More

    ಮಹಿಳಾ ದಿನಾಚರಣೆ ವಿಶೇಷ; ರೈಲಿನಲ್ಲಿ ಸ್ತ್ರೀ ಕಾಳಜಿ-ಕಾರುಬಾರು

    ಹುಬ್ಬಳ್ಳಿ: ಆ ರೈಲಿಗೆ ಮಹಿಳೆಯರೇ ಚಾಲಕಿಯರು. ಟಿಕೆಟ್ ಕಲೆಕ್ಟರ್​ಗಳೂ ಅವರೇ. ಪೊಲೀಸರೂ ಅವರೇ. ಇಡೀ ರೈಲಿನಲ್ಲಿ ಪುರುಷ ಸಿಬ್ಬಂದಿಯೇ ಇರಲಿಲ್ಲ!

    ಇದು ಕಂಡುಬಂದಿದ್ದು ಸೊಲ್ಲಾಪುರ-ಧಾರವಾಡ ರೈಲ್ವೆಯ ಹುಬ್ಬಳ್ಳಿಯಿಂದ ಧಾರವಾಡವರೆಗಿನ ಪ್ರಯಾಣದಲ್ಲಿ.

    ಮಹಿಳಾ ದಿನಾಚರಣೆ ಪ್ರಯುಕ್ತ ನೈಋತ್ಯ ರೈಲ್ವೆಯವರು ಒಂದು ರೈಲನ್ನು ಪೂರ್ಣವಾಗಿ ಮಹಿಳಾ ಉದ್ಯೋಗಿಗಳೇ ನಿಭಾಯಿಸಲು ಅನುವು ಮಾಡಿಕೊಟ್ಟಿದ್ದರು.

    ಸೊಲ್ಲಾಪುರದಿಂದ ಬಂದು ಧಾರವಾಡಕ್ಕೆ ಹೊರಡುವ ರೈಲಿಗೆ ಹುಬ್ಬಳ್ಳಿ ನಿಲ್ದಾಣದಲ್ಲಿ ನೈಋತ್ಯ ರೈಲ್ವೆ ಮಹಾಪ್ರಬಂಧಕ ಅಜಯಕುಮಾರ ಸಿಂಗ್, ನೈಋತ್ಯ ರೈಲ್ವೆ ಕೇಂದ್ರ ಸ್ಥಾನದ ಮಹಿಳಾ ಸಂಘದ ಅಧ್ಯಕ್ಷೆ ಸುಜಾತಾ ಅಜಯಕುಮಾರ ಸಿಂಗ್, ವಿಭಾಗೀಯ ಪ್ರಬಂಧಕ ಅರವಿಂದ ಮಾಲಖೇಡೆ ಹಸಿರು ನಿಶಾನೆ ತೋರಿಸಿದರು. ಮಹಿಳಾ ಲೋಕೋಪೈಲಟ್​ಗಳು ಅದಕ್ಕೆ ಸ್ಪಂದಿಸಿ ಮುಗುಳುನಗುತ್ತಲೇ ರೈಲನ್ನು ಚಾಲನೆ ಮಾಡಿಕೊಂಡು ಹೋದರು. ಟಿಕೆಟ್ ಪರೀಕ್ಷಕರು, ಗಾರ್ಡ್, ಆರ್​ಪಿಎಫ್ ಸಿಬ್ಬಂದಿ ಸೇರಿ ಎಲ್ಲ ಜವಾಬ್ದಾರಿಗಳನ್ನೂ ಮಹಿಳಾ ಉದ್ಯೋಗಿಗಳೇ ಸವ ುರ್ಥವಾಗಿ ನಿಭಾಯಿಸಿದರು.

    ನಿಲ್ದಾಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅಜಯಕುಮಾರ ಸಿಂಗ್ ಮಹಿಳಾ ಉದ್ಯೋಗಿಗಳನ್ನು ಗೌರವಿಸಿ ಶುಭ ಕೋರಿದರು. ಬಳಿಕ ಮಾತನಾಡಿ, ಮಹಿಳೆಯರು ಎಲ್ಲ ಅವಕಾಶಗಳನ್ನೂ ಸದ್ಬಳಕೆ ಮಾಡಿಕೊಂಡು, ಪುರುಷರಿಗೆ ಸಮನಾಗಿ ಕಾರ್ಯದಕ್ಷತೆ ತೋರುತ್ತಿದ್ದಾರೆ. ನೈಋತ್ಯ ರೈಲ್ವೆಯ ವಿವಿಧ ವಿಭಾಗಗಳಲ್ಲಿ ಇಂದು ಮಹಿಳಾ ದಿನಾಚರಣೆ ಮೂಲಕ ಮಹಿಳೆಯರ ಕೊಡುಗೆಗಳನ್ನು ಸ್ಮರಿಸಲಾಗುತ್ತಿದೆ. ಲಿಂಗ ಅಸಮಾನತೆ ತೊಡೆದುಹಾಕುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದರು.

    ಅರವಿಂದ ಮಾಲಖೇಡೆ ಮಾತನಾಡಿ, ಹುಬ್ಬಳ್ಳಿ ವಿಭಾಗವು ಮಹಿಳಾ ದಿನಾಚರಣೆ ಪ್ರಯುಕ್ತ ಮಾ.1ರಿಂದ 10ರವರೆಗೆ ಅಭಿಯಾನ ಹಮ್ಮಿಕೊಂಡಿದ್ದು ವಿವಿಧ ಚಟುವಟಿಕೆ ನಡೆಸಲಾಗುತ್ತಿದೆ. ಮಹಿಳೆಯರಿಗೆ ಆತ್ಮರಕ್ಷಣೆ ತಂತ್ರಗಳನ್ನು ಕಲಿಸಿಕೊಡುವ ಕಾರ್ಯಾಗಾರವನ್ನೂ ನಡೆಸಲಾಗಿದೆ ಎಂದು ವಿವರಿಸಿದರು.

    ಹೆಚ್ಚುವರಿ ಮಹಾಪ್ರಬಂಧಕ ಪಿ.ಕೆ.ಮಿಶ್ರಾ ಇತರ ಅಧಿಕಾರಿಗಳು, ಹುಬ್ಬಳ್ಳಿ ವಿಭಾಗದ ಮಹಿಳಾ ಸಂಘಟನೆ ಅಧ್ಯಕ್ಷೆ ಮೀನಾ ಗಂಧೆ ಮೊದಲಾದವರು ಇದ್ದರು. ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಸ್ಟೇಷನ್ ಮಾಸ್ಟರ್, ಮುಂಗಡ ಟಿಕೆಟ್ ಕೌಂಟರ್, ಭದ್ರತಾ ವಿಭಾಗ ಮೊದಲಾದವುಗಳಲ್ಲಿ ಮಹಿಳಾ ಉದ್ಯೋಗಿಗಳ ನೇತೃತ್ವದಲ್ಲೇ ಕರ್ತವ್ಯ ನಿರ್ವಹಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts