ಸಹಕಾರ ಸಂಸ್ಥೆಗಳಲ್ಲಿ ರಾಜಕೀಯ ನುಸುಳದಿರಲಿ

ಸಹಕಾರ ಸಂಸ್ಥೆಗಳಲ್ಲಿ ರಾಜಕೀಯ ನುಸುಳದಿರಲಿ
Published on

ಶನಿವಾರಸಂತೆ: ಸಹಕಾರ ಸಂಸ್ಥೆಗಳಲ್ಲಿ ರಾಜಕೀಯ ರಹಿತ ಮತ್ತು ಕಾನೂನಾತ್ಮಕವಾಗಿ ಕಾರ್ಯನಿರ್ವಹಿಸಿದರೆ ಸಹಕಾರ ಸಂಸ್ಥೆಗಳು ಪ್ರಗತಿ ಹೊಂದಲು ಸಾಧ್ಯವಾಗುತ್ತದೆ ಎಂದು ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷ ಕೊಡಂದೇರ ಪಿ.ಗಣಪತಿ ಅಭಿಪ್ರಾಯಪಟ್ಟರು.

ಶನಿವಾರಸಂತೆ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ವತಿಯಿಂದ ಸಂಘದ 75ನೇ ವರ್ಷದ ಅಮೃತ ಮಹೋತ್ಸವದ ನೆನಪಿಗಾಗಿ ಪಟ್ಟಣದ ಬೈಪಾಸ್ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಿರುವ ವಾಣಿಜ್ಯ ಸಂಕೀರ್ಣ ಲೋಕಾರ್ಪಣೆ ಮತ್ತು ವಿಘ್ನೇಶ್ವರ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಸಮಾರಂಭವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.

ರಾಜಕೀಯ ರಹಿತವಾಗಿ ಮತ್ತು ರೈತ ಸಹಕಾರಿಗಳ ಹಿತದೃಷ್ಟಿ ಇಟ್ಟುಕೊಂಡು ಆಡಳಿತ ನಡೆಸಿದರೆ ಮಾತ್ರ ಸಹಕಾರ ಸಂಸ್ಥೆಗಳು ಅಭಿವೃದ್ಧಿಯಾಗುತ್ತದೆ. ಹಿರಿಯ ಸಹಕಾರಿಗಳು ಹಾಕಿಕೊಟ್ಟ ಮಾರ್ಗದರ್ಶನ ಮತ್ತು ಕಾನೂನಾತ್ಮಕವಾಗಿ ಸಹಕಾರ ಸಂಸ್ಥೆಯನ್ನು ಮುನ್ನಡೆಸಿದರೆ ಸಹಕಾರ ಕ್ಷೇತ್ರ ಶಾಶ್ವತವಾಗಿ ಉಳಿದುಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ಮಾಜಿ ಶಾಸಕ ಎಂ.ಪಿ.ಅಪಚ್ಚುರಂಜನ್ ಮಾತನಾಡಿ, ಸಹಕಾರ ಚಳವಳಿ ಮೂಲಕ ಪ್ರಾರಂಭಗೊಂಡ ಸಹಕಾರ ಸಂಸ್ಥೆಗಳು ಇಂದು ರಾಷ್ಟ್ರೀಕೃತ ಬ್ಯಾಂಕ್‌ಗಳಂತೆ ವ್ಯವಹಾರ ನಡೆಸುತ್ತಿದ್ದು, ಈ ಮೂಲಕ ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಕೃಷಿ ಸಾಲ ನೀಡುತ್ತಿರುವ ಜತೆಯಲ್ಲಿ ಹೆಚ್ಚಿನ ನಿರ್ಬಂಧ ಇಲ್ಲದೆ ರೈತರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ನೀಡುತ್ತಿದೆ ಎಂದರು. ಶನಿವಾರಸಂತೆ ಎಪಿಸಿಎಂಎಸ್ ಸಂಸ್ಥೆಯ ಅಮೃತ ಮಹೋತ್ಸವ ನೆನಪಿಗಾಗಿ ಉಪಯುಕ್ತ ವಾಣಿಜ್ಯ ಸಂಕೀರಣ ನಿರ್ಮಾಣ ಮಾಡಿರುವುದು ಶ್ಲಾಘನಿಯವಾಗಿದೆ ಎಂದರು.

ಜಿಲ್ಲಾ ಸಹಕಾರ ಬ್ಯಾಂಕ್ ನಿರ್ದೇಶಕ ಶರವಣಕುಮಾರ್ ಮಾತನಾಡಿ, ಇಂದು ಸಹಕಾರ ಸಂಸ್ಥೆಗಳು ತಂತ್ರಜ್ಞಾನ ಅಳವಡಿಸಿಕೊಂಡು ತನ್ನದೆ ಛಾಪು ಮೂಡಿಸುವ ಮೂಲಕ ಅಭಿವೃದ್ಧಿ ಪಥದತ್ತ ಸಾಗುತ್ತಿವೆ ಎಂದರು.

ಡಿಸಿಸಿ ಬ್ಯಾಂಕ್ ನಿರ್ದೇಶಕಿ ಜಲಜಾ ಶೇಖರ್ ಮಾತನಾಡಿ, ಮಹಿಳೆಯರು ಸಹಕಾರ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಮುಂದೆ ಬರುವಂತೆ ಮನವಿ ಮಾಡಿದರು.

ಜಿಲ್ಲಾ ಸಹಕಾರ ಬ್ಯಾಂಕ್ ನಿರ್ದೇಶಕ ಉಮೇಶ್ ಉತ್ತಪ್ಪ, ಹಿರಿಯ ನಿರ್ದೇಶಕ ಡಿ.ಬಿ.ಧರ್ಮಪ್ಪ ಮಾತನಾಡಿದರು. ಸಂಘದ ಅಧ್ಯಕ್ಷ ಜಿ.ಜಿ.ಪರಮೇಶ್ ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕ ಎಸ್.ಸಿ.ಶರತ್ ಶೇಖರ್, ಸಹಾಯಕ ನಿಬಂಧಕ ಶೈಲಜಾ, ಎಪಿಸಿಎಂಎಸ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್.ಪಿ.ಶಿವರಾಜ್, ಸಿಇಒ ಶಿವರಾಜ್, ಪರಮೇಶ್, ರವಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net