ಬೇರೆ ಧರ್ಮಕ್ಕೆ ಮತಾಂತರಾದವರಿಗೆ ಮೀಸಲಾತಿ ನೀಡಬೇಡಿ: ವಿಚಾರಣಾ ಆಯೋಗಕ್ಕೆ ಮನವಿ

balkrishan
Published on

ಬೆಂಗಳೂರು:ದಲಿತ ಸಮುದಾಯದಿಂದ ಮುಸ್ಲಿಂ, ಕೆಸ್ತ ಧರ್ಮಕ್ಕೆ ಮತಾಂತರಗೊಂಡವರಿಗೆ ಯಾವುದೇ ಕಾರಣಕ್ಕೂ ಮೀಸಲಾತಿ ಕಲ್ಪಿಸಬಾರದು. ಅವರನ್ನು ದಲಿತರು ಎಂದು ಪರಿಗಣಿಸಬಾರದು ಎಂದು ನ್ಯಾಯಮೂರ್ತಿ ಬಾಲಕೃಷ್ಣನ್​ ವಿಚಾರಣಾ ಆಯೋಗದ ಮುಂದೆ ವಿವಿಧ ದಲಿತಪರ ಸಂಘಟನೆಗಳು ಹಕ್ಕೊತ್ತಾಯ ಮಂಡಿಸಿದವು.

ಪರಿಶಿಷ್ಟ ಜಾತಿಯ ವ್ಯಕ್ತಿಗಳು ಬೇರೆ ಧರ್ಮಗಳಿಗೆ ಮತಾಂತರಗೊಂಡರೆ ಅವರಿಗೆ ಪರಿಶಿಷ್ಟ ಜಾತಿ ಸ್ಥಾನ ನೀಡಬೇಕೇ ಎಂಬುವುದನ್ನು ಪರಿಶೀಲಿಸಲು ಕೇಂದ್ರ ಸರ್ಕಾರವು, ನ್ಯಾ. ಕೆ.ಜಿ.ಬಾಲಕೃಷ್ಣನ್​ ನೇತೃತ್ವದಲ್ಲಿ ವಿಚಾರ ಆಯೋಗ ನೇಮಿಸಿದೆ. ನಿವೃತ್ತ ಐಎಎಸ್​ ಅಧಿಕಾರಿ ಡಾ.ರವೀಂದರ್​ ಕುಮಾರ್​ ಜೈನ್​, ಪ್ರಾಧ್ಯಾಪಕಿ ಸುಷ್ಮಾ ಯಾದವ್​ ಆಯೋಗದ ಸದಸ್ಯರಾಗಿದ್ದಾರೆ. ಈ ಆಯೋಗ ರಾಜ್ಯಕ್ಕೆ ಭೇಟಿ ನೀಡಿ ಮಂಗಳವಾರ ವಸಂತನಗರದ ಅಂಬೇಡ್ಕರ್​ ಭವನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಿ "ಮೀಸಲಾತಿ ಮುಂದುವರಿಕೆ ಬೇಕೆ? ಅಥವಾ ಬೇಡವೇ' ಎಂಬ ಕುರಿತಂತೆ ಜನಾಭಿಪ್ರಾಯ ಸಂಗ್ರಹಿಸಿತು. ವಿವಿಧ ದಲಿತ ಸಂಘಟನೆಗಳು ಆಯೋಗಕ್ಕೆ ಮನವಿ ಪತ್ರ ಸಲ್ಲಿಸಿ ಬೇರೆ ಧರ್ಮಕ್ಕೆ ಮತಾಂತರಗೊಂಡಿರುವವರಿಗೆ ಮೀಸಲಾತಿ ನೀಡಬಾರದು ಎಂದು ಒತ್ತಾಯಿಸಿದವು.

ಅಖಿಲ ಭಾರತ ಬಂಜಾರ ಸಮಿತಿ, ಬೋವಿ ಒಕ್ಕೂಟ, ಮಾದಿಗ ಮೀಸಲಾತಿ ಹೋರಾಟ ಸಮಿತಿ, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ, ಆದಿವಾಸಿ ಸಮುದಾಯ, ಬಡಕಟ್ಟು ಸಮುದಾಯ ಸಮಿತಿ ಹಲವು ದಲಿತ ಸಂಘಟನೆಗಳ ಮುಖಂಡರು ಭಾಗವಹಿಸಿ ಯಾವುದೇ ಕಾರಣಕ್ಕೂ ಹಿಂದೂ ಧರ್ಮದಿಂದ ಮುಸ್ಲಿಂ, ಕ್ರಿಶ್ಟಿಯನ್​ ಧರ್ಮಕ್ಕೆ ಮತಾಂತರ ಗೊಂಡವರಿಗೆ ಮೀಸಲಾತಿ ನೀಡಬಾರದು ಎಂದು ಆಯೋಗಕ್ಕೆ ಮನವಿ ಸಲ್ಲಿಸಿದವು. ಕೋಲಾರ, ಬೆಳಗಾವಿ, ಬೀದರ್​, ಚಿಕ್ಕಮಗಳೂರು, ಮೈಸೂರು, ಬೆಂಗಳೂರು ಸೇರಿ ರಾಜ್ಯದ ವಿವಿಧ ಭಾಗಗಳಿಂದ ದಲಿತ ಸಮುದಾಯದ ಮುಖಂಡರು ಭಾಗವಹಿಸಿದ್ದರು. ಚಿತ್ರದುರ್ಗದ ಮಾದಾರ ಚನ್ನಯ್ಯ ಸ್ವಾಮೀಜಿ, ಬಂಜಾರ ಸಮುದಾಯದ ಗೋಪಾಲ್​ ಮಹಾರಾಜ್​ ಸ್ವಾಮೀಜಿ ಸೇರಿ ಮತ್ತಿತರರಿದ್ದರು.

