ಜನಸಾಮಾನ್ಯರನ್ನು ಸುಖಾಸುಮ್ಮನೆ ಅಲೆದಾಡಿಸಬೇಡಿ

cpt
Published on

ಚನ್ನಪಟ್ಟಣ ತಾಲೂಕು ಅಧಿಕಾರಿಗಳಿಗೆ ಲೋಕಾಯುಕ್ತ ಎಸ್ಪಿ ಸ್ನೇಹ ದೂರು

ಚನ್ನಪಟ್ಟಣ: ಗ್ರಾಪಂಗಳು ಸೇರಿ ಯಾವುದೇ ಸರ್ಕಾರಿ ಇಲಾಖೆಗಳಲ್ಲಿ ಲೋಕಾಯುಕ್ತಕ್ಕೆ ಸಂಬಂಧಿಸಿದ ಮಾಹಿತಿ ಫಲಕಗಳು ಇಲ್ಲ. ಅಧಿಕಾರಿಗಳು ಕೂಡಲೇ ಎಲ್ಲ ಕಚೇರಿಗಳಲ್ಲಿ ಲೋಕಾಯುಕ್ತ ಅಧಿಕಾರಿಗಳ ಸಂಪರ್ಕ ಸಂಖ್ಯೆಯನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು ಎಂದು ಲೋಕಾಯುಕ್ತ ಎಸ್ಪಿ ಸ್ನೇಹ ಸೂಚಿಸಿದರು.
ನಗರದ ಶತಮಾನೋತ್ಸವ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಾರ್ವಜನಿಕ ಕುಂದುಕೊರತೆಗಳ ಸಭೆಯಲ್ಲಿ ಮಾತನಾಡಿದ ಅವರು, ಲೋಕಾಯುಕ್ತಕ್ಕೆ ಸಂಬಂಧಿಸಿದ ಮಾಹಿತಿ ಹಾಗೂ ಅಧಿಕಾರಿಗಳ ದೂರವಾಣಿ ಸಂಖ್ಯೆಯನ್ನು ಸರ್ಕಾರ ಪ್ರತಿ ಕಚೇರಿಯಲ್ಲೂ ಲಭ್ಯವಿರಬೇಕು ಎಂದರು.
ನಿಮ್ಮ ಜೊತೆ ಯಾರು ಇರುವುದಿಲ್ಲ!
ಸರ್ಕಾರಿ ಅಧಿಕಾರಿಗಳು ಮತ್ತು ನೌಕರರಿಗೆ ತಿಂಗಳುತಿಂಗಳು ಸಂಬಳ ಬರುತ್ತದೆ. ಆದರೆ, ರೈತನಿಗೆ ಯಾವ ಸಂಬಳವೂ ಸಿಗಲ್ಲ. ಹಾಗಾಗಿ ರೈತರು ಹಾಗೂ ಸಾರ್ವಜನಿಕರನ್ನು ಅಧಿಕಾರಿಗಳು ಕೆಲಸಕಾರ್ಯಗಳಿಗೆ ವ್ಯರ್ಥವಾಗಿ ಅಲೆದಾಡಿಸಬಾರದು. ಭ್ರಷ್ಟಾಚಾರದಿಂದ ಸಮಸ್ಯೆಯಾದರೆ ನಿಮ್ಮ ಜತೆ ಯಾರೂ ಬರುವುದಿಲ್ಲ. ನ್ಯಾಯಾಲಯದಲ್ಲಿ ನೀವು ಒಬ್ಬರೇ ನಿಂತುಕೊಳ್ಳಬೇಕು ಎಂಬುದನ್ನು ಸದಾ ಗಮನದಲ್ಲಿಟ್ಟುಕೊಳ್ಳಬೇಕು ಎಂದರು.
ಡಿವೈಎಸ್ಪಿ ಗೌತಮ್ ಮಾತನಾಡಿ, ಭ್ರಷ್ಟಾಚಾರ ನಿಗ್ರಹ ಹಾಗೂ ಆಡಳಿತ ಸುಧಾರಣೆಗೆ ಎಲ್ಲರೂ ಕೈಜೋಡಿಸಬೇಕು. ಕೆಲಸದಲ್ಲಿ ವಿಳಂಬ, ಉದ್ದೇಶಪೂರ್ವಕವಾಗಿ ಸತಾಯಿಸುವುದು ಸಹ ಭ್ರಷ್ಟಾಚಾರದ ಒಂದು ಭಾಗ. ಸಾರ್ವಜನಿಕರು ಯಾವುದೇ ಸಮಸ್ಯೆಗಳಿದ್ದರೂ ಇಲಾಖೆಯನ್ನು ಮುಕ್ತವಾಗಿ ಸಂಪರ್ಕಿಸಬಹುದು. ಲೋಕಾಯುಕ್ತ ಕಾಯ್ದೆಯಡಿ ನೀಡುವ ದೂರನ್ನು ಪರಿಶೀಲಿಸಿ, ವಿಗಂಡನೆ ಮಾಡಿ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಕ್ರಮವಹಿಸಲಾಗುವುದು. ದೂರು ನೀಡಿದ ಸಾರ್ವಜನಿಕರ ಹೆಸರಿನ ಗೌಪ್ಯತೆ ಕಾಪಾಡಲಾಗುವುದು ಎಂದರು.
ಲೋಕಾಯುಕ್ತ ಡಿವೈಎಸ್ಪಿ ಸುಧೀರ್, ಇನ್‌ಸ್ಪೆಕ್ಟರ್‌ಗಳಾದ ಸಂದೀಪ್, ಅನಂತರಾಮ್, ಹನುಮಂತಕುಮಾರ್ ಇದ್ದರು.

