ಡಿಸಿ ಆದೇಶಕ್ಕೆ ಡೋಂಟ್ ಕೇರ್!

21-RNR-01B
Published on

ವಿಜಯವಾಣಿ ಸುದ್ದಿಜಾಲ ರಾಣೆಬೆನ್ನೂರ

ಇಲ್ಲಿಯ ತಹಸೀಲ್ದಾರ್​ಗೆ ಕರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ತಹಸೀಲ್ದಾರ್ ಕಾರ್ಯಾಲಯವನ್ನು ಸೀಲ್​ಡೌನ್ ಮಾಡಿ ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ಜು. 20ರಂದು ಆದೇಶ ಹೊರಡಿಸಿದ್ದಾರೆ. ಆದರೆ, ಜಿಲ್ಲಾಧಿಕಾರಿ ಆದೇಶಕ್ಕೆ ಡೋಂಟ್ ಕೇರ್ ಎಂದಿರುವ ತಹಸೀಲ್ದಾರ್ ಕಚೇರಿ ಸಿಬ್ಬಂದಿಯು ಮಂಗಳವಾರ ಕಚೇರಿ ಆವರಣದಲ್ಲಿ ರಸ್ತೆ ಕಾಮಗಾರಿಗೆ ಚಾಲನೆ ನೀಡುವ ಮೂಲಕ ನಿಯಮ ಉಲ್ಲಂಘನೆ ಮಾಡಿದ್ದಾರೆ.

ಜಿಲ್ಲಾಧಿಕಾರಿ ಹೇಳಿದ್ದೇನು?: ‘ಜು. 19ರಂದು ರಾಣೆಬೆನ್ನೂರ ತಹಸೀಲ್ದಾರ್​ಗೆ ಕರೊನಾ ಪಾಸಿಟಿವ್ ಬಂದಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಆದೇಶದವರೆಗೆ ತಹಸೀಲ್ದಾರ್ ಕಾರ್ಯಾಲಯವನ್ನು ಸೀಲ್​ಡೌನ್ ಮಾಡಬೇಕು. ಸಿಬ್ಬಂದಿಗೆ ರಜೆ ಘೊಷಣೆ ಮಾಡಲಾಗಿದೆ. ತಹಸೀಲ್ದಾರರು 14 ದಿನ ಹೋಮ್ ಕ್ವಾರಂಟೈನ್​ನಲ್ಲಿರಬೇಕು. ಅವರ ಪ್ರಥಮ ಸಂರ್ಪತರ ಗಂಟಲ ದ್ರವ ಪರೀಕ್ಷೆ ನಡೆಸಬೇಕು. ಈ ಅವಧಿಯಲ್ಲಿ ಬ್ಯಾಡಗಿ ತಹಸೀಲ್ದಾರ್ ಶರಣಮ್ಮ ಕಾರಿ ಅವರನ್ನು ರಾಣೆಬೆನ್ನೂರಿನ ಪ್ರಭಾರ ತಹಸೀಲ್ದಾರರನ್ನಾಗಿ ನೇಮಕ ಮಾಡಲಾಗಿದೆ. ಅವರು ನಿತ್ಯವೂ ಮಧ್ಯಾಹ್ನ 3 ಗಂಟೆಯಿಂದ ರಾಣೆಬೆನ್ನೂರ ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕರ ಅಹವಾಲು ಹಾಗೂ ಕುಂದುಕೊರತೆ ಸ್ವೀಕರಿಸಬೇಕು’ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ಸೋಮವಾರ ಆದೇಶ ಹೊರಡಿಸಿದ್ದಾರೆ.

ನಿಯಮ ಉಲ್ಲಂಘನೆ: ಸೀಲ್​ಡೌನ್ ಪ್ರದೇಶದಲ್ಲಿ ಯಾರೂ ಓಡಾಡುವಂತಿಲ್ಲ. ಈ ಪ್ರದೇಶಕ್ಕೆ ನಾಮಫಲಕ ಅಳವಡಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು. ಈ ಬಗ್ಗೆ ಜನತೆಗೆ ತಿಳಿ ಹೇಳಬೇಕಾದ ಅಧಿಕಾರಿಗಳು ಇದೀಗ ನಿಯಮ ಉಲ್ಲಂಘಿಸಿದ್ದಾರೆ. ತಹಸೀಲ್ದಾರ್ ಕಚೇರಿಗೆ ಬೀಗ ಹಾಕಿರುವುದನ್ನು ಹೊರತುಪಡಿಸಿದರೆ ಸೀಲ್​ಡೌನ್ ಬಗ್ಗೆ ಯಾವುದೇ ಕ್ರಮ ಜರುಗಿಸಿಲ್ಲ.

