ಅಭಿವೃದ್ಧಿ ಕಾರ್ಯಗಳಿಗೆ ಕಲ್ಲು ಹಾಕಬೇಡಿ

Published on

 ಅಲಿಪುರ ಪಪಂ ೋಷಣೆ ಸಂಭ್ರಮಾಚರಣೆಯಲ್ಲಿ ಶಾಸಕ ಪುಟ್ಟಸ್ವಾಮಿ ಗೌಡ ಹೇಳಿಕೆ

ವಿಜಯವಾಣಿ ಸುದ್ದಿಜಾಲ ಗೌರಿಬಿದನೂರು

ತಾಲೂಕಿನಲ್ಲಿ ಕೆಲವರು ಅಭಿವೃದ್ಧಿ ಕೆಲಸಗಳಿಗೆ ಕಲ್ಲು ಹಾಕುತ್ತಿದ್ದಾರೆ. ಅಲಿಪುರ ಪಟ್ಟಣ ಪಂಚಾಯಿತಿಯನ್ನಾಗಿ ಮಾಡಲೂ ಕಲ್ಲು ಹಾಕಿದ್ದರು ಎಂದು ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಬೇಸರ ವ್ಯಕ್ತಪಡಿಸಿದರು.

ಅಲಿಪುರವನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮಾಡಬೇಕು ಎಂಬ ದಶಕಗಳ ಹೋರಾಟಕ್ಕೆ ಜಯ ಸಿಕ್ಕ ಹಿನ್ನಲೆಯಲ್ಲಿ ಭಾನುವಾರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಲಿಪುರ ಪಂಚಾಯಿತಿಯನ್ನು ಎಂದೋ ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೇರಿಸಬಹುದಿತ್ತು. ಈ ನಿಟ್ಟಿನಲ್ಲಿ ಬದ್ಧತೆ ಹಾಗೂ ಪ್ರಾಮಾಣಿಕತೆಯನ್ನು ತೋರಲಿಲ್ಲ. ಬದಲಿಗೆ ಇಲ್ಲಿನ ಜನರ ವೋಟ್ ಮೇಲೆ ಮಾತ್ರ ಆಸಕ್ತಿ ಹೊಂದಿದ್ದರು. ಆದರೆ ನಾನು ವೋಟ್ ಅನ್ನು ಲೆಕ್ಕ ಹಾಕಲಿಲ್ಲ. ಇಲ್ಲಿನ ಜನ ತೋರುತ್ತಿರುವ ಪ್ರೀತಿ ಅಭಿಮಾನವನ್ನು ಋಣ ತೀರಿಸುವ ಸಲುವಾಗಿ ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೇರಿಸಲು ಸರ್ಕಾರದಮಟ್ಟದಲ್ಲಿ ನಿರಂತರ ಪ್ರಯತ್ನ ನಡೆಸಿದೆ. ಅನೇಕರು ಕಲ್ಲು ಹಾಕಿದರೂ ನಾನು ಪಟ್ಟು ಬಿಡದೆ ನಡೆಸಿದ ನಿರಂತರ ಪ್ರಯತ್ನಗಳ ಫಲವಾಗಿ ಪಟ್ಟಣ ಪಂಚಾಯಿತಿಯಾಗಿ ಘೋಷಣೆಯಾಗಿದೆ ಎಂದರು.

ತಾ.ಪಂ.ಮಾಜಿ ಸದಸ್ಯ ಜಾಮೀನ್ ರಜಾ ಮಾತನಾಡಿ, ಚುನಾವಣೆ ಪೂರ್ವದಲ್ಲಿ ಶಾಸಕರು ನೀಡಿದ್ದ ಭರವಸೆಯಂತೆ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೇರಿಸಿದ್ದು, ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಘೋಷಣೆಯಾಗಿದೆ. ಆಮೂಲಕ ಗ್ರಾಮಸ್ಥರ ದಶಕಗಳ ಕನಸು ನನಸಾಗಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಅನುದಾನ ಹರಿದು ಬಂದು ಪಟ್ಟಣದ ಅಭಿವೃದ್ಧಿಯ ವೇಗ ಹೆಚ್ಚಲಿದೆ ಎಂದರು.

