ಹುಷಾರ್! ಮಕ್ಕಳಿಗೆ ಬೈಕ್ ಕೊಡಬೇಡಿ

19-RNR-01
Published on

ರಾಣೆಬೆನ್ನೂರ: ಲಾಕ್​ಡೌನ್ ಹಿನ್ನೆಲೆಯಲ್ಲಿ ವಿನಾಕಾರಣ ಬೈಕ್ ಮೇಲೆ ಹೊರಗಡೆ ತೆರಳಿದರೆ ಪೊಲೀಸರು ಅಂಥವರ ಬೈಕ್ ಸೀಜ್ ಮಾಡುತ್ತಾರೆ.

ಆದರೆ, ಪೊಲೀಸರ ಕೈಯಿಂದ ತಪ್ಪಿಸಿಕೊಳ್ಳಲು ಪ್ಲ್ಯಾನ್ ಮಾಡಿದ ಪಾಲಕರು ಮಕ್ಕಳ ಕೈಗೆ ಬೈಕ್, ಸ್ಕೂಟಿ ಕೊಟ್ಟು ಮಧ್ಯಾಹ್ನ ಹಾಗೂ ಸಂಜೆ ಸಮಯಕ್ಕೆ ಹೊರಗಡೆ ಕಳುಹಿಸುತ್ತಿದ್ದು, ಪೊಲೀಸರಿಗೆ ಇವರ ವಿರುದ್ಧ ಕ್ರಮ ಕೈಗೊಳ್ಳುವುದು ಸಮಸ್ಯೆಯಾಗಿ ಪರಿಣಮಿಸಿದೆ.

ನಗರದ ಬಸ್ ನಿಲ್ದಾಣ, ಪೋಸ್ಟ್ ವೃತ್ತ, ಕೋರ್ಟ್ ವೃತ್ತ, ಕುರುಬಗೇರಿ ಕ್ರಾಸ್, ದುರ್ಗಾ ವೃತ್ತ ಸೇರಿ ಪ್ರಮುಖ ವೃತ್ತಗಳಲ್ಲಿ ಬಾಲಕ, ಬಾಲಕಿಯರು ಬೈಕ್ ಅಥವಾ ಸ್ಕೂಟಿ ತೆಗೆದುಕೊಂಡು ಓಡಾಡುತ್ತಿರುವ ದೃಶ್ಯಗಳು ಕಂಡು ಬರತೊಡಗಿವೆ. ಇವರನ್ನು ಪೊಲೀಸರು ಕೇಳಿದರೆ ಹಿಟ್ಟಿನ ಗಿರಣಿ, ಬೇರೆ ಮನೆಗಳಿಗೆ ಊಟ ಕೊಡಲು, ಅಜ್ಜ-ಅಮ್ಮನ ಮನೆಗೆ ಹೋಗುವುದು ಸೇರಿ ನಾನಾ ಕಾರಣಗಳನ್ನು ಹೇಳುತ್ತಿದ್ದಾರೆ.

ಪೊಲೀಸರಿಗೆ ತಲೆನೋವು: ನಗರದ ಬಸ್ ನಿಲ್ದಾಣ, ಹಲಗೇರಿ ವೃತ್ತ ಸೇರಿ ಎಲ್ಲೆಡೆ ಚೆಕ್​ಪೋಸ್ಟ್​ಗಳನ್ನು ಅಳವಡಿಸಲಾಗಿದೆ. ಮಕ್ಕಳು ಇಲ್ಲಿಗೆ ಬರುತ್ತಿದ್ದಂತೆ ಪೊಲೀಸರು ಹಿಡಿದು ನಿಲ್ಲಿಸುತ್ತಾರೆ. ಈ ವೇಳೆ ಮಕ್ಕಳು ಗಾಬರಿಗೊಂಡು ಓಡಲು ಯತ್ನಿಸುತ್ತಾರೆ. ಇನ್ನು ಕೆಲವರು ಗೋಳೋ ಎಂದು ಕಣ್ಣೀರು ಹಾಕುತ್ತಿದ್ದಾರೆ. ಕೆಲವರು ಪೊಲೀಸರು ಕೈ ಮಾಡಿದರೂ ಬೈಕ್ ನಿಲ್ಲಿಸದೇ ಹೋಗುತ್ತಾರೆ. ಆದರೆ, ಒತ್ತಾಯ ಪೂರ್ವಕವಾಗಿ ಹಿಡಿಯಲು ಹೋದಾಗ, ಬೈಕ್ ಮೇಲಿಂದ ಬಿದ್ದು ಪ್ರಾಣಹಾನಿಯಂಥ ಘಟನೆ ನಡೆದರೆ ಯಾರು ಜವಾಬ್ದಾರರು ? ಇದು ಪೊಲೀಸರಿಗೆ ಸಮಸ್ಯೆಯಾಗಿ ಪರಿಣಮಿಸಿದೆ.

