

ರಾಮನಗರ : ವಿದ್ಯಾಭ್ಯಾಸದಿಂದ ಮಾತ್ರ ಸಾಮಾಜಿಕ ಮತ್ತು ಆರ್ಥಿಕವಾಗಿ ಬೆಳೆಯಲು ಸಾಧ್ಯ ಎಂದು ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ತಿಳಿಸಿದರು.
ರಾಮನಗರದ ಶಾಸಕರ ಕಚೇರಿ ಆವರಣದಲ್ಲಿ ಬುಧವಾರ ಇಂಜಿನಿಯರಿಂಗ್, ಬಿಎ, ಬಿಎಸ್ಸಿ, ಎಂಬಿಬಿಎಸ್, ಪದವಿ ಪೂರ್ವ, ಪೌಢಶಾಲಾ, ಪ್ರಾಥಮಿಕ ಶಾಲೆಗಳ ಸುಮಾರು 380 ಮಕ್ಕಳಿಗೆ ಶಾಸಕರ ವೇತನ ಮತ್ತು ಸ್ವಂತವಾಗಿ ಡಿಡಿ ಮೂಲಕ ಆರ್ಥಿಕ ನೆರವು ನೀಡಿ ಮಾತನಾಡಿದರು.
ಜೀವನದ ಏಳಿಗೆಗೆ ಶಿಕ್ಷಣ ಅತ್ಯಗತ್ಯ. ವಿದ್ಯಾಭ್ಯಾಸದಿಂದ ಮಾತ್ರ ಉನ್ನತಿ ಸಾಧಿಸಬಹುದು. ಆರ್ಥಿಕ ಸಮಸ್ಯೆಯ ಕಾರಣ ಬಡ ವರ್ಗದ ಸಾಕಷ್ಟು ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಲು ವಿಫಲರಾಗುತ್ತಿದ್ದಾರೆ. ಆರ್ಥಿಕ ಕೊರತೆ ಯಾವುದೇ ಮಗುವಿನ ವಿದ್ಯಾಭ್ಯಾಸಕ್ಕೆ ಅಡ್ಡಿಯಾಗಬಾರದು ಎಂದರು.
ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಲು ಒಳ್ಳೆಯ ಶಾಲೆಗಳಿಗೆ ಸೇರಿಸಿ, ಹಣ ಕಟ್ಟಲಾಗದೆ ಸಾಕಷ್ಟು ಪಾಲಕರು ಪರದಾಡುತ್ತಿದ್ದಾರೆ. ಇಂತಹ ನೂರಾರು ಮಂದಿ ನಮ್ಮ ಬಳಿ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ಕೋರಿದ್ದರು. ಎಲ್ಲ ಮಕ್ಕಳು ವಿದ್ಯಾಭ್ಯಾಸ ಪಡೆದು ದೇಶಕ್ಕೆ ಉತ್ತಮ ಆಸ್ತಿಯಾಗಲಿ ಎನ್ನುವ ಉದ್ದೇಶದಿಂದ ವೈಯಕ್ತಿಕ ಖರ್ಚಿನಿಂದ ಶೈಕ್ಷಣಿಕ ನೆರವು ನೀಡುತ್ತಿದ್ದೇನೆ ಎಂದರು.
ಕಳೆದ ಬಾರಿಯೂ ಸುಮಾರು 25 ಲಕ್ಷ ರೂ. ಮೊತ್ತದಲ್ಲಿ 250 ಮಕ್ಕಳಿಗೆ ಶೈಕ್ಷಣಿಕ ಸಹಾಯಧನ, ಲ್ಯಾಪ್‌ಟಾಪ್ ಮತ್ತಿತರರ ಪರಿಕರ ವಿತರಿಸಿದ್ದೆ. ಈ ಬಾರಿಯೂ ಪಾಲಕರು ಶೈಕ್ಷಣಿಕ ನೆರವು ಕೋರಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಯಕ್ರಮ ಆಯೋಜಿಸಿದ್ದೇವೆ. ವಿಶೇಷವಾಗಿ ಅಲ್ಪಸಂಖ್ಯಾತ ಸಮುದಾಯದ ಮಕ್ಕಳು ಶೈಕ್ಷಣಿಕವಾಗಿ ತುಸು ಹಿಂದುಳಿದಿದ್ದಾರೆ. ಇದಕ್ಕೆ ಅನೇಕ ಕಾರಣಗಳಿವೆ. ಆರ್ಥಿಕ ಪರಿಸ್ಥಿತಿ ಸರಿಯಿಲ್ಲದ ಕಾರಣ ಮಕ್ಕಳನ್ನು ಬೇಗನೆ ಕೆಲಸಗಳಿಗೆ ಕಳಿಸುವ ಪ್ರವೃತ್ತಿ ಇದೆ. ಇದನ್ನು ತಪ್ಪಿಸಬೇಕು. ಎಲ್ಲರೂ ಸಮಾನವಾಗಿ ಉನ್ನತ ಶಿಕ್ಷಣ ಪಡೆಯವಂತಾಗಬೇಕು ಎಂದು ನೆರವು ನೀಡಲಾಗುತ್ತಿದೆ ಎಂದರು.
ಮಾಜಿ ಶಾಸಕ ಕೆ. ರಾಜು, ನಗರಸಭಾ ಅಧ್ಯಕ್ಷ ಕೆ. ಶೇಷಾದ್ರಿ, ನಗರಸಭಾ ಉಪಾಧ್ಯಕ್ಷೆ ಐಹಿಷಾಬಾನು, ಸದಸ್ಯರಾದ ಪಾರ್ವತಮ್ಮ, ಅಜ್ಮತ್, ವಿಜಯಕುಮಾರಿ, ಗಿರಿಜಮ್ಮ, ಸಮದ್ ಮತ್ತಿತರರು ಇದ್ದರು.