ಮಫ್ತಿ ಪೊಲೀಸರಿಗೆ ಟಿಕೆಟ್ ಕೇಳಬೇಡಿ

police mar 20
Published on

ಬೆಂಗಳೂರು: ಬಿಎಂಟಿಸಿ ಬಸ್​ಗಳಲ್ಲಿ ಪ್ರಯಾಣಿಸುವಾಗ ಟಿಕೆಟ್ ಖರೀದಿ ಸುವ ವಿಚಾರಕ್ಕೆ ಪೊಲೀಸರು ಅನುಭವಿಸುವ ಕಿರಿಕಿರಿ ಇನ್ಮುಂದೆ ದೂರಾಗಲಿದೆ. ಮಫ್ತಿಯಲ್ಲಿ ಪ್ರಯಾಣಿಸುವ ಸಿಬ್ಬಂದಿಗೆ ಟಿಕೆಟ್ ಖರೀದಿಸುವಂತೆ ಒತ್ತಾಯಿಸಬಾರದು ಎಂದು ಎಲ್ಲ ಚಾಲಕ ಹಾಗೂ ನಿರ್ವಾಹಕರಿಗೆ ಸೂಚಿಸಿ ಅಧಿಕೃತ ಸುತ್ತೋಲೆ ಹೊರಡಿಸುವಂತೆ ಬಿಎಂಟಿಸಿಗೆ ಸಿಎಂ ಬಿ.ಎಸ್. ಯಡಿಯೂರಪ್ಪ ಆದೇಶಿಸಿದ್ದಾರೆ.

ಪೊಲೀಸರ ಉಚಿತ ಪ್ರಯಾಣಕ್ಕಾಗಿ ಗೃಹ ಇಲಾಖೆ, ಬಿಎಂಟಿಸಿಗೆ ವರ್ಷಕ್ಕೆ 39 ಲಕ್ಷ ರೂ. ಪಾವತಿಸುತ್ತದೆ. ಇದಲ್ಲದೆ ಪೊಲೀಸರಿಗೆ ತಿಂಗಳ ಬಸ್ ಪಾಸ್ ಕೂಡ ನೀಡಲಾಗುತ್ತದೆ. ಅದಕ್ಕೂ ಪ್ರತ್ಯೇಕವಾಗಿ ಹಣ ಕಟ್ಟಲಾಗುತ್ತಿದೆ. ಆದರೆ, ಸಮವಸ್ತ್ರ ಧರಿಸಿ ಪ್ರಯಾಣಿಸುವ ಪೊಲೀಸ್ ಸಿಬ್ಬಂದಿ ಬಳಿ ನಿರ್ವಾಹಕರು ಟಿಕೆಟ್ ಕೇಳುವುದಿಲ್ಲ. ಮಫ್ತಿಯಲ್ಲಿ ಬಂದರೆ ಟಿಕೆಟ್ ಪಡೆಯುವಂತೆ ಪಟ್ಟು ಹಿಡಿಯುತ್ತಾರೆ. ಪೊಲೀಸ್ ಎಂದೇಳಿ ಗುರುತಿನಚೀಟಿ ತೋರಿಸಿದರೂ ಉಚಿತ ಪ್ರಯಾಣಕ್ಕೆ ಅವಕಾಶ ನಿರಾಕರಿಸುತ್ತಾರೆ.

ಈ ಬಗ್ಗೆ ಪೊಲೀಸರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಮಫ್ತಿ ಯಲ್ಲಿದ್ದರೂ ಗುರುತಿನಚೀಟಿ ತೋರಿಸಿದರೆ ಪ್ರಯಾಣಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಸಿಎಂ ಆದೇಶದಲ್ಲಿ ತಿಳಿಸಿದ್ದಾರೆ. ಉಚಿತ ಬಸ್ ಪ್ರಯಾಣದ ಸೌಲಭ್ಯ ಸಮವಸ್ತ್ರ ಧರಿಸಿದ್ದವರಿಗೆ ಮಾತ್ರ ಸಿಗುತ್ತಿದ್ದು, ಇತರರಿಗೆ ಸಿಗುತ್ತಿಲ್ಲ. ಸಚಿವರ ಅಂಗರಕ್ಷಕರು, ಗುಪ್ತದಳ, ಟಪಾಲು ಕರ್ತವ್ಯದ ಮೇಲೆ ಬರುವವರು ಸೇರಿ ಇನ್ನಿತರ ಸಿಬ್ಬಂದಿ ಮಫ್ತಿಯಲ್ಲೇ ಓಡಾಡುವುದು ಅನಿವಾರ್ಯ. ಆದ್ದರಿಂದ ಕರ್ತವ್ಯದ ಮೇಲಿರುವ ಅಧಿಕಾರಿ ಮತ್ತು ಸಿಬ್ಬಂದಿ ಪೊಲೀಸ್ ಇಲಾಖೆಯ ಗುರುತಿನಚೀಟಿ ತೋರಿಸಿದರೆ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡುವಂತೆ ಪತ್ರದಲ್ಲಿ ತಿಳಿಸಿದ್ದಾರೆ.

