ಎಲ್ಲೆಂದರಲ್ಲಿ ಕಸ ಬಿಸಾಡಿದರೆ ದುಪ್ಪಟ್ಟು ದಂಡ ವಿಧಿಸಿ

9 vpt. 1.1
filter: 0; jpegRotation: 0; fileterIntensity: 0.000000; filterMask: 0; module:1facing:0; hw-remosaic: 0; touch: (-1.0, -1.0); modeInfo: ; sceneMode: Night; cct_value: 0; AI_Scene: (-1, -1); aec_lux: 0.0; hist255: 0.0; hist252~255: 0.0; hist0~15: 0.0;
Published on

ವಿರಾಜಪೇಟೆ:  ಪಟ್ಟಣದ ಕೆಲವು ಕಡೆ ಅಶುಚಿತ್ವ ತಾಂಡವವಾಡುತ್ತಿದ್ದು ಮುಖ್ಯ ರಸ್ತೆಯಲ್ಲಿ, ಎಲ್ಲೆಂದರಲ್ಲಿ ಕಸ ಬಿಸಾಕುವವರಿಗೆ ದುಪ್ಪಟ್ಟು ದಂಡ ವಿಧಿಸಿ ಎಂದು ವಿಧಾನ ಪರಿಷತ್ ಸದಸ್ಯ ಮಂಡೇಪಂಡ ಸುಜಾ ಕುಶಾಲಪ್ಪ ಸೂಚನೆ ನೀಡಿದರು.

ಪುರಸಭೆ ಅಧ್ಯಕ್ಷೆ ದೇಚಮ್ಮ ಕಾಳಪ್ಪ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಆಯೋಜಿಸಿದ್ದ ವಿರಾಜಪೇಟೆ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.

ಕೊಡಗು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರವಾಸಿ ತಾಣವಾಗಿ ಗುರುತಿಸಿಕೊಂಡಿದೆ. ಪ್ರವಾಸಿಗರು ಸಾಕಷ್ಟು ಸಂಖ್ಯೆಯಲ್ಲಿ ಕೊಡಗಿಗೆ ಆಗಮಿಸುತ್ತಿದ್ದಾರೆ. ನಾವು ಶುಚಿತ್ವಕ್ಕೆ ಹೆಚ್ಚಿನ ಮಹತ್ವ ನೀಡಬೇಕಾಗಿದೆ. ಆದರೆ ಪಟ್ಟಣದಲ್ಲಿ ಶುಚಿತ್ವದ ಸಮಸ್ಯೆ ಕಾಣುತ್ತಿದೆ. ಈ ಹಿಂದೆ ಕಟ್ಟುನಿಟ್ಟಾಗಿ ಸ್ವಚ್ಛತೆ ಕಾಪಾಡಿಕೊಳ್ಳಲಾಗುತ್ತಿತ್ತು. ಇದೀಗ ಶುಚಿತ್ವ ಕಡಿಮೆಯಾಗಿದ್ದು ಎಲ್ಲೆಂದರಲ್ಲಿ ಕಸಗಳು ಕಾಣುತ್ತಿದೆ. ಯಾರೇ ಕಸ ತಂದು ಸುರಿದರೂ ಅವರಿಗೆ ದುಪ್ಪಟ್ಟು ದಂಡ ವಿಧಿಸಿ ಎಚ್ಚರಿಕೆ ನೀಡುವಂತೆ ಸೂಚಿಸಿದರು.

ಸಭೆಯ ಆರಂಭದಲ್ಲಿ ಕಾಂಗ್ರೆಸ್ ಸದಸ್ಯ ಸಿ.ಕೆ.ಪೃಥ್ವಿನಾಥ್ ಮಾತನಾಡಿ, ಪಟ್ಟಣದಲ್ಲಿ 15 ಕಿ.ಮೀ. ಹೂಳೆತ್ತುವ ಕೆಲಸಕ್ಕೆ ನಿಗದಿ ಮಾಡಿ ಕ್ರಿಯಾಯೋಜನೆ ರೂಪಿಸಲಾಗಿದೆ. ಆದರೆ ಪಟ್ಟಣದ ಸುತ್ತಳತೆ ಏಳೂವರೆ ಕಿ.ಮೀ ಮಾತ್ರ ಇದೆ. ಯಂತ್ರದ ಮೂಲಕ ಮೂರು ತಿಂಗಳು ಸತತವಾಗಿ ಕೆಲಸ ನಿರ್ವಹಿಸಿದರೂ 10 ಲಕ್ಷ ರೂ. ಸಂಪೂರ್ಣ ಬಳಕೆ ಆಗುವುದಿಲ್ಲ. ಇಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದರು. ಈ ವಿಚಾರದಲ್ಲಿ ಸ್ವಪಕ್ಷೀಯ ಸದಸ್ಯರು ಏರಿದ ಧ್ವನಿಯಲ್ಲಿ ಚರ್ಚೆ ನಡೆದು ಸದಸ್ಯ ರಾಫಿ, ರಂಜಿ, ಮತೀನ್, ರಾಜೇಶ್ ತೀವ್ರ ಆಕ್ರೋಶ ವ್ಯಕ್ತ ಪಡಿಸಿದರು.

