ದಾಖಲೆ ಸಿಗುವ ತನಕ ಗೊಂದಲ ಬೇಡ

4byd1
Published on

ಬ್ಯಾಡಗಿ: ತಾಲೂಕಿನ ಶಿಡೇನೂರು ಬಳಿಯ ಶಿವಾಜಿನಗರ ತಾಂಡಾಕ್ಕೆ ತಹಸೀಲ್ದಾರ್ ರವಿ ಕೊರವರ ಅವರು ಸೋಮವಾರ ಭೇಟಿ ನೀಡಿ ರಸ್ತೆ ಸಮಸ್ಯೆ ಕುರಿತು ಪರಿಶೀಲಿಸಿದರು.

ರಸ್ತೆ ತನ್ನ ಜಾಗದಲ್ಲಿದ್ದು, ಗ್ರಾಮಸ್ಥರಿಗೆ ಓಡಾಡಲು ಅವಕಾಶ ನೀಡುವುದಿಲ್ಲ ಎಂದು ತಾಂಡಾದ ವ್ಯಕ್ತಿಯೊಬ್ಬರು ಜ. 1ರಂದು ಜೆಸಿಬಿ ಮೂಲಕ ಸಿಸಿ ರಸ್ತೆ ಕಿತ್ತು ಹಾಕಿದ್ದರು. ಇದರಿಂದಾಗಿ ತಾಂಡಾ ನಿವಾಸಿಗಳ ಸಂಚಾರಕ್ಕೆ ತೊಂದರೆಯಾಗಿತ್ತು. ಇದರಿಂದ ಆಕ್ರೋಶಗೊಂಡ ನಿವಾಸಿಗಳು ರಸ್ತೆ ಸಮಸ್ಯೆ ಪರಿಹರಿಸಬೇಕು ಎಂದು ಒತ್ತಾಯಿಸಿ ಎರಡು ದಿನ ಪ್ರತಿಭಟನೆ ನಡೆಸಿದ್ದರು.

ಸ್ಥಳಕ್ಕೆ ಪೊಲೀಸ್, ಕಂದಾಯ ಇಲಾಖೆ ಅಧಿಕಾರಿಗಳು, ಪಿಡಿಒ ಭೇಟಿ ನೀಡಿ ಜಾಗದ ಮಾಲೀಕರ ಮನವೊಲಿಸಲು ಯತ್ನಿಸಿ ವಿಫಲರಾಗಿದ್ದರು. ಮರುದಿನ ತಹಸೀಲ್ದಾರ್ ಹಾಗೂ ಪೊಲೀಸರು ಜಾಗದ ಮಾಲೀಕರನ್ನು ಸಂರ್ಪಸಿ ರಸ್ತೆ ಗುಂಡಿ ಮುಚ್ಚಿಸಿ, ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಟ್ಟಿದ್ದರು. ಜಾಗದ ದಾಖಲೆ ಪರಿಶೀಲಿಸಿ ನ್ಯಾಯ ಒದಗಿಸುವ ಭರವಸೆ ನೀಡಿದ್ದರು. ಆದರೆ, ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವವರೆಗೆ ರಸ್ತೆಯಲ್ಲಿ ಸಂಚರಿಸದಿರಲು ನಿರ್ಧರಿಸಿ ರಸ್ತೆಗೆ ಮುಳ್ಳು ಬೇಲಿ ಹಾಕಿದ್ದರು. ರಸ್ತೆ ಪಕ್ಕದ ಹೊಲದ ಮೂಲಕ ಓಡಾಡುತ್ತಿದ್ದರು.

‘ಶಿವಾಜಿನಗರ ತಾಂಡಾ ಜಾಗದ ಹದ್ದುಬಸ್ತು ಗುರುತಿಸಲು ಸೂಚಿಸಿದ್ದು, ಒಂದೆರಡು ದಿನದಲ್ಲಿ ಸ್ಪಷ್ಟ ದಾಖಲೆ ಲಭ್ಯವಾಗಲಿದೆ. ಅಲ್ಲಿಯವರಿಗೂ ಗೊಂದಲ ಬೇಡ’ ಎಂದು ಸ್ಥಳೀಯರನ್ನು ತಹಸೀಲ್ದಾರ್ ಸಮಾಧಾನಪಡಿಸಿ ರಸ್ತೆಗೆ ಹಾಕಿದ್ದ ಮುಳ್ಳು ತೆಗೆಸಿದರು. ಒಂದು ವೇಳೆ ಜಾಗದ ಮಾಲೀಕರಿಗೆ ರಸ್ತೆ ಸೇರಿದ್ದಲ್ಲಿ ಸಮಸ್ಯೆ ಹೇಗೆ ಇತ್ಯರ್ಥಪಡಿಸಬೇಕು ಎಂದು ನಿರ್ಧರಿಸಲಾಗುವುದು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net