ಡಿಜಿಪಿ ಪತ್ರವನ್ನೂ ಪರಿಗಣಿಸಿರಲಿಲ್ಲ: ಬಿಎಂಟಿಸಿ ನಿಗದಿಪಡಿಸಿರುವ ಬಸ್ ದರದ ವೆಚ್ಚವನ್ನು ಗೃಹ ಇಲಾಖೆ ಪ್ರತಿವರ್ಷ ಶೇ.10 ಹೆಚ್ಚುವರಿಯಾಗಿ ಸಂದಾಯ ಮಾಡುತ್ತಿದೆ. ಸಮವಸ್ತ್ರ ಧರಿಸದೆ ಕರ್ತವ್ಯಕ್ಕೆ ಹಾಜರಾಗುವ ಸಿಬ್ಬಂದಿಗೆ ಪ್ರಯಾಣಿಸಲು ಅವಕಾಶ ನೀಡದಿರುವ

ಕಾರಣ ತೊಂದರೆಯಾಗುತ್ತಿದೆ. ಹೀಗಾಗಿ ಸಮವಸ್ತ್ರ ಧರಿಸದಿದ್ದರೂ ಗುರುತಿನಚೀಟಿ ತೋರಿಸುವ ಅಧಿಕಾರಿ ಮತ್ತು ಸಿಬ್ಬಂದಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡುವಂತೆ ಈ ಹಿಂದೆ ಡಿಜಿಪಿಯಾಗಿದ್ದ ಆರ್.ಕೆ. ದತ್ತ, ಬಿಎಂಟಿಸಿ ಎಂಡಿಗೆ ಪತ್ರ ಬರೆದಿದ್ದರು. ಆದರೂ ಡಿಜಿಪಿ ಪತ್ರವನ್ನು ಬಿಎಂಟಿಸಿ ಪರಿಗಣಿಸಿರಲಿಲ್ಲ ಎನ್ನಲಾಗಿದೆ.

ಬೇರೆ ಜಿಲ್ಲೆಗಳಿಂದ ಬರುವವರಿಗೂ ಕಿರಿಕ್

ರಾಜ್ಯದ ವಿವಿಧ ಜಿಲ್ಲೆಗಳಿಂದ ಟಪಾಲ್ ಕರ್ತವ್ಯದ ಮೇಲೆ ಸಿಬ್ಬಂದಿ ಹಾಗೂ ಅಧಿಕಾರಿಗಳು ಪ್ರತಿನಿತ್ಯ ಬೆಂಗಳೂರಿಗೆ ಬರುತ್ತಾರೆ. ಬಿಎಂಟಿಸಿ ಬಸ್​ನಲ್ಲಿ ಪ್ರಯಾಣಿಸುವಾಗ ಐಡಿ ಕಾರ್ಡ್ ತೋರಿಸಿದರೂ ನೀವು ಬೆಂಗಳೂರಿನವರಲ್ಲ, ಹೀಗಾಗಿ ಕಡ್ಡಾಯವಾಗಿ ಟಿಕೆಟ್ ಖರೀದಿಸಬೇಕು ಎಂದು ಬಿಎಂಟಿಸಿ ನಿರ್ವಾಹಕರು ತಾಕೀತು ಮಾಡುತ್ತಾರೆ. ಅನ್ಯ ದಾರಿಯಿಲ್ಲದೆ ಸಿಬ್ಬಂದಿ ತಮ್ಮ ಸ್ವಂತ ಹಣದಲ್ಲಿ ಟಿಕೆಟ್ ಖರೀದಿಸಬೇಕಾಗುತ್ತದೆ ಎಂದು ಪೊಲೀಸರು ಅಲವತ್ತುಕೊಳ್ಳುತ್ತಾರೆ.

ಸಾದಾ ಬಟ್ಟೆಯಲ್ಲಿದ್ದರೆ ಪೊಲೀಸರು ಯಾರು, ಸಾರ್ವಜನಿಕರು ಯಾರು ಎಂಬುದು ಗೊತ್ತಾಗುವುದಿಲ್ಲ. ಅಲ್ಲದೆ ಖಾಕಿ ಬಟ್ಟೆ ಇಲ್ಲದಿದ್ದರೆ ಕರ್ತವ್ಯದ ಮೇಲಿದ್ದಾರೆ ಎಂಬುದೂ ತಿಳಿಯುವುದಿಲ್ಲ. ಆದ್ದರಿಂದ ಈ ಗೊಂದಲಗಳ ಬಗ್ಗೆಯೂ ಚರ್ಚೆ ಆಗಬೇಕು. | ಬಿಎಂಟಿಸಿ ಅಧಿಕಾರಿಗಳು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net