ನಾಲೆಗೆ ಚರಂಡಿ ನೀರು ಹರಿಸದಂತೆ ಆಗ್ರಹ

18-pnp 2
Published on

ಪಾಂಡವಪುರ: ಪಟ್ಟಣ ವ್ಯಾಪ್ತಿ ಸೇರಿದಂತೆ ವಿವಿಧೆಡೆ ವಿಶ್ವೇಶ್ವರಯ್ಯ ನಾಲೆಗೆ ಚರಂಡಿ ನೀರು ಹರಿಸುತ್ತಿರುವ ಪರಿಣಾಮ ಕೆಳಭಾಗದ ರೈತರಿಗೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿ ತಾಲೂಕಿನ ಹಿರೇಮರಳಿ, ಕನಗನಮರಡಿ ಹಾಗೂ ಬೇವಿನಕುಪ್ಪೆ ಗ್ರಾಮದ ರೈತರು ಮಂಗಳವಾರ ಪ್ರತಿಭಟನೆ ನಡೆಸಿದರು.


ಪಟ್ಟಣದ ಸುಬ್ರಹ್ಮಣ್ಯ ದೇವಸ್ಥಾನದ ಪಕ್ಕದಲ್ಲಿ ಹರಿಯುವ ವಿಶ್ವೇಶ್ವರಯ್ಯ ನಾಲೆ ಏರಿ ಮೇಲೆ ಜಮಾಯಿಸಿದ ರೈತರು, ಕಾವೇರಿ ನೀರಾವರಿ ನಿಗಮ ಮತ್ತು ಪುರಸಭೆ ಅಧಿಕಾರಿಗಳು ಸಮಸ್ಯೆಗೆ ಪರಿಹಾರ ಕಂಡುಹಿಡಿಯುವಲ್ಲಿ ವಿಫಲರಾಗಿದ್ದಾರೆ. ಪಟ್ಟಣದ ಹೌಸಿಂಗ್‌ಬೋರ್ಡ್ ಕಾಲನಿ, ಶಾಂತಿನಗರ, ಮಹಾಕಾಳೇಶ್ವರಿ ಬಡಾವಣೆ, ಮಹಾತ್ಮಗಾಂಧಿ ನಗರದಿಂದ ಮಲಿನ ನೀರು ಹಾಗೂ ಒಳಚರಂಡಿ ನೀರು ನಾಲೆಗೆ ಸೇರದಂತೆ ಕ್ರಮವಹಿಸಬೇಕೆಂದು ಮನವಿ ಮಾಡಲಾಗಿದೆ. ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಪ್ರತಿ ಬಾರಿ ಮನವಿ ಮಾಡಿದಾಗ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿರುವ ಅಧಿಕಾರಿಗಳು ಕ್ರಮ ವಹಿಸಿಲ್ಲ ಎಂದು ಆರೋಪಿಸಿದರು.


