

ಸೋಮವಾರಪೇಟೆ: ಕಾರ್ಮಿಕರ ತಾಳ್ಮೆಯನ್ನು ಬಲಹೀನತೆ ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪರಿಗಣಿಸಿದರೆ ಮುಂದೆ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಎಐಟಿಯುಸಿ ಜಿಲ್ಲಾಧ್ಯಕ್ಷ ಎಚ್.ಎಂ.ಸೋಮಪ್ಪ ಎಚ್ಚರಿಸಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರ ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಅರೋಪಿಸಿ, ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಯುನೈಟೆಡ್ ಪ್ಲಾಂಟೇಷನ್ ವರ್ಕರ್ಸ್ ಯೂನಿಯನ್(ಎಐಯುಟಿಸಿ) ವತಿಯಿಂದ ಬುಧವಾರ ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ಹಾಗೂ ಜೇಸಿ ವೇದಿಕೆಯಲ್ಲಿ ಆಯೋಜಿಸಿದ್ದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.
ಕಾರ್ಮಿಕರ ತಾಳ್ಮೆಯನ್ನು ವೀಕ್‌ನೆಸ್ ಎಂದು ಸರ್ಕಾರಗಳು ತಿಳಿದುಕೊಂಡಿವೆ. ಮುಂದೆ ಕಾರ್ಮಿಕರು ಹೋರಾಟಗಳು ಬೇರೆ ದಾರಿಯನ್ನು ಹಿಡಿದರೂ ಆಶ್ಚರ್ಯ ಪಡಬೇಕಾಗಿಲ್ಲ. ಕಾರ್ಮಿಕರು ಈ ದೇಶದ ಪ್ರಜೆಗಳು. ಕಾರ್ಮಿಕರು ತೆರಿಗೆ ಕಟ್ಟುತ್ತಾರೆ. ನಮಗೂ ಭೂಮಿ ಪಡೆದುಕೊಳ್ಳುವ ಹಕ್ಕಿದೆ. ಕೂಡಲೇ ನಿವೇಶನಗಳನ್ನು ನೀಡಬೇಕೆಂದು ಆಗಹಿಸಿದರು.
ಕೊಡಗು ಜಿಲ್ಲೆಯಲ್ಲಿ ಹಲವು ದಶಕಗಳಿಂದ ಕಾರ್ಮಿಕರು ಲೈನ್ ಮನೆಗಳಲ್ಲಿ ವಾಸ ಮಾಡುತ್ತ ಕೂಲಿ ಮಾಡುತ್ತಿದ್ದಾರೆ. ಅನೇಕ ಕುಟುಂಬಗಳು ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ. ನಿವೇಶನ ರಹಿತರಿಗೆ ನಿವೇಶನ ನೀಡಬೇಕು. ಜಿಲ್ಲೆಯಲ್ಲಿ ಪೈಸಾರಿ ಜಾಗವನ್ನು ಉಳ್ಳವರು ಒತ್ತುವರಿ ಮಾಡಿಕೊಂಡಿದ್ದಾರೆ. ಒತ್ತುವರಿ ಜಾಗವನ್ನು ಸರ್ಕಾರ ಲೀಸ್‌ಗೆ ಕೊಡುವ ಪ್ರಯತ್ನ ಮಾಡಿದೆ. ದೇಶದ ಸಂಪತ್ತು ಶ್ರೀಮಂತರಿಗೆ ಮಾತ್ರ ಎಂಬುದು ಸಾಬೀತಾಗಿದೆ. ಕೂಲಿ ಕಾರ್ಮಿಕರನ್ನು ದೇಶದ ಎರಡನೇ ದರ್ಜೆ ಜನಾಂಗವೆಂದೇ ಪರಿಗಣಿಸಿ ಶೋಷಣೆ ಮಾಡಲಾಗುತ್ತಿದೆ ಎಂದು ದೂರಿದರು.
ಕರ್ನಾಟಕ ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಡಿ.ಎಸ್.ನಿರ್ವಾಣಪ್ಪ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರ ಕಾರ್ಮಿಕ, ರೈತ, ಜನವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ಜಿಲ್ಲೆಯ ಕಾರ್ಮಿಕರನ್ನು ಶೋಷಣೆ ಮಾಡಿ ದರ್ಪ ಮೆರೆಯುತ್ತಿರುವ ತೋಟ ಮಾಲೀಕರು ಅಸ್ಸಾಂ, ಬಂಗಾಳ ಕಾರ್ಮಿಕರನ್ನು ಮಿತಿ ಮೀರಿ ದುಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
8 ಗಂಟೆಯ ಕೆಲಸದ ಅವಧಿಯನ್ನು 10 ಗಂಟೆಗೆ ಏರಿಸಲು ಕಾನೂನು ರೂಪಿಸುತ್ತಿದೆ. ಕೆಲಸಕ್ಕೆ ತಕ್ಕ ವೇತನ, ಸುರಕ್ಷತೆ, ಮುಷ್ಕರದ ಹಕ್ಕು, ಸಂಘ ಕಟ್ಟುವ ಹಕ್ಕು, ಇನ್ನಿತರ ಹಕ್ಕುಗಳನ್ನು ಇಲ್ಲವಾಗಿಸಿ ಕಾರ್ಮಿಕರನ್ನು ಗುಲಾಮರನ್ನಾಗಿಸಲು ಕೇಂದ್ರ ಸರ್ಕಾರ ಕಾರ್ಪೊರೇಟ್ ಬಂಡವಾಳದ ಪರ ರೂಪಿಸಿರುವ ಕಾರ್ಮಿಕ ವಿರೋಧಿ 4 ಸಂಹಿತೆಗಳನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿದರು.
ಪಟ್ಟಣದ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ಮೂಲಕ ತೆರಳಿದ ಪ್ರತಿಭಟನಾಕಾರರು ಜೇಸಿ ವೇದಿಕೆಯ ಬಳಿ ಸಮಾವೇಶಗೊಂಡು ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ಪ್ರಮುಖರಾದ ಕೆ.ಎಂ.ಲಕ್ಷ್ಮಣ್, ಎಐಟಿಯುಸಿ ಸಂಘಟನೆಯ ತಾಲೂಕು ಕಾರ್ಯದರ್ಶಿ ಪಿ.ಟಿ.ಸುಂದರ, ಜಿಲ್ಲಾ ಸಲಹೆಗಾರ ಶೇಷಪ್ಪ, ಪರಿಶಿಷ್ಟ ಜಾತಿ ಮತ್ತು ವರ್ಗಗಳ ಸಂಘಟನೆಯ ಅಧ್ಯಕ್ಷ ಎಂ.ಪಿ.ಹೊನ್ನಪ್ಪ ಮತ್ತಿತರರು ಇದ್ದರು.