

ಅರಕಲಗೂಡು: ಅನ್ಯ ಧರ್ಮಗಳನ್ನು ಗೌರವಿಸಿ ಹಿಂದು ಧರ್ಮವನ್ನು ಉಳಿಸುವ ಮುಖೇನ ನಮ್ಮ ಸಂಸ್ಕೃತಿ ರಕ್ಷಿಸಬೇಕು ಎಂದು ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟರು.
ಪಟ್ಟಣದ ಶ್ರೀ ಕೋದಂಡರಾಮಸ್ವಾಮಿ ದೇವಾಲಯಕ್ಕೆ ಇತ್ತೀಚೆಗೆ ಭೇಟಿ ನೀಡಿದ್ದ ಅವರು ಆಶೀರ್ವಚನ ನೀಡಿದರು. ಹಿಂದು ಸಮಾಜವನ್ನು ವಿಶ್ವದ ಉಳಿವಿಗಾಗಿ ಸಂರಕ್ಷಿಸುವ ಜವಾಬ್ದಾರಿ ಪ್ರತಿಯೊಬ್ಬ ಹಿಂದುವಿನ ಮೇಲಿದೆ. ಹಾಗೆಂದ ಮಾತ್ರಕ್ಕೆ ಇತರ ಧರ್ಮಗಳನ್ನು ದ್ವೇಷಿಸುವ ಹಾಗೂ ಅವಹೇಳನಗೊಳಿಸುವ ಅಗತ್ಯವಿಲ್ಲ. ಇತರ ಧರ್ಮಗಳನ್ನು ಗೌರವಿಸುತ್ತಲೇ ನಮ್ಮ ಧರ್ಮವನ್ನು ಉಳಿಸಿ ಬೆಳೆಸುವ ಕೆಲಸ ಮಾಡಬೇಕಿದೆ ಎಂದರು.
ಜಾತಿ ಹೆಸರಿನಲ್ಲಿ ಹಿಂದುತ್ವವನ್ನು ಒಡೆದು ಆಳುವ ಪ್ರವೃತ್ತಿ ಸರಿಯಲ್ಲ. ಈ ನಿಟ್ಟಿನಲ್ಲಿ ಹೊಸ ಚಿಂತನೆ ಸಮಾಜದಲ್ಲಿ ಮೂಡಬೇಕಿದೆ. ಒಗ್ಗಟ್ಟಿನಿಂದ ಸಾಗಿ ಹಿರಿಯರು ಹಾಕಿಕೊಟ್ಟ ನಮ್ಮ ಸಂಸ್ಕೃತಿ, ಸಂಸ್ಕಾರಗಳನ್ನು ನಡೆಸಿಕೊಂಡು ಹೋದರೆ ಸಾಕು. ನಮಗೆ ಶ್ರೀರಾಮ ಆರ್ಯ ಪುರುಷ. ಶ್ರೀರಾಮನ ನಿರಂತರ ನಾಮಸ್ಮರಣೆಯಿಂದ ಭವ ಬಂಧನಗಳು ಮಾಯವಾಗಿ ನೆಮ್ಮದಿಯ ಬದುಕು ಬದುಕಲು ಸಾಧ್ಯವಿದೆ ಎಂದು ಹೇಳಿದರು.
ಮುಖಂಡರಾದ ರಾಮಸ್ವಾಮಿ, ರಾಮಕೃಷ್ಣಯ್ಯ, ವೆಂಕಟೇಶ್, ರುಕ್ಮಿಣಿ, ರಶ್ಮಿ ಮಂಜುಗೌಡ, ರಮೇಶ್, ಪ್ರಸನ್ನಕುಮಾರ್, ಹಿರಿಯಣ್ಣಯ್ಯ, ರಘು ಇತರರಿದ್ದರು.