ಕೋಚಿಮಲ್ ಮಾಜಿ ಅಧ್ಯಕ್ಷ ಜೆ.ಕಾಂತರಾಜು ಮಾತನಾಡಿ, ಹಿಂದಿನ ರಾಜಕಾರಣಿಗಳು ಅಲಿಪುರ ಜನರನ್ನು ಕೇವಲ ಮತ ಬ್ಯಾಂಕ್ ಆಗಿ ಬಳಸಿಕೊಳ್ಳುತ್ತಿದ್ದರು. ಚುನಾವಣೆ ಪೂರ್ವದಲ್ಲಿ ನೀಡಿದ್ದ ಆಶ್ವಾಸನೆಯಂತೆ ವಿಧಾನಸಭೆ ಅಧಿವೇಶನದಲ್ಲಿ ಅಲಿಪುರ ವಿಷಯವನ್ನು ಪ್ರಸ್ತಾಪ ಮಾಡಿ ಹಿಡಿದ ಕೆಲಸವನ್ನು ಸಾಧಿಸುವಲ್ಲಿ ಶಾಸಕ ಪುಟ್ಟಸ್ವಾಮಿಗೌಡ ಅವರು ಯಶಸ್ವಿಯಾಗಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ಗ್ರಾಮಸ್ಥರು ಗ್ರಾಮದ ಕುಡಿಯುವ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸುವ ಸಲುವಾಗಿ ಸಮೀಪದ ಕೆರೆಯಿಂದ ಗ್ರಾಮಕ್ಕೆ ನೀರು ಪೂರೈಸುವ ಯೋಜನೆ ಜಾರಿಗೆ ತರಬೇಕು ಎಂದು ಶಾಸಕರಲ್ಲಿ ಮನವಿ ಮಾಡಿದರು.

ಮುಗಿಲು ಮುಟ್ಟಿದ ಸಂಭ್ರಮ

ಗ್ರಾಮ ಪಂಚಾಯಿತಿಯನ್ನು ರಾಜ್ಯ ಸರ್ಕಾರ ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೇರಿಸಿದ ಹಿನ್ನಲೆಯಲ್ಲಿ ಗ್ರಾಮಸ್ಥರು ಸಡಗರ ಸಂಭ್ರಮದಲ್ಲಿ ತೇಲಾಡಿದರು. ಅಲಿಪುರ ಕ್ರಾಸ್‌ನಿಂದ ಸಹಸ್ರಾರು ಜನ ಸ್ವಯಂ ಪ್ರೇರಣೆಯಿಂದ ಪಕ್ಷಾತೀತವಾಗಿ ಮೆರವಣಿಗೆ ನಡೆಸಿದರು. ತೆರೆದ ವಾಹನದಲ್ಲಿ ಕ್ರೇನ್ ಮೂಲಕ ಶಾಸಕ ಕೆ.ಎಚ್.ಪುಟ್ಟಸ್ವಾಮಿ ಗೌಡರಿಗೆ ಬೃಹತ್ ಹಾರ ಹಾಕಿ ಸ್ವಾಗತಿಸಿದರು. ಬ್ಯಾಂಡ್ ಸೆಟ್, ವಾದ್ಯಗಳು ಮೆರವಣಿಗೆಗೆ ಸಾಥ್ ನೀಡಿದರೆ ಮುಗಿಲೆತ್ತರಕ್ಕೆ ಪಟಾಕಿ ಬಾಣ ಬಿರುಸುಗಳನ್ನು ಸಿಡಿಸಿ ಸಂಭ್ರಮಿಸಿದರು.

ಗೆಜೆಟ್  ೋಷಣೆ ಬಳಿಕ ಅನುದಾನ

ಅಲಿಪುರ ಜನ 40 ರಾಷ್ಟ್ರಗಳಲ್ಲಿ ವ್ಯಾಪಾರ ವಹಿವಾಟು ನಡೆಸಿ, ಅಲ್ಲಿನ ಆದಾಯವನ್ನು ತಂದು ಗ್ರಾಮದಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಅಂತಾರಾಷ್ಟ್ರೀಯ ಶಾಲೆ, ಕಾಲೇಜು, ಆಸ್ಪತ್ರೆಗಳು ಇಲ್ಲಿವೆ. ಇದೇ ಕಾರಣಕ್ಕೆ ಇಂದು ವಿಶ್ವದ ಭೂಪಟದಲ್ಲಿ ಅಲಿಪುರ ಮಿನಿ ದುಬೈ ಎಂದೇ ವಿಶೇಷ ಸ್ಥಾನ ಪಡೆದುಕೊಂಡಿದೆ ಎಂದ ಅವರು, ರಾಜ್ಯ ಗೆಜೆಟ್‌ನಲ್ಲಿ ಪಟ್ಟಣ ಪಂಚಾಯಿತಿಯಾಗಿ ಘೋಷಣೆಯಾದ ಬಳಿಕ ಅಭಿವೃದ್ಧಿಗೆ ಅನುದಾನ ಬರಲಿದೆ. ಗ್ರಾಮದ ರಸ್ತೆಗಳ ಅಭಿವೃದ್ಧಿ ಸೇರಿ ಮೂಲ ಸೌಲಭ್ಯಗಳನ್ನು ಕಲ್ಪಿಸಲು ಆದ್ಯತೆ ನೀಡಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net