ಮುಖ್ಯ ಗೇಟ್ ತೆರೆದುಕೊಂಡಿದ್ದು ಸೀಲ್​ಡೌನ್ ಆಗಿರುವ ಬಗ್ಗೆ ಮಾಹಿತಿ ಇಲ್ಲದ ಜನತೆ ಗೇಟ್ ಮೂಲಕ ಒಳಗಡೆ ಹೋಗಿ ತಹಸೀಲ್ದಾರ್ ಕಾರ್ಯಾಲಯಕ್ಕೆ ಬೀಗ ಹಾಕಿರುವುದನ್ನು ನೋಡಿ ವಾಪಸ್ ಬರುತ್ತಿದ್ದಾರೆ. ತಹಸೀಲ್ದಾರ್ ಕಚೇರಿಯ ನೌಕರನೊಬ್ಬ ಕಚೇರಿ ಮುಂದೆ ರಸ್ತೆ ಕಾಮಗಾರಿ ಮಾಡಿಸುತ್ತಿದ್ದು, ಒಳಗಡೆ ಬರುವ ಜನತೆ ಅವರನ್ನು ವಿಚಾರಿಸುತ್ತಿದ್ದಾರೆ. ಅವರು ‘ತಹಸೀಲ್ದಾರ್​ಗೆ ಕರೊನಾ ಬಂದಿದೆ’ ಎಂದು ಹೇಳಿದ ಕೂಡಲೆ ಗಾಬರಿಯಿಂದ ಜನತೆ ಹೊರಬರುತ್ತಿದ್ದಾರೆ.

ರಸ್ತೆ ಕೆಲಸ ಮಾಡುತ್ತಿರುವವರಲ್ಲಿ ಕೆಲವರು ಮಾಸ್ಕ್ ಕೂಡ ಧರಿಸಿಲ್ಲ. ಗುಂಪು ಕಟ್ಟಿಕೊಂಡು ಕೆಲಸ ಮಾಡುತ್ತಿದ್ದಾರೆ. ಇತರರಿಗೆ ಬುದ್ಧಿ ಹೇಳಬೇಕಾದ ತಹಸೀಲ್ದಾರ್ ಕಾರ್ಯಾಲಯದವರೇ ಈ ರೀತಿ ನಿಯಮ ಉಲ್ಲಂಘಿಸಿದರೆ ಇನ್ನು ಸಾರ್ವಜನಿಕರ ಪಾಡೇನು ಅನ್ನುವಂತಾಗಿದೆ. ಜಿಲ್ಲಾಧಿಕಾರಿ ಆದೇಶಕ್ಕೆ ಕಿಮ್ಮತ್ತು ನೀಡದ ತಹಸೀಲ್ದಾರ್ ಕಚೇರಿ ಸಿಬ್ಬಂದಿ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಜನತೆ ಆಗ್ರಹಿಸಿದ್ದಾರೆ.

ರಾಣೆಬೆನ್ನೂರ ತಹಸೀಲ್ದಾರ್ ಕಾರ್ಯಾಲಯವನ್ನು ಸೀಲ್​ಡೌನ್ ಮಾಡಿದ್ದರಿಂದ ಯಾವುದೇ ಕೆಲಸ ಮಾಡಬಾರದು. ಜನತೆಯನ್ನು ಯಾವ ಕಾರಣಕ್ಕೂ ಒಳಗಡೆ ಬಿಡಬಾರದು. ಆದರೆ, ಅಲ್ಲಿ ಯಾವ ರಸ್ತೆ ಕಾಮಗಾರಿ ನಡೆಯುತ್ತಿದೆ ಎಂದು ಅಲ್ಲಿನ ಸಿಬ್ಬಂದಿ ನಮ್ಮ ಗಮನಕ್ಕೂ ತಂದಿಲ್ಲ. ಕೂಡಲೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತೇನೆ. ಕಾಮಗಾರಿಯನ್ನು ತಾತ್ಕಾಲಿಕವಾಗಿ ತಡೆದು, ಸೀಲ್​ಡೌನ್ ಮಾಡಿದ ಬಗ್ಗೆ ನಾಮಫಲಕ ಹಾಕಿಸಲಾಗುವುದು. | ಶರಣಮ್ಮ ಕಾರಿ, ಪ್ರಭಾರ ತಹಸೀಲ್ದಾರ್ ರಾಣೆಬೆನ್ನೂರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net