ಕಂದಾಯ ಸಮಸ್ಯೆಗಳೇ ಹೆಚ್ಚು!
ಲೋಕಾಯುಕ್ತ ಅಧಿಕಾರಿಗಳ ಕುಂದುಕೊರತೆಗಳ ಸಭೆಯಲ್ಲಿ ಅರ್ಜಿದಾರರ ಕೊರತೆ ಎದ್ದುಕಂಡಿತ್ತು. ಸಭೆಯಲ್ಲಿ ಕೇವಲ 22 ಅರ್ಜಿಗಳು ಮಾತ್ರ ಸಲ್ಲಿಕೆಯಾದವು. ಅವುಗಳಲ್ಲೂ ಬಹುಪಾಲು ಕಂದಾಯ ಇಲಾಖೆಗೆ ಸಂಬಂಧಿಸಿದವು ಎಂಬುದು ವಿಶೇಷ. ನಗರದ ತಟ್ಟೆಕೆರೆಯಲ್ಲಿ ಮಿಲ್ವೊಂದಕ್ಕೆ ಕಾನೂನುಬಾಹಿರವಾಗಿ ಅನುಮತಿ ನೀಡಲಾಗಿದೆ. ಇದರಿಂದ ಸಾಕಷ್ಟು ಪರಿಸರ ಹಾಗೂ ಶಬ್ದ ಮಾಲಿನ್ಯವಾಗುತ್ತಿದೆ ಎಂದು ಅಲ್ಲಿನ ನಿವಾಸಿ ಶಶಾಂಕ್ ದೂರು ಸಲ್ಲಿಸಿದರೆ, ಎಲೆದೋಟದಹಳ್ಳಿ ಗ್ರಾಪಂನ ಕರಲಹಳ್ಳಿ ರಾಜಬೀದಿ ಹಾಗೂ ದೇವಸ್ಥಾನದ ರಸ್ತೆಯನ್ನು ಅಕ್ರಮವಾಗಿ ಖಾಸಗಿಯವರಿಗೆ ಇ-ಖಾತೆ ಮಾಡಿರುವ ಬಗ್ಗೆ ನಾಗೇಂದ್ರ ಎಂಬುವವರು ದೂರು ಸಲ್ಲಿಸಿದರು. ಕನಕನಗರ 31ನೇ ವಾರ್ಡ್ ನಿವಾಸಿ ಅಪ್ಪಾಜಿಗೌಡ ಎಂಬುವವರು ರಸ್ತೆಯಲ್ಲಿ ಟಿಪ್ಪರ್, ಲಾರಿ ಹಾಗೂ ಜೆಸಿಬಿ ವಾಹನಗಳನ್ನು ಪಾರ್ಕಿಂಗ್ ಮಾಡುತ್ತಿರುವುದು ಸಂಚಾರಕ್ಕೆ ಅಡೆತಡೆ ಉಂಟುಮಾಡುತ್ತಿದೆ ಎಂದು ದೂರಿದರೆ, ಇ-ಖಾತೆ ಮಾಡಿಕೊಡಲು ನಗರಸಭೆಗೆ ಮನವಿ ಕೊಟ್ಟರೂ 2019ರಿಂದ ಇಲ್ಲಿಯವರೆಗೂ ಅಲೆದಾಡಿಸುತ್ತಿದ್ದಾರೆ ಎಂದು ರಾಜಾಕೆಂಪೇಗೌಡ ಬಡಾವಣೆ ನಿವಾಸಿ ಕರಿಯಪ್ಪ ಆರೋಪಿಸಿದರು. ಇದರೊಂದಿಗೆ, ಇನ್ನು ಹಲವರು ಸಹ ಖಾತೆಗೆ ಸಂಬಂಧಿಸಿದಂತೆ ದೂರುಗಳನ್ನು ಲೋಕಾಯುಕ್ತ ಅಧಿಕಾರಿಗಳಿಗೆ ಸಲ್ಲಿಸಿದರು.

