

ಬಾಗೇಪಲ್ಲಿ: ರೈತರಿಗೆ ಕಳಪೆ ಬಿತ್ತನೆ ಬೀಜ ಸರಬರಾಜು ಪ್ರಕರಣ ಸಂಬಂಧಿಸಿದಂತೆ ಖಾಸಗಿ ಬೀಜ ಕಂಪನಿಯೊಂದರ ವಿರುದ್ಧ ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದ್ದು, ಪ್ರಕರಣ ಇತ್ಯರ್ಥಗೊಂಡು ರೈತರಿಗೆ ಬೆಳೆ ನಷ್ಟ ಪರಿಹಾರ ಸಂದಾಯವಾಗುವವರೆಗೂ ಆ ಕಂಪನಿಯ ಬಿತ್ತನೆ ಬೀಜ ಸರಬರಾಜಿಗೆ ಜಿಲ್ಲಾಡಳಿತ ಅವಕಾಶ ಕಲ್ಪಿಸಬಾರದು ಎಂಬ ಆಗ್ರಹ ತಾಲೂಕಿನ ರೈತರಿಂದ ಕೇಳಿಬರುತ್ತಿದೆ.
ಪ್ರಕರಣದ ಹಿನ್ನೆಲೆ
2023ನೇ ಸಾಲಿನ ಮುಂಗಾರಿನಲ್ಲಿ ಬಾಗೇಪಲ್ಲಿ ಮತ್ತು ಚೇಳೂರು ತಾಲೂಕು ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರಗಳ ಮೂಲಕ ಮುಸುಕಿನ ಜೋಳದ ಬಿತ್ತನೆ ಬೀಜ ಸರಬರಾಜು ಮಾಡಲಾಗಿದ್ದು, ಬೀಜ ಮೊಳಕೆ ಬಾರದೆ ಭೂಮಿಯಲ್ಲೇ ಕೊಳೆತು, ಲಕ್ಷಾಂತರ ರೂ. ನಷ್ಟ ಸಂಭವಿಸಿದೆ ಎಂದು 2023ರ ಸೆಪ್ಟೆಂಬರ್ 12ರಂದು ಬಾಗೇಪಲ್ಲಿ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಬಳಿ ರೈತರು ಪ್ರತಿಭಟನೆ ನಡೆಸಿ ಬೆಳೆ ನಷ್ಟ ಪರಿಹಾರಕ್ಕೆ ಒತ್ತಾಯಿಸಿ ಕೃಷಿ ಇಲಾಖೆ ಜಿಲ್ಲಾ ಉಪ ನಿರ್ದೇಶಕಿ ಮಂಜುಳಾಗೆ ಮನವಿ ಸಲ್ಲಿಸಿದ್ದರು. ಮನವಿ ಸ್ವೀಕರಿಸಿದ ಜಿಲ್ಲಾ ಉಪ ನಿರ್ದೇಶಕಿ ಮಂಜುಳಾ ಮತ್ತು ಸಹಾಯಕ ಕೃಷಿ ನಿರ್ದೇಶಕ ಪ್ರಕಾಶ್ ನೇತೃತ್ವದಲ್ಲಿ ಕೃಷಿ ವಿಜ್ಞಾನಿಗಳ ತಂಡ ಹಾಗೂ ಸದರಿ ಬಿತ್ತನೆ ಬೀಜ ಕಂಪನಿ ತಂಡ ಅದೇ ಸೆ.22 ರಂದು ತಾಲೂಕಿನ ವಿವಿಧ ಗ್ರಾಮಗಳ ಜಮೀನುಗಳಿಗೆ ಭೇಟಿ ನೀಡಿ ಬೆಳೆ ಸಮೀಕ್ಷೆ ನಡೆಸಿ, ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಬಿತ್ತನೆ ಬೀಜಗಳ ಮಾದರಿಯನ್ನು ಬೆಂಗಳೂರಿನ ಹೆಬ್ಬಾಳ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಪ್ರಯೋಗಾಲಯವು ಸಹ ಬಿತ್ತನೆ ಬೀಜಗಳು ಕಳಪೆಯಾಗಿವೆ ಎಂದು ವರದಿ ನೀಡಿತ್ತು. ಬೆಳೆ ನಷ್ಟಕ್ಕೆ ಕಳಪೆ ಗುಣಮಟ್ಟದ ಬಿತ್ತನೆ ಬೀಜಗಳೇ ಕಾರಣವೆಂದು ಪ್ರಾಥಮಿಕ ಹಂತದಲ್ಲಿ ಕಂಡು ಬಂದಿದ್ದು, ಕಂಪನಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ.
