ಸಾಲ ಮಾಡಿ ಮದುವೆ ಆಗಬೇಡಿ

Oplus_16908288
Oplus_16908288
Published on

ನಂಜನಗೂಡು: ಸಾಲ ಮಾಡಿ ಮದುವೆ ಆಗಬೇಡಿ, ಸರಳವಾಗಿ ಮದುವೆ ಆಗುವ ಮೂಲಕ ಎಲ್ಲರಿಗೂ ಮಾದರಿ ಆಗಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜು ಅವರು ಅಭಿಪ್ರಾಯಪಟ್ಟರು.

ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯ ಆವರಣದಲ್ಲಿ ಗುರುವಾರ ದೇವಾಲಯ ಆಗಮಿಕ ನಾಗಚಂದ್ರ ದೀಕ್ಷಿತ್ ಪೌರೋಹಿತ್ಯದಲ್ಲಿ ಜಿಲ್ಲಾಡಳಿತ, ಹಿಂದು ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮದುವೆಗೆ ದುಂದು ವೆಚ್ಚ ಮಾಡಿ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಒಳಗಾಗುತ್ತಿರುವುದನ್ನು ತಪ್ಪಿಸಲು ಆರಂಭಿಸಿರುವ ಯೋಜನೆ ಇದಾಗಿದೆ. ಮಾಂಗಲ್ಯ ಭಾಗ್ಯ ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ. 2020 ರಲ್ಲಿ ಸಪ್ತಪದಿ ಹೆಸರಿನಲ್ಲಿ ಪ್ರಾರಂಭಗೊಂಡ ಯೋಜನೆ ಇಂದು ಮಾಂಗಲ್ಯ ಭಾಗ್ಯ ಯೋಜನೆ ಹೆಸರಿನಲ್ಲಿ ನಡೆಯುತ್ತಿದೆ. 2020ರಲ್ಲಿ ಏಳು ಜೋಡಿ, 2021ರಲ್ಲಿ 61 ಜೋಡಿ, 2023ರಲ್ಲಿ ಏಳು ಜೋಡಿ, 2024ರಲ್ಲಿ ಎಂಟು ಜೋಡಿ, ಈ ವರ್ಷ 24 ಜೋಡಿಯ ಸಾಮೂಹಿಕವಾಗಿ ಸರಳ ವಿವಾಹ ನಡೆದಿದೆ. ಮುಂದಿನ ವರ್ಷ ನೂರಕ್ಕೂ ಹೆಚ್ಚು ಜೋಡಿ ಸರಳವಾಗಿ ಮದುವೆ ಆಗುವಂತೆ ಎಲ್ಲರಿಗೂ ತಿಳಿಸಬೇಕು ಎಂದರು.

ಸ್ವಾಭಿಮಾನಕ್ಕಾಗಿ ಸಾಲ ಮಾಡಿ ಮದುವೆ ಮಾಡಲು ಹೋಗಬಾರದು. ಅದ್ದೂರಿ ಆಡಂಬರದ ಮದುವೆ ಮಾಡಿ ಸಾಲ ಮಾಡಿ ಅದನ್ನು ತೀರಿಸಲು ಕಷ್ಟಪಡುವುದು ಬೇಡ. ಈ ರೀತಿ ಸರಳವಾಗಿ ಮದುವೆ ಆಗುವುದರಿಂದ ಹಣ ಉಳಿತಾಯ ಆಗಿ, ಈ ಹಣವನ್ನು ಬೇರೆ ಕಾರ್ಯಗಳಿಗೆ ಬಳಸಿಕೊಳ್ಳುವಂತೆ ಕರೆ ನೀಡಿದರು.

ತಹಸೀಲ್ದಾರ್ ಶಿವಕುಮಾರ್ ಕಾಸನೂರು, ಶ್ರೀಕಂಠೇಶ್ವರ ದೇವಾಲಯದ ಜಗದೀಶ್‌ಕುಮಾರ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಟಿ.ಕೆ.ಹರೀಶ್, ವೃತ್ತ ನಿರೀಕ್ಷಕ ರವೀಂದ್ರ ಸೇರಿ ಇನ್ನಿತರರು ಇದ್ದರು.