 ₹ 5 ಲಕ್ಷ ಕೊಟ್ಟಿದ್ದೇನೆ!
ನಮ್ಮ ಪಿತ್ರಾರ್ಜಿತ ಆಸ್ತಿಗೆ ಸಂಬಂಧಿಸಿದಂತೆ ಜಮೀನಿನ ದಾಖಲೆಗಾಗಿ ಗ್ರೇಡ್-2 ತಹಸೀಲ್ದಾರ್ ಲಕ್ಷ್ಮಿದೇವಮ್ಮ ಹಾಗೂ ವಿಷಯ ನಿರ್ವಾಹಕರಿಗೆ 5 ಲಕ್ಷ ರೂ. ಕೊಟ್ಟಿದ್ದೇನೆ. ಆದರೂ ಸಹ ಇದುವರೆಗೂ ನನ್ನ ಕೆಲಸ ಆಗಿಲ್ಲ ಎಂದು ಮಂಗಳವಾರಪೇಟೆ ನಿವಾಸಿ ಶ್ರೀನಿವಾಸ್ ಎಂಬುವವರು ಲೋಕಾಯುಕ್ತ ಅಧಿಕಾರಿಗಳ ಎದುರು ಗಂಭೀರ ಆರೋಪ ಮಾಡಿದರು. ಈ ಬಗ್ಗೆ ತಹಸೀಲ್ದಾರ್ ಸೇರಿದಂತೆ ಎಲ್ಲರಿಗೂ ದೂರು ನೀಡಿದರೂ ಯಾವುದೆ ಪ್ರಯೋಜನವಾಗಿಲ್ಲ. ದುರ್ಬಲ ವರ್ಗದ ನನಗೆ ನ್ಯಾಯ ದೊರಕಿಸಿಕೊಡಿ ಎಂದು ಅವಲತ್ತುಕೊಂಡರು. ಇದರೊಂದಿಗೆ, ರೈತ ಮುಖಂಡ ಸುಜೀವನ್ ಕುಮಾರ್ ಎಂಬುವವರು, ಅರಳಾಳುಸಂದ್ರ ಬಳಿ ಸರ್ಕಾರಿ ಗೋಮಾಳದಲ್ಲಿ ಸರ್ಕಾರಿ ನೌಕರರು, ಜಮೀನು ಇರುವವರು, ಅಧಿಕಾರಿಗಳು ಜಮೀನು ಪಡೆದಿದ್ದಾರೆ. ಅಕ್ರಮ ಪಲಾನುಭವಿಗಳ ವಿರುದ್ಧ ಕ್ರಮಜರುಗಿಸಬೇಕು ಎಂದು ಒತ್ತಾಯಿಸಿದರು. ನಿವೃತ್ತ ಶಿಕ್ಷಕರೊಬ್ಬರು ನಮ್ಮ ಮನೆ ಕಳ್ಳತನವಾಗಿ ನಾಲ್ಕು ವರ್ಷಗಳಾಯ್ತು, ಇದುವರೆಗೂ ಅಪರಾಧಿ ಮತ್ತು ಮಾಲು ಪತ್ತೆಯಾಗಿಲ್ಲ ಎಂದು ದೂರಿದರು. ಇದರೊಂದಿಗೆ, ಹಲವಾರು ದೂರುಗಳು ಲೋಕಾಯುಕ್ತ ಅಧಿಕಾರಿಗಳ ಗಮನಸೆಳೆದವು. ಎಲ್ಲ ದೂರುಗಳನ್ನೂ ಅಧಿಕಾರಿಗಳು ಕೂಲಂಕುಷವಾಗಿ ಪರಿಶೀಲಿಸಿದ್ದು ವಿಶೇಷವಾಗಿತ್ತು.


21 ಅರ್ಜಿಗಳ ಸ್ವೀಕಾರ
ಗುರುವಾರ ಆಯೋಜಿಸಿದ್ದ ಕುಂದುಕೊರತೆ ಸಭೆಯಲ್ಲಿ 21 ಅರ್ಜಿಗಳು ಸ್ವೀಕೃತವಾಗಿವೆ. ಪಹಣಿ, ಇ ಖಾತೆ, ಕಾಮಗಾರಿ ಕಳಪೆ ಸೇರಿ ಹಲವು ದೂರುಗಳು ಬಂದಿವೆ. ಇವುಗಳನ್ನು ಪರಿಶೀಲಿಸಿ ಅಗತ್ಯಕ್ರಮ ಕೈಗೊಳ್ಳಲಾಗುವುದು. ಭ್ರಷ್ಟಾಚಾರ ನಿರ್ಮೂಲನೆ ಒಂದೇ ಇಲಾಖೆಯ ಕೆಲಸವಲ್ಲ, ಸಾರ್ವಜನಿಕ ಸೇವೆಯಲ್ಲಿನ ಅಶಿಸ್ತು ಹಾಗೂ ನಿರ್ಲಕ್ಷ್ಯದ ವಿರುದ್ದವೂ ಇಲಾಖೆ ಕ್ರಮವಹಿಸುತ್ತದೆ ಎಂದು ಸ್ನೇಹ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net