ಕಾಂಗ್ರೆಸ್ ಸದಸ್ಯ ರಾಜೇಶ್ ಮಾತನಾಡಿ, ಸ್ಥಾಯಿ ಸಮಿತಿ ಅಧ್ಯಕ್ಷ ಜಲೀಲ್ ಅವರು ಸ್ಥಾಯಿ ಸಮಿತಿ ಸಭೆಗೆ ಆಹ್ವಾನಿಸದಿರುವ ಬಗ್ಗೆ ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿದರು.

ಮಲಬಾರ್ ರಸ್ತೆಗೆ ಕಂಚಿ ಕಾಮಾಕ್ಷಿ ಎಂದು ನಾಮಕರಣದ ವಿಚಾರದಲ್ಲಿ ವಾರ್ಡ್ ಸದಸ್ಯ ಮಂಡೇಪಂಡ ವಿನಾಂಕ್ ಕುಟ್ಟಪ್ಪ ಮಾತನಾಡಿ, ರಸ್ತೆಗೆ ನಾಮಕರಣ ಮಾಡುವಾಗ ವಾರ್ಡ್ ಸದಸ್ಯನಾದ ನನ್ನ ಗಮನಕ್ಕೆ ಹಾಗೂ ಅಲ್ಲಿನ ಸ್ಥಳೀಯರ ಗಮನಕ್ಕೆ ತಂದಿಲ್ಲ. ವಾಸ್ತವವಾಗಿ ಅಲ್ಲಿ ಶ್ರೀ ಮುತ್ತಪ್ಪ ದೇವಾಲಯ ಇದ್ದು ಅದರ ಹೆಸರನ್ನು ಈ ರಸ್ತೆಗೆ ನಾಮಕರಣ ಮಾಡುವಂತೆ ದೇವಾಲಯ ಸಮಿತಿ ಮತ್ತು ಆ ಜನಾಂಗದವರು ಆಗ್ರಹಿಸುತ್ತಿದ್ದಾರೆ. ದಯವಿಟ್ಟು ಜನರ ಭಾವನೆಯನ್ನು ಗೌರವಿಸಿ ಮುತ್ತಪ್ಪ ರಸ್ತೆ ಎಂದು ನಾಮಕರಣ ಮಾಡಿ ಎಂದು ಸಭೆಗೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ವಿಧಾನ ಪರಿಷತ್ ಸದಸ್ಯ ಮಂಡೇಪಂಡ ಸುಜಾ ಕುಶಾಲಪ್ಪ ಅವರು, ನಾನು ಕೂಡ ಅಲ್ಲಿಯ ನಿವಾಸಿಯಾಗಿದ್ದು ಎಲ್ಲ ದೇವರ ಬಗ್ಗೆ ಗೌರವವಿದೆ. ಅಲ್ಲಿನ ನಿವಾಸಿಗಳ ಕೋರಿಕೆಯಂತೆ ಮುತ್ತಪ್ಪ ಕಂಚಿ ಕಾಮಾಕ್ಷಿ ರಸ್ತೆ ಎಂದು ಹೆಸರಿಡುವಂತೆ ಸಲಹೆ ನೀಡಿದರು. ಆದರೂ ಈ ವಿಚಾರದಲ್ಲಿ ಗೊಂದಲ ಏರ್ಪಟ್ಟ ಕಾರಣ ಅಧ್ಯಕ್ಷೆ ದೇಚಮ್ಮ ಕಾಳಪ್ಪ ಪುರಸಭೆಯ ನಿಯಮಾನುಸಾರ ಜಿಲ್ಲಾಧಿಕಾರಿಗೆ ಕಳುಹಿಸಿ ಕೊಡಲಾಗುವುದು ಎಂದು ಹೇಳಿದರು.

ಉಳಿದಂತೆ ಬೀದಿದೀಪ, ಕುಡಿಯುವ ನೀರು, ಒಳಚರಂಡಿ, ಸ್ವಚ್ಛತೆ, ಕೆಲ ವಾರ್ಡ್‌ಗಳಲ್ಲಿ ಆರಂಭಿಸಿರುವ ಕಾಮಗಾರಿಗಳ ಬಗ್ಗೆ ಚರ್ಚೆ ನಡೆಸಲಾಯಿತು.

ವೇದಿಕೆಯಲ್ಲಿ ಉಪಾಧ್ಯಕ್ಷೆ ಫಸಿಹಾ ತಬುಸಂ, ಮುಖ್ಯಾಧಿಕಾರಿ ಪಟ್ಟಚರವಂಡ ನಾಚಪ್ಪ, ಸ್ಥಾಯಿ ಸ್ಥಾಮಿತಿ ಅಧ್ಯಕ್ಷರಾದ ಜಲೀಲ್ ಪೂರ್ಣಿಮಾ, ಅಭಿಯಂತರ ಹೇಮಕುಮಾರ್, ಪರಿಸರ ಅಭಿಯಂತರ ರೀತು ಸಿಂಗ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net