ಇ-ಸ್ವತ್ತು ವಿತರಣೆಗೆ ಕಾಡಿಸಬೇಡಿ

1
ಗೌರಿಬಿದನೂರು ನಗರಸಭೆಯಲ್ಲಿ ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಅವರು ಫಲಾನುಭವಿಗಳಿಗೆ ಇ ಸ್ವತ್ತು ವಿತರಣೆ ಮಾಡಿದರು. ನಗರಸಭೆ ಪೌರಾಯುಕ್ತೆ ಗೀತಾ, ಅಧ್ಯಕ್ಷ ಲಕ್ಷ್ಮೀನಾರಾಯಣ, ಉಪಾಧ್ಯಕ್ಷ ಫರೀದ್ ಇತರರು ಇದ್ದರು.
Published on

ಅಧಿಕಾರಿಗಳಿಗೆ ಶಾಸಕ ಕೆ.ಎಚ್.ಪುಟ್ಟಸ್ವಾಮಿ ಗೌಡ ಸೂಚನೆ - ಮಧ್ಯವರ್ತಿಗಳ ಉತ್ತೇಜಿಸದಿರಿ

ಗೌರಿಬಿದನೂರು : ಇ-ಸ್ವತ್ತು ವಿತರಣೆ ವಿಚಾರದಲ್ಲಿ ಜನರನ್ನು ಕಾಡಿಸಬಾರದು. ಮಧ್ಯವರ್ತಿಗಳಿಗೆ ಉತ್ತೇಜನ ನೀಡಬಾರದು ಎಂದು ಶಾಸಕ ಕೆ.ಎಚ್. ಪುಟ್ಟಸ್ವಾಮಿ ಗೌಡ ಹೇಳಿದರು.

ನಗರಸಭೆಯಲ್ಲಿ ಸೋಮವಾರ 103 ಫಲಾನುಭವಿಗಳಿಗೆ ಇ-ಸ್ವತ್ತು ವಿತರಣೆ ಮಾಡಿ ಮಾತನಾಡಿ, ಆಸ್ತಿ ಮಾರಾಟ, ಖರೀದಿ, ಬ್ಯಾಂಕ್ ಸಾಲ ಇನ್ನಿತರ ಉದ್ದೇಶಗಳಿಗೆ ಇ-ಸ್ವತ್ತು ಸಲ್ಲಿಕೆ ಕಡ್ಡಾಯವಾಗಿದೆ. ಜನರಿಗೆ ತೊಂದರೆಯಾಗುತ್ತಿರುವುದನ್ನು ತಪ್ಪಿಸುವ ಉದ್ದೇಶದಿಂದ ಸರ್ಕಾರ ಜನರ ಮನೆ ಬಾಗಿಲಿಗೆ ಇ-ಸ್ವತ್ತು ವಿತರಣೆ ಮಾಡುವ ಕಾರ್ಯಕ್ರಮವನ್ನು ಜಾರಿಗೊಳಿಸಿದೆ. ಅಧಿಕಾರಿಗಳು ಹಾಗೂ ಸಿಬ್ಬಂದಿ ಸರ್ಕಾರದ ಉದ್ದೇಶವನ್ನು ಅರ್ಥ ಮಾಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಜನರನ್ನು ಪದೇಪದೆ ಕಚೇರಿಗೆ ಅಲೆಸುವ ಕೆಲಸ ಮಾಡಬಾರದು. ಕಚೇರಿಗಳಲ್ಲಿ ಮಧ್ಯವರ್ತಿಗಳಿಗೆ ಅವಕಾಶ ನೀಡಬಾರದು ಎಂದರು.

ನಗರಸಭೆ ಪೌರಾಯುಕ್ತೆ ಡಿ.ಎಂ.ಗೀತಾ ಮಾತನಾಡಿ, ಕೆಲವು ಬಾರಿ ತಾಂತ್ರಿಕ ದೋಷಗಳ ಕಾರಣಕ್ಕೆ ಇ-ಸ್ವತ್ತು ವಿತರಣೆಯಲ್ಲಿ ತೊಂದರೆಯಾಗುತ್ತದೆ. ಈಗ ಬಹುತೇಕ ಸಮಸ್ಯೆಗಳು ಬಗೆಹರಿದಿದ್ದು, ಆಂದೋಲನದ ರೂಪದಲ್ಲಿ ಪ್ರತಿ ವಾರದ ಒಂದು ದಿನ ಇ ಸ್ವತ್ತು ವಿತರಣೆ ಕಾರ್ಯ ನಡೆಸಲಾಗುತ್ತಿದೆ.

ಯಾವುದೇ ರೀತಿಯ ದೂರುಗಳಿದ್ದಲ್ಲಿ ನೇರವಾಗಿ ತಮ್ಮನ್ನು ಸಂಪರ್ಕಿಸಬಹುದು ಎಂದರು. ನಗರಸಭೆ ಅಧ್ಯಕ್ಷ ಲಕ್ಷ್ಮೀನಾರಾಯಣ, ಉಪಾಧ್ಯಕ್ಷ ಫರೀದ್, ಅಧಿಕಾರಿಗಳಾದ ಹೇಮಚಂದ್ರ, ಎಂ.ಸಿ.ನಾರಾಯಣ್, ಶಿವಶಂಕರ್ ಹಾಗೂ ನಗರಸಭೆ ಸದಸ್ಯರು ಇದ್ದರು.

ನಗರಸಭೆಯಲ್ಲಿ ಬಡವರಿಗೆ ಉಚಿತವಾಗಿ ನೀಡಲಾಗುವ ಇ-ಸ್ವತ್ತು ದಾಖಲೆಯನ್ನು ಪಡೆಯಲು ಮಧ್ಯವರ್ತಿಗಳಿಂದ ಹಣಕ್ಕೆ ಬೇಡಿಕೆ ಇಟ್ಟು, ಸಾರ್ವಜನಿಕರಿಗೆ ತೊಂದರೆ ನೀಡಿದರೆ ಸೂಕ್ತ ಕ್ರಮ ಜರುಗಿಸಲಾಗುವುದು. -ಕೆ.ಎಚ್.ಪುಟ್ಟಸ್ವಾಮಿಗೌಡ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net