

ಶಿರಸಿ: ಮಾನವನು ವಿವೇಚನೆಯ ಮೂಲಕ ರಾಗ-ದ್ವೇಷಗಳ ವಶವರ್ತಿ ಆಗದಿರುವಂತೆ ಎಚ್ಚರಿಕೆ ವಹಿಸಬೇಕು ಎಂಬುದು ಗೀತೆಯ ಪ್ರಮುಖ ಸಂದೇಶಗಳಲ್ಲೊಂದಾಗಿದೆ ಎಂದು ಸ್ವರ್ಣವಲ್ಲೀ ಮಠದ ಶ್ರೀಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.
ಗೀತಾಭಿಯಾನ ಪ್ರವಚನಮಾಲಿಕೆಯ ಅಂಗವಾಗಿ ಗುರುವಾರ ಪ್ರವಚನ ನೀಡಿದ ಶ್ರೀಗಳು, ತನಗೆ ಇಷ್ಟವಿಲ್ಲದಿದ್ದರೂ, ಬಲಾತ್ಕಾರದಿಂದ ನೂಕಲ್ಪಟ್ಟವನಂತೆ ಮನುಷ್ಯನು ಪಾಪವನ್ನು ಮಾಡುತ್ತಾನೆ. ಅತಿಯಾದ ಕಾಮ ಅಥವಾ ಆಸೆಯೇ ಎಲ್ಲ ಪಾಪಗಳನ್ನೂ ಮಾಡಿಸುವ ಪ್ರಬಲ ಶತ್ರುವಾಗಿದೆ. ಕಾಮವು ಈಡೇರದೇ ಹೋದಾಗ ಅದು ಕ್ರೋಧವಾಗಿ, ದ್ವೇಷವಾಗಿ ಪರಿಣಮಿಸುತ್ತದೆ. ಆದ್ದರಿಂದ ಎಲ್ಲ ಅನರ್ಥಗಳಿಗೂ ಕಾರಣ ಆಸೆ. ಈ ಆಸೆಯೆಂಬ ಅಗ್ನಿಗೆ ಎಷ್ಟೇ ಭೋಗಸಾಮಗ್ರಿಗಳನ್ನು ಒದಗಿಸಿದರೂ ತೃಪ್ತಿಯೆಂಬುದಿಲ್ಲ. ಆಹಾರವನ್ನು ಕೊಟ್ಟಷ್ಟೂ, ಇನ್ನಷ್ಟು ಬೇಕೆನ್ನುವ ಹಸಿವಿನ ದಾಹವುಳ್ಳವನು ಈ ಕಾಮ. ಆದ್ದರಿಂದ ಕಾಮವನ್ನು ನಮ್ಮ ಶತ್ರುವೆಂದು ಪರಿಗಣಿಸಿ, ಅದನ್ನು ಜಯಿಸುವ ಪ್ರಯತ್ನವನ್ನು ಪ್ರತಿಯೊಬ್ಬನೂ ಮಾಡಬೇಕು ಎಂಬುದಾಗಿ ತಿಳಿಸಿದರು.
ಲೋಕದ ವ್ಯವಸ್ಥೆಗೋಸ್ಕರ ಪ್ರತಿಯೊಬ್ಬನೂ ಕರ್ಮಯೋಗವನ್ನು ಅನುಷ್ಠಾನ ಮಾಡಬೇಕು. ಕರ್ಮದ ನಂಟನ್ನು ಕಳೆದುಕೊಂಡಿರುವ ಜ್ಞಾನಿಯೂ ಕೂಡ ಲೋಕದ ಜನರಿಗೆ ಮಾರ್ಗದರ್ಶನ ಮಾಡುವ ದೃಷ್ಟಿಯಿಂದ ಕರ್ಮವನ್ನು ಮಾಡಬೇಕು ಎಂಬುದು ಭಗವಂತನ ಅಭಿಪ್ರಾಯ. ಹಾಗಿದ್ದರೂ ಲೋಕದ ಜನರು ಭಗವಂತನ ಈ ಆಶಯಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಾರೆ. ಜ್ಞಾನಿಯೂ ಸೇರಿದಂತೆ ಪ್ರತಿಯೊಬ್ಬನೂ ತನ್ನ ಸಂಸ್ಕಾರ-ಸ್ವಭಾವಕ್ಕೆ ಅನುಗುಣವಾಗಿಯೇ ವ್ಯವಹರಿಸುತ್ತಾನೆ. ಈ ಸ್ವಭಾವ ಅಥವಾ ತನ್ನ ಪ್ರಕೃತಿಯನ್ನು ಮೀರಿ ಮುನ್ನಡೆಯಲು ತೀವ್ರವಾದ ಪ್ರಯತ್ನ ಅಗತ್ಯ. ಈ ಸಾಧನಾ ಮಾರ್ಗದಲ್ಲಿ ಮುನ್ನಡೆಯುವವನಿಗೆ ಅತಿಯಾದ ರಾಗ-ದ್ವೇಷಗಳೇ ಪ್ರಬಲವಾದ ಪ್ರತಿಬಂಧಕಗಳು, ಶತ್ರುಗಳು ಎಂದರು.