ಸೀಡ್ಸ್ ಏಜೆನ್ಸಿ ಮಾಲೀಕರ ವಿರುದ್ಧವೂ ದೂರು
ಬಾಗೇಪಲ್ಲಿ ಮತ್ತು ಚೇಳೂರು ತಾಲೂಕು ವ್ಯಾಪ್ತಿಯ ರೈತರಿಗೆ ಕಳಪೆ ಗುಣಮಟ್ಟದ ಬಿತ್ತನೆ ಬೀಜ ಸರಬರಾಜು ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಏಜೆನ್ಸಿ ಮಾಲೀಕರಾದ ಬಳ್ಳಾರಿ ಹಾಗೂ ಹಾಗೂ ಬೆಂಗಳೂರಿನ ಇಬ್ಬರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಸಹಾಯಕ ಕೃಷಿ ನಿರ್ದೇಶಕ ಪ್ರಕಾಶ್ ಬಿತ್ತನೆ ಬೀಜ ಅಧಿನಿಯಮ 1966 ಸೆಕ್ಷನ್ 13ರ ಪ್ರಕಾರ ಬಾಗೇಪಲ್ಲಿಯ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದು, ಪ್ರಕರಣ ನ್ಯಾಯಾಲಯದ ಹಂತದಲ್ಲಿದೆ. ನಷ್ಟಕ್ಕೆ ಗುರಿಯಾಗಿರುವ ರೈತರು ಪರಿಹಾರ ಮೊತ್ತಕ್ಕಾಗಿ ಕಾದು ಕುಳಿತಿದ್ದಾರೆ.
ಬಾಗೇಪಲ್ಲಿ ತಾಲೂಕಿನ ರೈತ ಸಂಪರ್ಕ ಕೇಂದ್ರಗಳ ಮೂಲಕ ಕಳಪೆ ಗುಣಮಟ್ಟದ ಬಿತ್ತನೆ ಬೀಜ ಸರಬರಾಜು ಮಾಡಿ ರೈತರಿಗೆ ನಷ್ಟ ಉಂಟುಮಾಡಿರುವ ಕಂಪನಿಯವರು ರೈತರಿಗೆ ನಷ್ಟ ಪರಿಹಾರ ನೀಡಿ ಪ್ರಕರಣ ಖುಲಾಸೆಗೊಳ್ಳುವವರೆಗೂ ಆ ಕಂಪನಿಗೆ ಸಂಬಂಧಿಸಿದ ಯಾವುದೇ ಬಿತ್ತನೆ ಬೀಜಗಳ ವಿತರಣೆಗೆ ಕೃಷಿ ಇಲಾಖೆ ಅಧಿಕಾರಿಗಳು ಜಿಲ್ಲೆಯಲ್ಲಿ ಅವಕಾಶ ಕಲ್ಪಿಸಬಾರದೆಂದು ಈಗಾಗಲೇ ಮನವಿಪತ್ರ ಸಲ್ಲಿಸಿದ್ದೇವೆ. ಮನವಿಗೆ ಸ್ಪಂದಿಸದಿದ್ದರೆ ಹೋರಾಟಕ್ಕೆ ಮುಂದಾಗುತ್ತೇವೆ.
- ಎಚ್.ಎನ್.ಗೋವಿಂದರೆಡ್ಡಿ, ರೈತ ಸಂಘದ ಅಧ್ಯಕ್ಷ, ಬಾಗೇಪಲ್ಲಿ
ಪ್ರಸಕ್ತ ಸಾಲಿನ ಮುಂಗಾರಿನಲ್ಲಿ ರೈತರಿಗೆ ವಿತರಿಸಲು ಸರಬರಾಜಾಗಿರುವ ಎಲ್ಲ ಕಂಪನಿಗಳ ಬಿತ್ತನೆ ಬೀಜಗಳನ್ನು ಹೆಬ್ಬಾಳದ ಪ್ರಯೋಗಾಲಯಕ್ಕೆ ಕಳುಹಿಸಿ ಪರೀಕ್ಷೆಗೆ ಒಳಪಡಿಸಿ ಗುಣಮಟ್ಟದ ಖಾತ್ರಿ ವರದಿ ಬಂದ ನಂತರವಷ್ಟೇ ರೈತ ಸಂಪರ್ಕ ಕೇಂದ್ರಗಳ ಮೂಲಕ ಬೀಜಗಳನ್ನು ವಿತರಿಸಲಾಗುತ್ತಿದೆ. ಈ ಹಿಂದೆ ನಡೆದಂತಹ ಘಟನೆಗಳು ಮರುಕಳಿಸದಂತೆ ಮುನ್ನೆಚ್ಚರಿಕೆ ಅನುಸರಿಸಲಾಗಿದೆ.
- ಲಕ್ಷ್ಮೀ, ಸಹಾಯಕ ಕೃಷಿ ನಿರ್ದೇಶಕರು, ಬಾಗೇಪಲ್ಲಿ