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿಗಳು

ವೆಂಕಟೇಶ ಮತ್ತು ಸಿದ್ದಮ್ಮ, ಕಾಳೇಗೌಡ ಮತ್ತು ಮಂಜುಳಾ, ಪ್ರಮೋದ್ ಮತ್ತು ಪ್ರೀತಿ, ಮಹದೇವ ಪ್ರಸಾದ್ ಮತ್ತು ಭಾಗ್ಯಾ, ಕರಿಬಸಪ್ಪ ಮತ್ತು ಮಮತಾ, ವಸಂತಕುಮಾರ್ ಮತ್ತು ಭೂಮಿಕಾ, ಅನಿಲ್ ಕುಮಾರ್ ಮತ್ತು ಅನುಶೀಲಾ, ಸೋಮಶೇಖರ ಮತ್ತು ದ್ರಾಕ್ಷಾಯಿಣಿ, ಚೆನ್ನಪ್ಪ ಮತ್ತು ದೀಪಿಕಾ, ರಂಗಸ್ವಾಮಿ ಮತ್ತು ಕವಿತಾ, ಸುಪ್ರೀತ್ ಮತ್ತು ಅಪೇಕ್ಷಾ, ರಘು ಮತ್ತು ಲಾವಣ್ಯ, ನಾಗರಾಜು ಮತ್ತು ಅಶ್ವಿನಿ, ಮೂರ್ತಿ ಮತ್ತು ಲಾವಣ್ಯ, ಮಹದೇವಸ್ವಾಮಿ ಮತ್ತು ಸುಧಾ, ಉದಯಕುಮಾರ್ ಮತ್ತು ನಿರ್ಮಲಾ, ಮನುಕುಮಾರ್ ಮತ್ತು ಅರ್ಪಿತಾ, ಚಿನ್ನಸ್ವಾಮಿ ಮತ್ತು ನಂದಿನಿ, ಮಹದೇವಸ್ವಾಮಿ ಮತ್ತು ಲಕ್ಷ್ಮೀ, ಮಹದೇವಸ್ವಾಮಿ ಮತ್ತು ನಂದಿನಿ, ರವಿ ಚಂದ್ರ -ಅಭಿಲಾಷಾ, ಶಿವಕುಮಾರ್-ಮಮತಾ, ದುಗ್ಗೇಶ -ರಕ್ಷಿತಾ, ಕುಮಾರ ಮತ್ತು ಪ್ರೀತಿ ಜೋಡಿ ಸಪ್ತಪದಿ ತುಳಿದರು.

ಮೈಸೂರು ತಾಲೂಕು, ಎಚ್‌ಡಿ ಕೋಟೆ, ಶ್ರೀರಂಗಪಟ್ಟಣ ತಾಲೂಕು, ತಿ.ನರಸೀಪುರ ತಾಲೂಕು, ಕೆ.ಆರ್.ನಗರ ತಾಲೂಕು, ಸರಗೂರು ತಾಲೂಕು, ನಂಜನಗೂಡು ತಾಲೂಕು, ಚಾಮರಾಜನಗರ ತಾಲೂಕುಗಳ ವಧು-ವರರರು ಸರಳ ವಿವಾಹವಾದರು.

ಗಮನ ಸೆಳೆದ ಅಂತರ್ಜಾತಿ, ಅಂಗವಿಕಲ ಜೋಡಿ

ದಾಂಪತ್ಯ ಜೀವನಕ್ಕೆ ಕಾಲಿಟ್ಟ 24 ಜೋಡಿಗಳ ಪೈಕಿ ಹುಣಸೂರು ತಾಲೂಕು ಹರೀನಹಳ್ಳಿ ಗ್ರಾಮದ ವೆಂಕಟೇಶ್-ಮೈಸೂರು ತಾಲೂಕು ಜಯಪುರ ಗ್ರಾಮದ ಸಿದ್ದಮ್ಮ (ವಿಕಲಚೇತನರು) ಹಾಗೂ ರಾಣಿಬೆನ್ನೂರು ತಾಲೂಕಿನ ಗುಡಿಹೊನ್ನತ್ತಿಯ ಕರಿಬಸಪ್ಪ (ಕುರುಬ), ನರಸೀಪುರ ತಾಲೂಕಿನ ಕೋಳಿಮಲ್ಲನಹುಂಡಿಯ ಎಂ.ಮಮತಾ(ಎಸ್‌ಸಿ), ನಂಜನಗೂಡು ನಗರದ ಚಾಮಲಪುರದಹುಂಡಿಯ ಉದಯಕುಮಾರ್ ರಾವ್ (ಮರಾಠಿ) ಹಾಗೂ ನಿರ್ಮಲಾ (ನಾಯಕ) ಅವರು ಅಂತರ್ಜಾತಿ ವಿವಾಹವಾಗುವ ಮೂಲಕ ಗಮನ ಸೆಳೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net