ನಗರದಲ್ಲಿ ಎಪಿಎಂಸಿ, ತರಕಾರಿ ಮಾರುಕಟ್ಟೆ ಆರಂಭಗೊಂಡಿದ್ದರಿಂದ ಲಾರಿ, ಟಂಟಂ, ಟಾಟಾಏಸ್ ವಾಹನಗಳ ಓಡಾಟ ಹೆಚ್ಚಾಗಿದೆ. ಮಕ್ಕಳು ಬೈಕ್ ತೆಗೆದುಕೊಂಡು ಹೊರಗಡೆ ಬಂದಾಗ ಯಾವುದಾದರೂ ಅಪಘಾತಕ್ಕೀಡಾದರೆ ಪಾಲಕರೇ ಹೊಣೆಗಾರರಾಗಬೇಕಾಗುತ್ತದೆ.

ಅಲ್ಲದೆ, ಜಿಲ್ಲೆಯಲ್ಲಿ ಈವರೆಗೂ ಕರೊನಾ ಪ್ರಕರಣ ಪತ್ತೆಯಾಗಿಲ್ಲ. ಆದರೆ, ಈಗಾಗಲೇ ಹಲವಾರು ಜನರನ್ನು ಹೋಮ್ ಕ್ವಾರಂಟೈನ್ ಮಾಡಲಾಗಿದೆ. ಅನೇಕರ ಆರೋಗ್ಯ ತಪಾಸಣೆ ನಡೆಯುತ್ತಲೇ ಇದೆ. ಯಾವ ಸಮಯದಲ್ಲಿ ಯಾರಿಗೆ ಕರೊನಾ ಪಾಸಿಟಿವ್ ಬರುತ್ತದೆಯೋ ಗೊತ್ತಿಲ್ಲ. ಮಕ್ಕಳು ಬೈಕ್ ತೆಗೆದುಕೊಂಡು ಹೊರಗಡೆ ಬಂದಾಗ ಇಡೀ ನಗರ ಸುತ್ತು ಹಾಕುತ್ತಾರೆ. ಇಂಥ ಸಮಯದಲ್ಲಿ ಯಾರ್ಯಾರು ಎದುರಾಗುತ್ತಾರೆ ಎಂಬುದು ಯಾರಿಗೂ ಗೊತ್ತಿರುವುದಿಲ್ಲ. ಆದ್ದರಿಂದ ಮಕ್ಕಳ ಕೈಗೆ ಬೈಕ್ ಕೊಟ್ಟು ಹೊರಗಡೆ ಕಳುಹಿಸುವ ಮುನ್ನ ಪಾಲಕರು ಎಚ್ಚೆತ್ತುಕೊಳ್ಳಬೇಕಿದೆ.

ಕಾನೂನು ಎಲ್ಲರಿಗೂ ಒಂದೇ. ಬೈಕ್ ತೆಗೆದುಕೊಂಡು ಹೊರ ಬರುವ ಮಕ್ಕಳನ್ನು ಹಿಡಿದು ಬೈಕ್​ಗಳನ್ನು ವಶಪಡಿಸಿಕೊಳ್ಳಬೇಕು. ಮಕ್ಕಳು ಬದಲು ಅವರ ಪಾಲಕರ ಮೇಲೆ ದೂರು ದಾಖಲಿಸಿಕೊಂಡು ಕಾನೂನು ಪ್ರಕಾರ ಕ್ರಮ ಜರುಗಿಸಬೇಕು. ಅಂದಾಗ ವಿನಾಕಾರಣ ಹೊರಗೆ ಬರುವವರಿಗೆ ತಕ್ಕಪಾಠ ಕಲಿಸಿದಂತಾಗುತ್ತದೆ. | ಕೋಟ್ರೇಶ ಎಂ., ಸ್ಥಳೀಯ ನಿವಾಸಿ ಮಕ್ಕಳು ಹೆದರಿಕೊಂಡು ಅಪಘಾತ ಪಡಿಸಿಕೊಂಡರೆ ಕಷ್ಟ ಎಂದು ಇಷ್ಟು ದಿನ ಬೈಕ್, ಸ್ಕೂಟಿ ತೆಗೆದುಕೊಂಡು ಬಂದಾಗ ಬಿಟ್ಟಿದ್ದೇವೆ. ಆದರೆ ಇದನ್ನೇ ಕೆಲವರು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಆದ್ದರಿಂದ ಇನ್ಮುಂದೆ ಮಕ್ಕಳು ಬೈಕ್ ತೆಗೆದುಕೊಂಡು ಬಂದು ಸಿಕ್ಕಿಕೊಂಡಿದ್ದರೆ, ಅವರ ಪಾಲಕರ ವಿರುದ್ಧ ದೂರು ದಾಖಲಿಸಿಕೊಂಡು ಕಾನೂನು ಕ್ರಮ ಜರುಗಿಸಲಾಗುವುದು. | ಪ್ರಭು ಕೆಳಗಿನಮನಿ, ಪಿಎಸ್​ಐ ಶಹರ ಠಾಣೆ ರಾಣೆಬೆನ್ನೂರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net