

ನರಗುಂದ: ದಲಿತ ಸಮುದಾಯದವರಿಗೆ ರಾಷ್ಟ್ರೀಕೃತ ಬ್ಯಾಂಕ್ನಲ್ಲಿ ಸಾಲ ಮತ್ತು ಸಹಾಯಧನ ನೀಡಲು ಬ್ಯಾಂಕ್ ವ್ಯವಸ್ಥಾಪಕರು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಇಂತಹ ವರ್ತನೆ ಸರಿಯಲ್ಲ. ನಮ್ಮ ಹಕ್ಕೊತ್ತಾಯವನ್ನು ಪುರಸ್ಕರಿಸಿ ಸಾಲ, ಸಹಾಯಧನ ವಿತರಣೆ ಮಾಡಲು ಅಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕು ಎಂದು ವಿವಿಧ ಸಂಘಟನೆ ಸದಸ್ಯರು ತಹಸೀಲ್ದಾರ್ ಶ್ರೀಶೈಲ ತಳವಾರ ಅವರ ಮುಖಾಂತರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ನರಗುಂದ ತಾಲೂಕಿನ ರಾಷ್ಟ್ರೀಕೃತ ಬ್ಯಾಂಕ್ ಅಧಿಕಾರಿಗಳು ಎಸ್ಸಿ, ಎಸ್ಟಿ ಹಾಗೂ ಹಿಂದುಳಿದ ಅಲ್ಪಸಂಖ್ಯಾತರಿಗೆ ಸಾಲ ಮತ್ತು ಸಹಾಯಧನ ನೀಡುವಲ್ಲಿ ಸರಿಯಾದ ಕ್ರಮ ವಹಿಸುತ್ತಿಲ್ಲ. ಬ್ಯಾಂಕ್ ಅಧಿಕಾರಿಗಳು ಇಲ್ಲಸಲ್ಲದ ಕಾರಣ ಹೇಳುತ್ತಾರೆ. ಸಾಲ ವಿತರಣೆಗಾಗಿ, ಸಹಾಯಧನ ವಿತರಣೆ ಮಾಡಲು ಹಣದ ಬೇಡಿಕೆ ಇಡುವುದು, ಮತ್ತು ಸಿಬಿಲ್ ಕಾರಣ ನೀಡಿ ಬ್ಯಾಂಕ್ಗೆ ಅಲೆದಾಡುವಂತೆ ಮಾಡುವ ದುರ್ವರ್ತನೆ ತೋರುತಿದ್ದಾರೆ. ಸರ್ಕಾರದ ನಿಯಮದಂತೆ ಎಸ್ಸಿ, ಎಸ್ಟಿ ಪಂಗಡಗಳಿಗೆ ಸಾಲ ಮತ್ತು ಸಹಾಯಧನ ನೀಡುವುದನ್ನು ಮುಂದುವರಿಸಬೇಕು ಎಂದು ತಿಳಿಸಿದ್ದಾರೆ.
ನರಗುಂದ ತಾಲೂಕಿನಲ್ಲಿ ಪೈನಾನ್ಸ್ ಮತ್ತು ಮೈಕ್ರೋ ಫೈನಾನ್ಸ್ ಹಾವಳಿ ಹೆಚ್ಚಾಗಿದ್ದು, ತಾಲೂಕಿನ ಅನೇಕ ಗ್ರಾಮಗಳಲ್ಲಿ ನಿತ್ಯ ದೌರ್ಜನ್ಯ, ದಬ್ಬಾಳಿಕೆ ನಡೆಯುತ್ತಿದೆ. ಫೈನಾನ್ಸ್ ಕಂಪನಿಯವರು ಮಹಿಳೆಯರಿಗೆ ಅವಾಚ್ಯ ಶಬ್ದ ಬಳಿಸಿ ನಿಂದಿಸುವ ಕೆಲಸ ಮಾಡುತ್ತಿದ್ದಾರೆ. ಫೈನಾನ್ಸ್ ಕಂಪನಿಯವರನ್ನು ಕರೆಯಿಸಿ ಅವರಿಗೆ ಕಟ್ಟು ನಿಟ್ಟಿನ ಸೂಚನೆ ನೀಡಬೇಕು. ಇಂತಹ ಅಸಮಂಜಸಗಳು ಮುಂದುವರಿದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಸಂಘಟನಾ ಹೋರಾಟಗಾರರು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ದಲಿತ ಸಂಘಟನೆ ಸಂಚಾಲಕ ಮುತ್ತು ಸುರಕೋಡ, ನವ ನಿರ್ಮಾಣ ಕರ್ನಾಟಕ ಸೇನೆ ಜಿಲ್ಲಾ ಅಧ್ಯಕ್ಷ ರವಿ ಚಿಂತಾಲ, ಯಶವಂತ ನಡುವಿನಮನಿ, ಸಿಕಂದರಭಾಷಾ ಮುಲ್ಲಾ, ಕರವೇ ಅಧ್ಯಕ್ಷ ನಬಿಸಾಬ ಕಿಲ್ಲೇದಾರ, ಆರ್.ಎಂ. ಯಲಿಗಾರ ಇದ್ದರು.