

ಶಿಡ್ಲಘಟ್ಟ : ಗ್ರಾಮೀಣ ಭಾಗದಲ್ಲಿ ಹೈನುಗಾರಿಕೆ ಮತ್ತು ಕುರಿ, ಮೇಕೆ ಸಾಕಣೆಯಿಂದ ಬದುಕನ್ನು ಕಟ್ಟಿಕೊಳ್ಳಬಹುದು. ರೇಷ್ಮೆ ಕೃಷಿ ಮತ್ತು ಸಾಮಾನ್ಯ ಕೃಷಿಯೊಂದಿಗೆ ಕುರಿ, ಮೇಕೆ ಸಾಕಣೆಯನ್ನು ಕೈಗೊಳ್ಳುವುದರಿಂದ ಹೆಚ್ಚಿನ ಆದಾಯ ಗಳಿಸಬಹುದು ಎಂದು ತಾಪಂ ಮಾಜಿ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣರೆಡ್ಡಿ ತಿಳಿಸಿದರು.
ತಾಲೂಕಿನ ಅಪ್ಪೇಗೌಡನಹಳ್ಳಿ ನಿವಾಸಿ ತಾಪಂ ಮಾಜಿ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣರೆಡ್ಡಿ ಅವರು ತಮ್ಮ ತಾಯಿ ಸರೋಜಮ್ಮ ನೆನಪಿನಲ್ಲಿ ಗ್ರಾಮದ 100 ಕುಟುಂಬಗಳಿಗೆ ಒಂದು ಹೆಣ್ಣು ಒಂದು ಗಂಡು ಕುರಿ ತಲಾ 2 ಕುರಿಗಳಂತೆ 200 ಕುರಿಗಳನ್ನು ಭಾನುವಾರ ವಿತರಿಸಿ ಮಾತನಾಡಿದರು.
ಗ್ರಾಮದಲ್ಲಿ ಬಹುತೇಕ ಕುಟುಂಬಗಳು ಆರ್ಥಿಕವಾಗಿ ಹಿಂದುಳಿದಿವೆ. ಕೆಲಸ ಹುಡುಕಿಕೊಂಡು ಬೇರೆ ಬೇರೆ ಊರುಗಳಿಗೆ ಹಲವರು ಹೋಗುತ್ತಾರೆ. ತಮ್ಮ ದಿನನಿತ್ಯದ ಕೆಲಸ ಕಾರ್ಯಗಳ ನಡುವೆ ಮನೆ ಬಳಿ ಒಂದೆರಡು ಕುರಿ ಮೇಕೆಗಳನ್ನು ಸಾಕುವುದರಿಂದ ಆರ್ಥಿಕವಾಗಿ ಸುಧಾರಣೆ ಕಾಣಬಹುದು ಎಂದರು.
ಗ್ರಾಮದ 100 ದಲಿತ ಕುಟುಂಬಗಳಿಗೆ ತಲಾ 2 ಕುರಿಗಳನ್ನು ವಿತರಿಸಲಾಯಿತು.
ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಮಂಜುನಾಥ್, ಗ್ರಾಪಂ ಮಾಜಿ ಸದಸ್ಯ ಎ.ಎಂ.ತ್ಯಾಗರಾಜ್, ಉಪಾಧ್ಯಕ್ಷೆ ಮಂಜುಳಮ್ಮ, ಸದಸ್ಯೆ ಗಂಗರತ್ನಾ ಮುನೀಂದ್ರ, ದ್ಯಾವಪ್ಪ, ಮುನಿರೆಡ್ಡಿ, ಎಂಪಿಸಿಎಸ್‌ನ ಕೇಶವಮೂರ್ತಿ, ದಾಸಪ್ಪ, ಮುನಿರಾಜು, ವೆಂಕಟೇಶ್, ದೇವರಾಜ್ ಇತರರು ಇದ್ದರು.