ಮೀಸಲಾತಿ ನೀಡಬೇಡಿ:

ಕರ್ನಾಟಕ ದಲಿತ ಸಂಘರ್ಷ ಸಮಿತಿ ಮುಖಂಡ ಡಿ.ಜಿ.ಸಾಗರ್​ ಮಾತನಾಡಿ, ಮುಸ್ಲಿಂ, ಕ್ರಿಶ್ಚಿಯನ್​ ಧರ್ಮಕ್ಕೆ ಮತಾಂತರಗೊಂಡ ಪರಿಶಿಷ್ಟರಿಗೆ ಮೀಸಲಾತಿ ಕಲ್ಪಿಸುವುದಕ್ಕೆ ಆಕ್ಷೇಪ ಇಲ್ಲ. ಆದರೆ, ಪರಿಶಿಷ್ಟ ಜಾತಿಗೆ ನಿಗದಿಪಡಿಸಿರುವ ಮೀಸಲಾತಿ ಕೋಟಾದಿಂದ ಕಡಿತಗೊಳಿಸಿ, ದಲಿತ ಕ್ರಿಶ್ಚಿಯನ್​, ದಲಿತ ಕ್ರಿಶ್ಚಿಯನ್​ಗೆ ನೀಡಬಾರದು. ಯಾವ ಧರ್ಮಕ್ಕೆ ಮತಾಂತರ ಗೊಂಡಿದ್ದಾರೆಯೋ ಆ ಧರ್ಮಕ್ಕೆ ನಿಗದಿಪಡಿಸಿದ ಮೀಸಲಾತಿ ಕೋಟಾದಿಂದ ನೀಡಿದರೆ ನಮ್ಮ ಅಭ್ಯಂತರವಿಲ್ಲ ಎಂದರು. ಸಕಲೇಶಪುರ ಕ್ಷೇತ್ರದ ಶಾಸಕ ಸಿಮೆಂಟ್​ ಮಂಜು ಮಾತನಾಡಿ, ಹಿಂದು ಧರ್ಮದಿಂದ ಬೇರೆ ಧರ್ಮಕ್ಕೆ ಮತಾಂತರವಾದವರಿಗೆ ಮೀಸಲಾತಿ ನೀಡುವುದಕ್ಕೆ ನಮ್ಮ ವಿರೋಧವಿದೆ. ಈ ನೆಲೆದ ಮೂಲ ಧರ್ಮಗಳಿಗೆ ಮತಾಂತರವಾದರೆ ಮಾತ್ರ ಮೀಸಲಾತಿ ಮುಂದವರಿಸಬಹುದು ಎಂದು ಅಂಬೇಡ್ಕರ್​ ಅವರೇ ಹೇಳಿದ್ದಾರೆ ಎಂದು ಪ್ರತಿಪಾದಿಸಿದರು.

ಮೀಸಲಾತಿ ಮುಂದುವರಿಸಿ

ದಲಿತ ಸಮುದಾಯದಿಂದ ಮತಾಂತರವಾಗಿರುವ ಸ್ಟೇಫನ್​ ಎಂಬುವವರು ಮಾತನಾಡಿ, ಗೌರವಯುತವಾಗಿ ಬದುಕು ಸಾಗಿಸುವ ನಿಟ್ಟಿನಲ್ಲಿ ನಾವು ಮತಾಂತರವಾಗಿದ್ದೇವೆ. ಅಲ್ಲಿಗೆ ಹೋದ ನಂತರ ನಮ್ಮ ಗೌರವ ಮತ್ತಷ್ಟು ವೃದ್ದಿಯಾಗಿದೆ. ಸಂವಿಧಾನದತ್ತವಾಗಿ ಬಂದಿರುವ ಸವಲತ್ತನ್ನು ಮುಂದವರಿಸಬೇಕೆಂದು ಆಯೋಗಕ್ಕೆ ಮನವಿ ಮಾಡಿದರು. ಹಲವು ಕ್ರಿಶ್ಚಿಯನ್​ ಸಂಘಟನೆಗಳು ಮೀಸಲಾತಿ ಮುಂದುವರಿಕೆಗೆ ವಿನಂತಿ ಮಾಡಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net