ಬಿಜೆಪಿ ರೈತ ಮೋರ್ಚಾ ಮಾಜಿ ಜಿಲ್ಲಾಧ್ಯಕ್ಷ ಎಚ್.ಎನ್.ಮಂಜುನಾಥ್ ಮಾತನಾಡಿ, ವಿಶ್ವೇಶ್ವರಯ್ಯ ನಾಲೆ ಮೇಲ್ಭಾಗದ ಎಲ್ಲ ಬಡಾವಣೆಗಳ ಮಲೀನ ನೀರನ್ನು ನಾಲೆಗೆ ಬಿಡಲಾಗುತ್ತಿದೆ. ಮಹಾತ್ಮಗಾಂಧಿ ನಗರ, ಹನುಮಂತ ನಗರದ ಬಳಿ ಹಂದಿ ಸಾಕಣೆ ಮಾಡುತ್ತಿದ್ದು ಇದರ ತ್ಯಾಜ್ಯವೂ ನಾಲೆಗೆ ಸೇರುತ್ತಿದೆ. ಇದರಿಂದ ನಾಲೆ ಕೆಳಭಾಗದ ರೈತರು ಮತ್ತು ನಿವಾಸಿಗಳು ನೀರನ್ನು ಬಳಸಲು ಯೋಚಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ನಾಲಾ ಕೆಳಭಾಗದ ಗ್ರಾಮಗಳ ಜನರು ದಿನ ನಿತ್ಯದ ಬಳಕೆಗೆ ನಾಲೆ ನೀರನ್ನು ಬಳಸುತ್ತಿದ್ದು ಇದರಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿಯಲ್ಲಿದ್ದಾರೆ ಎಂದು ದೂರಿದರು.
ಏನೇ ಸಮಸ್ಯೆ ಇದ್ದರೂ ಅದನ್ನು ಅಧಿಕಾರಿಗಳು ನಿಭಾಯಿಸಬೇಕು. ನಮಗೆ ಶುದ್ಧ ನೀರು ಸಿಗಬೇಕು. ಅಧಿಕಾರಿಗಳ ಭರವಸೆಯಂತೆ ಹತ್ತು ದಿನಗಳ ಕಾಲ ಗಡುವು ನೀಡಲಾಗಿದೆ. ಬಳಿಕ ಪಟ್ಟಣದ ಡಾ.ರಾಜ್‌ಕುಮರ್ ವೃತ್ತದಲ್ಲಿ ರಸ್ತೆ ತಡೆ ನಡೆಸಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.


ಮುಖ್ಯಾಧಿಕಾರಿ, ಎಇಇ ನಡುವೆ ವಾಗ್ವಾದ:
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಪುರಸಭೆ ಮುಖ್ಯಾಧಿಕಾರಿ ವೀಣಾ ಮತ್ತು ಕಾವೇರಿ ನೀರಾವರಿ ನಿಗಮದ ಎಇಇ ಜಯರಾಮು ನಡುವೆ ಸಮಸ್ಯೆ ಇತ್ಯರ್ಥಕ್ಕೆ ಸಂಬಂಧಿಸಿದಂತೆ ವಾಗ್ವಾದ ನಡೆಯಿತು. ಪುರಸಭೆ ಮುಖ್ಯಾಧಿಕಾರಿ ವೀಣಾ ಮಾತನಾಡಿ, ನೀರಾವರಿ ಇಲಾಖೆ ಅಧಿಕಾರಿಗಳು ಚರಂಡಿ ನೀರು ನಾಲೆಗೆ ಸೇರದಂತೆ ಬಂದ್ ಮಾಡಿದರೆ ನಾವು ಬೇರೆ ವ್ಯವಸ್ಥೆ ಮಾಡಿಕೊಳ್ಳುತ್ತೇವೆ ಎಂದರು. ಆಗ ಕಾವೇರಿ ನೀರಾವರಿ ನಿಗಮದ ಎಇಇ ಜಯರಾಮು, ಚರಂಡಿಗೂ ನಮಗೂ ಸಂಬಂಧವಿಲ್ಲ. ಪುರಸಭೆಯವರು ನಾಲೆಗೆ ನೀರು ಬಿಡುವಂತಿಲ್ಲ ಎಂದು ಪ್ರತಿವಾದ ನಡೆಸಿದರು.


ಬೇವಿನಕುಪ್ಪೆ ಶಿವರಾಮು, ಉದೇಶ್, ಗ್ರಾಪಂ ಸದಸ್ಯ ಯಶವಂತ, ಡೇರಿ ಅಧ್ಯಕ್ಷ ಚಂದ್ರಶೇಖರ್, ಹಿರೇಮರಳಿ ಎಚ್.ಕೆ.ದೊರೆಸ್ವಾಮಿ, ಜ್ಞಾನೇಶ್, ಪಾರ್ಥ, ಕುಮಾರ, ಚಿಕ್ಕಾಡೆ ಮನು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net