್ಕರ್ ಪ್ರತಿಮೆಯನ್ನು ಸ್ಥಾಪಿಸಿದ್ದಾರೆ. ಈ ಎರಡು ರಾಜ್ಯಗಳ ರೀತಿಯಲ್ಲಿಯೇ ಕರ್ನಾಟಕವೂ ಕೂಡ ಬಾಬಾ ಸಾಹೇಬರ್ 250 ಅಡಿ ಎತ್ತರದ ಪ್ರತಿಮೆಯನ್ನು ಸ್ಥಾಪಿಸಬೇಕೆಂಬುದು ಕೆಬಿಎಸ್ ಹೋರಾಟವಾಗಿದೆ. ನಮ್ಮ ಮನವಿಗೆ ಸಿಎಂ, ಡಿಸಿಎಂ, ಸಚಿವರುಗಳು, ಶಾಸಕರುಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿಸಿದರು.
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಏಕ ಕಾಲಕ್ಕೆ ಕರ್ನಾಟಕ ಭೀಮ ಸೇನೆ ಈ ಹೋರಾಟವನ್ನು ಕೈಗೆತ್ತಿಕೊಂಡಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮನವಿ ಸಲ್ಲಿಸಿದ ಸಂದರ್ಭದಲ್ಲಿ ನಾವು ಬೆಂಗಳೂರು-&ಮೈಸೂರು ಎಕ್ಸ್ಪ್ರೆಸ್ ಕಾರಿಡಾರ್ನ ಒಂದು ಭಾಗದಲ್ಲಿ ಅಂಬೇಡ್ಕರ್ ಪ್ರತಿಮೆ ಸ್ಥಾಪಿಸಲು ಒತ್ತಾಯಿಸಿದ್ದೇವು.ಆದರೆ, ಸರ್ಕಾರದ ಮುಖ್ಯ ಕಾರ್ಯದರ್ಶಿಯವರು ಬೆಂಗಳೂರಿನ ಹೃದಯ ಭಾಗದಲ್ಲಿರುವ ಲಾಲ್ಬಾಗ್ ನಲ್ಲಿ ಸುಮಾರು 240 ಎಕರೆ ಜಾಗವಿದ್ದು, ಈ ಜಾಗದಲ್ಲಿಯೇ ಬಾಬಾ ಸಾಹೇಬರ ಪ್ರತಿಮೆ ಸ್ಥಾಪಿಸುವ ಭರವಸೆಯನ್ನು ಕೆಬಿಎಸ್ಗೆ ನೀಡಿದ್ದು ಅದರಂತೆ ಈ ಸಾಲಿನ ಬಜೆಟ್ನಲ್ಲಿ ಘೋಷಿಸುವಂತೆ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ತುಮಕೂರು ಜಿಲ್ಲಾಧ್ಯಕ್ಷ ಸಿ.ಎಲ್.ಮಹದೇವಯ್ಯ, ಪ್ರಧಾನ ಕಾರ್ಯದರ್ಶಿ ಮಂಜುನಾಥ್, ಯುವ ಘಟಕದ ಅಧ್ಯಕ್ಷ ಜಿ.ರಂಜನ್, ಪದಾಧಿಕಾರಿಗಳಾದ ಮಣಿ ಪ್ರಶಾಂತ್, ನಂದನ್, ಮಹೇಶ್, ರಾಕೇಶ್, ರಮೇಶ್ ಮತ್ತಿತರರು ಹಾಜರಿದ್ದರು.