ನಾಟಕ ಆಡಬೇಡಿ, ಸುಳ್ಳು ಕೇಳಲ್ಲ

WEB 1
Published on

 ರೌಡಿಶೀಟರ್‌ಗಳಿಗೆ ಎಸ್‌ಪಿ ಕುಶಾಲ್ ಚೌಕ್ಸೆ ತರಾಟೆ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರದಂತೆ ಎಚ್ಚರಿಕೆ

ಚಿಕ್ಕಬಳ್ಳಾಪುರ: ನಾಟಕವಾಡುವುದನ್ನು ಬಿಡಬೇಕು, ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಬಾರದು, ಸಮಾಜದ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತಂದರೆ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುತ್ತದೆ, ಸುಳ್ಳು ಹೇಳುವುದನ್ನು ಕೇಳಲ್ಲ. ನಿಗಾ ವಹಿಸಿ ಮಾಹಿತಿ ತಿಳಿದುಕೊಳ್ಳುವುದು ಗೊತ್ತಿದೆ....

ಇದು ಜಿಲ್ಲಾ ಪೊಲೀಸ್ ಕಚೇರಿ ಆವರಣದಲ್ಲಿ ಸೋಮವಾರ ರೌಡಿಶೀಟರ್‌ಗಳ ಪರೇಡ್‌ನಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ಎಚ್ಚರಿಕೆ ನೀಡಿದ ಪರಿ.

ಜಿಲ್ಲೆಯ ವಿವಿಧ ಭಾಗಗಳ 400ಕ್ಕೂ ಹೆಚ್ಚು ರೌಡಿಶೀಟರ್‌ಗಳ ದಾಖಲೆಗಳನ್ನು ಪರಿಶೀಲಿಸುತ್ತಲೇ ಎಸ್‌ಪಿ ಕುಶಾಲ್ ಚೌಕ್ಸೆ ಸಲಹೆ, ಸೂಚನೆ ಎಚ್ಚರಿಕೆ ನೀಡಿದರು.

ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಮಾಮ್ ಖಾಸೀಂ, ಡಿವೈಎಸ್ಪಿ ಶಿವಕುಮಾರ್, ಮುರಳೀಧರ್ ಮತ್ತಿತರರು ಇದ್ದರು.

ಬುದ್ದಿ ಇಲ್ಲವಾ?

ಖುದ್ದು ಮೊಬೈಲ್ ಪರಿಶೀಲನೆಯ ಮೂಲಕ ಮಟ್ಕಾ ದಂಧೆಯಲ್ಲಿ ರೌಡಿಶೀಟರ್ ಭಾಗಿಯಾಗಿರುವುದನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪತ್ತೆ ಹಚ್ಚಿದರು. ಹೇ ಕೇಸ್ ಹಾಕಿ, ರೌಡಿಶೀಟರ್ ತೆರೆದಿದ್ದರೂ ಬುದ್ದಿ ಬಂದಿಲ್ಲವಾ ಎಂದು ಪ್ರಶ್ನಿಸಿದರು. ಪ್ರತಿದಿನ ಮಟ್ಕಾ ದಂಧೆಯಲ್ಲಿ ತೊಡಗಿದ್ದು ಹಲವು ಎಚ್ಚರಿಕೆಗೂ ಎಚ್ಚೆತ್ತುಕೊಂಡಿಲ್ಲ ಎಂದು ಕಿಡಿಕಾರಿದರು. ಹಾಗೆಯೇ ಅವ್ಯವಹಾರ ನಡೆಯುವ ಸ್ಥಳ ಪರಿಶೀಲಿಸಿ, ಪ್ರಕರಣ ದಾಖಲಿಸುವಂತೆ ಸಿಬ್ಬಂದಿಗೆ ಸೂಚಿಸಿದರು.

ನಿಮ್ಮ ಸಮಸ್ಯೆಗಳೇನು? ಏನಾದರೂ ತೊಂದರೆಗಳಾಗುತ್ತಿದೆಯೇ? ಏನಾದರೂ ಇದ್ದರೆ ಹೇಳಿ ಸರಿಪಡಿಸೋಣ? ಎಂದು ಹೇಳುತ್ತಲೇ ಒಬ್ಬೊಬ್ಬ ರೌಡಿಶೀಟರುಗಳನ್ನು ತರಾಟೆಗೆ ತೆಗೆದುಕೊಂಡರು. ಇದೇ ವೇಳೆ ವಿನಯಪೂರ್ವಕವಾಗಿ ವರ್ತಿಸುತ್ತಿದ್ದವರ ವಿವಿಧ ಕೃತ್ಯಗಳ ಬಗ್ಗೆ ಅಧಿಕಾರಿಗಳು ಎಸ್ಪಿ ಗಮನಕ್ಕೆ ತಂದರು.

