

ಚಿಕ್ಕಬಳ್ಳಾಪುರ : ಜಿಲ್ಲೆಯಲ್ಲಿ ಅನಾರೋಗ್ಯ ಮತ್ತು ಅವಘಡಗಳು ಸೇರಿ ಇತರ ಕಾರಣಗಳಿಂದ ಪ್ರಾಣಹಾನಿ ಸಂಭವಿಸುವುದನ್ನು ತಡೆಯಲು ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ರಾಷ್ಟೀಯ ರೇಬೀಸ್ ನಿಯಂತ್ರಣ ಕಾರ್ಯಕ್ರಮ ಆಯೋಜನೆಯ ಅಂತರ ಇಲಾಖಾ ಸಮನ್ವಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರೇಬೀಸ್ ಮಾರಾಣಾಂತಿಕ ಕಾಯಿಲೆ. ನಾಯಿ ಕಡಿತಕ್ಕೆ ಒಳಗಾದ ಕೂಡಲೇ ಸರ್ಕಾರಿ ಆಸ್ಪತ್ರೆಗೆ ತೆರಳಿ, ಕಡ್ಡಾಯವಾಗಿ ಚುಚ್ಚುಮದ್ದು ಪಡೆಯಬೇಕು ವೈದ್ಯರು ಸೂಚಿಸಿದ ಪ್ರಕಾರವೇ ಚಿಕಿತ್ಸೆ ಪಡೆಯುವುದು ಮುಖ್ಯ. ಒಮ್ಮೆ ರೇಬೀಸ್ ಕಾಯಿಲೆ ಬಂದರೆ ಗುಣಪಡಿಸಲು ಸಾಧ್ಯವಿಲ್ಲ ಎಂದರು.
ಜಿಲ್ಲೆಯಲ್ಲಿ ಪ್ರಸ್ತುತ ವರ್ಷ ಇದುವರೆಗೆ ಮೂವರು ತಾಯಂದಿರು ಮೃತಪಟ್ಟಿರುವ ಪ್ರಕರಣಗಳು ವರದಿಯಾಗಿವೆ. ಯಾವುದೇ ಕಾರಣಕ್ಕೂ ಆರೋಗ್ಯ ಸೇವೆಗಳ ಕೊರತೆ ಹಾಗೂ ನಿರ್ಲಕ್ಷತೆಯಿಂದ ಇಂತಹ ಪ್ರಕರಣಗಳು ಜರುಗಬಾರದು. ಹೈರಿಸ್ಕ್ ಸಂದರ್ಭದಲ್ಲಿ ನಿಗಾ ವಹಿಸಿ ಆರೋಗ್ಯ ಚಿಕಿತ್ಸೆ ನೀಡಬೇಕು ಎಂದು ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಎಸ್ ಮಹೇಶ್ ಕುಮಾರ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಕೃಷ್ಣ ಪ್ರಸಾದ್, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ. ಸಂತೋಷ್ ಬಾಬು, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಉಮಾ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಪ್ರಕಾಶ್, ಜಿಲ್ಲಾ ಕುಷ್ಟರೋಗ ನಿರ್ಮೂಲನಾಧಿಕಾರಿ ಡಾ. ಶಿವಕುಮಾರ್, ಡಾ. ರವಿ ಕುಮಾರ್ ಮತ್ತಿತರರು ಇದ್ದರು.
