

ಹನೂರು: ಜಲಾಶಯದಲ್ಲಿ ಸಂಗ್ರಹವಾಗಿರುವ ನೀರು ಯಾವುದೇ ಕಾರಣಕ್ಕೂ ಪೋಲಾಗಬಾರದು. ಈ ಬಗ್ಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು ಎಂದು ಶಾಸಕ ಎಂ.ಆರ್. ಮಂಜುನಾಥ್ ಸೂಚಿಸಿದರು.
ತಾಲೂಕಿನ ಅಜ್ಜೀಪುರ ಸಮೀಪದ ಉಡುತೊರೆಹಳ್ಳ ಜಲಾಶಯಕ್ಕೆ ಶನಿವಾರ ಅಧಿಕಾರಿಗಳು ಹಾಗೂ ರೈತ ಮುಖಂಡರೊಂದಿಗೆ ಭೇಟಿ ನೀಡಿ ನೀರಿನ ಸಂಗ್ರಹಣಾ ಪ್ರಮಾಣವನ್ನು ಪರಿಶೀಲಿಸಿ ಮಾತನಾಡಿದರು.
ಜಲಾಶಯದ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿ ನೂರಾರು ರೈತರು ಕೃಷಿ ಮಾಡುತ್ತಿದ್ದು, ನೀರಾವರಿ ಸೌಕರ್ಯವನ್ನು ಒದಗಿಸಲಾಗಿದೆ. ಆದರೆ, ಈ ಹಿಂದೆ ಜಲಾಶಯದ ಮೂಲಕ ಹಾದು ಹೋಗುವ ಕಾಲುವೆಯಲ್ಲಿ ಹೂಳು ತುಂಬಿದ್ದ ಪರಿಣಾಮ ಜಮೀನುಗಳಿಗೆ ಸಮರ್ಪಕವಾಗಿ ನೀರು ಹರಿಯಲು ಸಾಧ್ಯವಾಗುತ್ತಿರಲಿಲ್ಲ. ಇದರಿಂದ ಕೃಷಿಗೆ ತೊಡುಕಾಗಿ ಪರಿಣಮಿಸಿತ್ತು. ಇದನ್ನು ಮನಗಂಡು ನರೇಗಾ ಯೋಜನೆಯಡಿ ಹೂಳನ್ನು ತೆರೆವುಗೊಳಿಸಿ ನಿರೋದಗಿಸುವುದರ ಮೂಲಕ ರೈತರಿಗೆ ಅನುಕೂಲ ಕಲ್ಪಿಸಲಾಗಿತ್ತು. ಬಳಿಕ ಮಳೆಗಾಲದ ವೇಳೆ ಡ್ಯಾಂ ಭರ್ತಿಯಾಗಿದ್ದು, ಬಾಗಿನ ಅರ್ಪಿಸಿಲಾಗಿತ್ತು. ಆದರೆ ಇದೀಗ ಬೇಸಿಗೆ ಆಗಮಿಸಿರುವುದರಿಂದ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ನೀರಿನ ಅಭಾವ ತಲೆದೂರುವ ಸಾಧ್ಯತೆ ಇದೆ. ಆದ್ದರಿಂದ ಈ ಬಗ್ಗೆ ಮನದಟ್ಟು ಮಾಡಿಕೊಂಡು ನೀರು ವ್ಯರ್ಥವಾಗದಂತೆ ನಿಗಾ ವಹಿಸಬೇಕು. ಕೃಷಿಗೆ ಅನುಕೂಲವಾಗುವಂತೆ ನೋಡಿಕೊಳ್ಳಬೇಕು. ಆಗಾಗ್ಗೆ ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು ಎಂದು ನೀರಾವರಿ ನಿಗಮದ ಎಇಇ ಕರುಣಾಮಯಿ ಅವರಿಗೆ ತಿಳಿಸಿದರು.
ಇದೇ ವೇಳೆ ರೈತ ಮುಖಂಡರು ಎಡ ಹಾಗೂ ಬಲದಂಡೆ ಕಾಲುವೆಯಲ್ಲಿ ಹೂಳು ತೆರೆವುಗೊಳಿಸುವಂತೆ ಮನವಿ ಮಾಡಿದರು. ಇದಕ್ಕೆ ಶಾಸಕರು ಅಗತ್ಯ ಭರವಸೆ ನೀಡಿ ಈ ಸಂಬಂಧ ಕ್ರಿಯಾಯೋಜನೆ ತಯಾರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಮುತ್ತುರಾಜು, ಸದಸ್ಯ ಗುರು, ಜಡೇಸ್ವಾಮಿ, ಕೃಷ್ಣಮೂರ್ತಿ, ಹೊನ್ನಪ್ಪ, ತಾಲೂಕು ರೈತ ಸಂಘದ ಅಧ್ಯಕ್ಷ ಅಮ್ಜಾದ್‌ಖಾನ್, ಗೌರವಾಧ್ಯಕ್ಷ ರಾಜಣ್ಣ, ಸದಸ್ಯ ಶಿವಣ್ಣ, ನಾಗರಾಜು ಇತರರು ಇದ್ದರು.