ರೌಡಿಶೀಟರ್‌ಗಳ ಮೇಲೆ ನಿಗಾ

ಜಿಲ್ಲೆಯಲ್ಲಿ 760 ರೌಡಿಶೀಟರ್‌ಗಳಿದ್ದಾರೆ. ಪ್ರತಿಯೊಬ್ಬರ ಮೇಲೂ ನಿಗಾ ಇಡಲಾಗಿದೆ. ಯಾವುದೇ ಅಹಿತಕರ ಚಟುವಟಿಕೆಯಲ್ಲಿ ತೊಡಗಿರುವುದು ಗಮನಕ್ಕೆ ಬರುತ್ತಿದ್ದಂತೆ ಪ್ರಕರಣವನ್ನು ದಾಖಲಿಸಲಾಗುತ್ತಿದೆ. ಇಷ್ಟಾದರೂ ಅತಿರೇಕದ ವರ್ತನೆ ತೋರಿ, ಸ್ಥಳೀಯವಾಗಿ ಶಾಂತಿ ಸುವ್ಯವಸ್ಥೆಗೆ ಭಂಗ ತಂದವರ ಗಡಿಪಾರಿಗೆ ಜಿಲ್ಲಾಡಳಿತಕ್ಕೆ ಶಿಫಾರಸು ಮಾಡಲಾಗುತ್ತಿದೆ. ಹಾಗೆಯೇ ನಿಯಮಾನುಸಾರ ಹೆಚ್ಚಿನ ವಯಸ್ಸಾದವರು, ಅಪರಾಧ ಚಟುವಟಿಕೆಯಿಂದ ದೂರ ಉಳಿದವರನ್ನು ರೌಡಿಶೀಟರ್ ಪಟ್ಟಿಯಿಂದ ತೆಗೆಯುವ, ಕಾಲಕಾಲಕ್ಕೆ ಪರಿಷ್ಕರಣೆ ಮಾಡುವ ಪ್ರಕ್ರಿಯೆಯೂ ನಡೆಯುತ್ತಿದೆ ಎಂದು ಎಸ್ಪಿ ಕುಶಾಲ್ ಚೌಕ್ಸೆ ತಿಳಿಸಿದರು. ಠಾಣೆಗಳಲ್ಲಿ ನಿರಂತರವಾಗಿ ಪ್ರಕರಣಗಳು ದಾಖಲಾಗುತ್ತಿದ್ದರೂ ರೌಡಿಗಳು ಧೋರಣೆಯನ್ನು ಬದಲಾಯಿಸಿಕೊಳ್ಳದಿರುವುದು ಒಳ್ಳೆಯದಲ್ಲ. ಪರಿವರ್ತನೆಯ ಅವಕಾಶವನ್ನು ಬಳಸಿಕೊಳ್ಳಬೇಕು ಎಂದು ತಿಳಿಸಿದರು.

ಪ್ರಭಾವಿಗಳಿಗೂ ಪಾಠ

ಪರೇಡ್ ಬಗ್ಗೆ ಎಲ್ಲ ರೌಡಿಶೀಟರ್‌ಗಳು ಮಾಹಿತಿ ನೀಡಿ, ಕಡ್ಡಾಯವಾಗಿ ಭಾಗವಹಿಸಲು ಆದೇಶಿಸಲಾಗಿತ್ತು. ಇದರ ನಡುವೆಯೂ ಕೆಲವರು ದೂರ ಉಳಿದಿದ್ದಾರೆ. ಇದರಲ್ಲಿ ಮನೆಯಲ್ಲಿ ಸಮಾರಂಭ, ಆಸ್ಪತ್ರೆ ಚಿಕಿತ್ಸೆ ಸೇರಿ ನಾನಾ ಕಾರಣಗಳ ಹಿನ್ನೆಲೆಯಲ್ಲಿ ಅನುಮತಿ ಪಡೆದವರೂ ಇದ್ದಾರೆ. ಅಪರಾಧ ಚಟುವಟಿಕೆಯಲ್ಲಿ ಯಾವುದೇ ಪ್ರಭಾವ ಕೆಲಸ ಮಾಡುವುದಿಲ್ಲ. ಕಾನೂನು ಪ್ರಕಾರ ಒಂದೇ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಸ್‌ಪಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net