ನಾಯಿ ಕಡಿತ ಪ್ರಕರಣಗಳು
ಜಿಲ್ಲೆಯಲ್ಲಿ 2022ರಲ್ಲಿ 4844, 2021ರಲ್ಲಿ 4730, 2022ರಲ್ಲಿ 7279, 2023ರಲ್ಲಿ 8605 ಹಾಗೂ 2024 ರಲ್ಲಿ (ಸೆ.16ರವರೆಗೆ) 7226 ಮಂದಿ ನಾಯಿ ಕಡಿತಕ್ಕೆ ಒಳಗಾಗಿದ್ದಾರೆ. ವರ್ಷದಿಂದ ವರ್ಷಕ್ಕೆ ನಾಯಿ ಕಡಿತ ಪ್ರಕರಣಗಳು ಹೆಚ್ಚುತ್ತಿವೆ. ಇದಕ್ಕೆ ಮಾಂಸ ಮಾರಾಟ ಅಂಗಡಿ, ಕೋಳಿ, ಕುರಿ ಾರ್ಮ್‌ಗಳಲ್ಲಿ ತ್ಯಾಜ್ಯ ಮತ್ತು ಸತ್ತ ಪ್ರಾಣಿ, ಕೋಳಿಗಳನ್ನು ಸೂಕ್ತ ವಿಲೇವಾರಿ ಮಾಡುವ ಕುರಿತು, ಪಶುಪಾಲನಾ ಇಲಾಖೆ ಸಹಯೋಗದಲ್ಲಿ ನಾಯಿಗಳ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸಾ ಅಭಿಯಾನವನ್ನು ನಗರ ಮತ್ತು ಗ್ರಾಮ ವ್ಯಾಪ್ತಿಯ ಸ್ಥಳೀಯಾಡಳಿತ ಸಂಸ್ಥೆಗಳು ಕೈಗೊಳ್ಳಲು, ಬೀದಿ ನಾಯಿಗಳ ಹಾವಳಿಯನ್ನು ತಪ್ಪಿಸಲು, ನಾಯಿಗಳ ಹಾವಳಿ ನಿಯಂತ್ರಿಸಿ ರೇಬಿಸ್ ಪ್ರಕರಣಗಳನ್ನು ಶೂನ್ಯಕ್ಕಿಳಿಸುವುದರ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಕಾಯಿಲೆಯ ನಿಯಂತ್ರಣದ ಬಗ್ಗೆ ಅರಿವು ಮೂಡಿಸಲು ಸೆ.28ರಂದು ವಿಶ್ವ ರೇಬೀಸ್ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲು ಜಿಲ್ಲಾಧಿಕಾರಿಗಳು ಸೂಚಿಸಿದರು.
ಹಾವು ಕಡಿತ ಪ್ರಕರಣಗಳು
ಜಿಲ್ಲೆಯಲ್ಲಿ 2022ರಲ್ಲಿ 192, 2023ರಲ್ಲಿ 812 ಹಾಗೂ ಪ್ರಸಕ್ತ ಸಾಲಿನಲ್ಲಿ 587 (ಸೆ.17ರವರೆಗೆ) ಜನರು ಹಾವು ಕಡಿತಕ್ಕೆ ಒಳಗಾಗಿದ್ದಾರೆ. ರೈತರು ಕೃಷಿ ಜಮೀನುಗಳಲ್ಲಿ ಕೆಲಸ ನಿರ್ವಹಿಸುವಾಗ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು.
ಓಡಾಡುವಾಗ ಕಡ್ಡಾಯವಾಗಿ ಶೂಗಳನ್ನು ಧರಿಸಬೇಕು. ಕೋಲು ಬಳಕೆಯ ಮೂಲಕ ಶಬ್ದ ಮಾಡಿಕೊಂಡು ಸಾಗುವುದು ಸೇರಿ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಬೇಕು. ಒಂದು ವೇಳೆ ಹಾವು ಕಡಿತಕ್ಕೆ ಒಳಪಟ್ಟರೆ ತಕ್ಷಣವೇ ಸಮೀಪದ ಸರ್ಕಾರಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಬೇಕು. ಇದರ ಚಿಕಿತ್ಸೆಗೆ ಚುಚ್ಚುಮದ್ದು ಹಾಗೂ ಔಷಧ ಸೇರಿ ಆರೋಗ್ಯ ಸೇವೆ ಸಂಪೂರ್ಣವಾಗಿ ಉಚಿತ. ಈಗಾಗಲೇ ಜಿಲ್ಲೆಯ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧ ಲಭ್ಯವಿದೆ. ನಾಟಿ ಔಷಧ ಬಳಕೆ ಹಾಗೂ ಸ್ವಯಂ ಚಿಕಿತ್ಸೆಯನ್ನು ಬಿಡಬೇಕು. ವೈದ್ಯರ ಸಲಹೆಗಳನ್ನು ಪಾಲಿಸಬೇಕು. ಇದರಿಂದ ಪ್ರಾಣಾಪಾಯದಿಂದ ಪಾರಾಗಬಹುದು ಎಂದು ಅವರು ಡಿಎಚ್‌ಒ ತಿಳಿಸಿದರು.
ಕರಪತ್ರ ಬಿಡುಗಡೆ
ಸಭೆಯಲ್ಲಿ ರಾಷ್ಟೀಯ ರೇಬೀಸ್ ನಿಯಂತ್ರಣ ಕುರಿತು ಅರಿವು ಮೂಡಿಸುವ ಕಾರ್ಯಕ್ರಮದ ಕರಪತ್ರ ಮತ್ತು ಭಿತ್ತಿಪತ್ರಗಳನ್ನು ಬಿಡುಗಡೆಗೊಳಿಸಲಾಯಿತು.